ಆನೇಕಲ್: ಪುರಸಭೆ ಸದಸ್ಯನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರೌಡಿ ಶೀಟರ್ ವೊಬ್ಬನ ಕಾಲಿಗೆ ಗುಂಡು ಹಾರಿಸಿ ಪೊಲೀಸರು ಬಂಧಿಸಿದ್ದಾರೆ.
ರೌಡಿ ಶೀಟರ್ ಕಾರ್ತಿಕ್ ಅಲಿಯಾಸ್ ಜೆಕೆ ಬಂಧಿತ ಕೊಲೆ ಆರೋಪಿಯಾಗಿದ್ದಾನೆ. ಆನೇಕಲ್ ತಾಲ್ಲೂಕಿನ ಮೈಸೂರಮ್ಮನ ದೊಡ್ಡಿ ಬಳಿ ಫೈರಿಂಗ್ ನಡೆದಿದೆ. ಆನೇಕಲ್ ಭಾಗದ ಕುಖ್ಯಾತ ರೌಡಿ ಶೀಟರ್ ಆಗಿರುವ ಜೆಕೆ, ಮೈಸೂರಮ್ಮನ ದೊಡ್ಡಿಯಲ್ಲಿ ಅವಿತು ಕುಳಿತಿದ್ದ. ಪೊಲೀಸರು ಖಚಿತ ಮಾಹಿತಿ ಮೇರೆಗೆ ಆರೋಪಿ ಬಂಧನಕ್ಕೆ ತೆರಳಿದ್ದರು. ಸೆರೆಯಾಗುವಂತೆ ಆದೇಶಿಸಿ ಆನೇಕಲ್ ಇನ್‌ಸ್ಪೆಕ್ಟರ್ ತಿಪ್ಪೇಸ್ವಾಮಿ ಎರಡು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆಗ ಜೆಕೆ ಪೊಲೀಸ್ ಸಿಬ್ಬಂದಿ ಸುರೇಶ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ. ಈ ವೇಳೆ ಕಾಲಿಗೆ ಗುಂಡು ಹಾರಿಸಿ ಆರೋಪಿಯನ್ನು ಬಂಧಿಸಲಾಗಿದೆ.
ಕಳೆದ 24ನೇ ತಾರೀಕು ಬುಧವಾರ ಪುರಸಭಾ ಸದಸ್ಯ ಸ್ಕ್ರಾಪ್ ರವಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಸ್ಕ್ರಾಪ್ ರವಿ ಕಚೇರಿಯಲ್ಲಿದ್ದಾಗ ರೌಡಿ ಶೀಟರ್ ಕಾರ್ತಿಕ್ ಅಲಿಯಾಸ್ ಜೆಕೆ ಗ್ಯಾಂಗ್ ಕಚೇರಿಗೆ ನುಗ್ಗಿ ಕೊಲೆ ಮಾಡಿತ್ತು.
ಆರೋಪಿಗಳ ಬಂಧನಕ್ಕೆ ಆನೇಕಲ್ ಉಪವಿಭಾಗದ ಡಿವೈಎಸ್ಪಿ ಮೋಹನ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಆರೋಪಿಗಳ ಪೈಕಿ ಹರೀಶ್ ಮತ್ತು ವಿನಯ್ ಕೋರ್ಟಿಗೆ ಶರಣಾಗಿದ್ದಾರೆ. ಪ್ರಮುಖ ಆರೋಪಿ ರೌಡಿ ಶೀಟರ್ ಜೆ.ಕೆ.ಕಾರ್ತಿಕ್ ತಲೆಮರೆಸಿಕೊಂಡಿದ್ದ, ಇದೀಗ ಆತನನ್ನು ಪೊಲೀಸರು ಬಂಧಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA