ಬೆಂಗಳೂರು: ಮೈಸೂರು ಮತ್ತು ಮಂಡ್ಯ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು, ರಹಸ್ಯ ಕಾರ್ಯಾಚರಣೆ ನಡೆಸಿ ಭ್ರೂಣಹತ್ಯೆ ಜಾಲವೊಂದನ್ನು ಪತ್ತೆ ಹಚ್ಚಿದ್ದು, 7 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಮೈಸೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ. ಪಿ.ಸಿ ಕುಮಾರಸ್ವಾಮಿ, ಮಂಡ್ಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮೋಹನ್ ಹಾಗೂ ಕೆಪಿಎಂಇಎ ಉಪ ನಿರ್ದೇಶಕ ಡಾ.ದೊರೆ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.
ಮೋಹನ್ ಮತ್ತು ದೊರೆ ಅವರು ಸಮಾಜ ಕಲ್ಯಾಣಾ ಇಲಾಖೆ ಜಿಲ್ಲಾ ಸಮಾಜ ಕಲ್ಯಾಣಧಿಕಾರಿ ಡಾ. ಬೆಟ್ಟಸ್ವಾಮಿ ಅವರೊಂದಿಗೆ ಖಚಿತ ಮಾಹಿತಿಯ ಮೇರೆಗೆ ಲಿಂಗಪತ್ತೆ ಹಾಗೂ ಭ್ರೂಣಹತ್ಯೆಗಾಗಿ ತೆರಳುತ್ತಿದ್ದ ಪುಟ್ಟಸಿದ್ದಮ ಎಂಬ ಮಹಿಳೆಯನ್ನು ಹಿಂಬಾಲಿಸಿದ್ದಾರೆ. ಆಕೆಗೆ ಈಗಾಗಲೇ ಇಬ್ಬರು ಹೆಣ್ಣು ಮಕ್ಕಳಿದ್ದು, ಮತ್ತೆ ಹೆಣ್ಣು ಮಗುವೇ ಜನಿಸಿದರೆ ಕೌಟುಂಬಿಕ ಸಮಸ್ಯೆಗಳಾಗಬಹುದು ಎಂಬ ಕಾರಣಕ್ಕೆ ಲಿಂಗ ಪತ್ತೆ ಹಾಗೂ ಭ್ರೂಣ ಹತ್ಯೆಗೆ ಮುಂದಾಗಿದ್ದರು ಎನ್ನಲಾಗಿದೆ.
ಸ್ವಾಮಿ ಎಂಬುವರು ಮಧ್ಯವರ್ತಿಯಾಗಿ ಕೆಲಸ ನಿರ್ವಹಿಸಿದ್ದು, ಮಹಿಳೆಯನ್ನು ಒಪ್ಪಿಸಿ ಹಣ ಪಡೆದು, ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾರೆ. ಮಹಿಳೆಯ ಮೊಬೈಲ್ ಸಂಖ್ಯೆಯನ್ನು ಜಿಪಿಎಸ್ ಟ್ರ್ಯಾಕರ್‌ಗೆ ಅಳವಡಿಸಿ, ಅದರ ಸಹಾಯದಿಂದ ಹಿಂಬಾಲಿಸಿದ ಅಧಿಕಾರಿಗಳ ತಂಡ ಹಾರೋಹಳ್ಳಿ ಗ್ರಾಮದ ಹೊರಭಾಗದಲ್ಲಿರುವ ಹಾಗೂ ಹನುಗನಹಳ್ಳಿ ಅಂಚಿನ ಒಂದು ಮನೆಗೆ ಮಹಿಳೆ ತಲುಪಿದ್ದಾರೆ. ಅಧಿಕಾರಿಗಳ ತಂಡ ಮನೆಯನ್ನು ಪರಿಶೀಲಿಸಿದಾಗ ಅಲ್ಲಿ ಗೋವಿಂದರಾಜು ಎಂಬ 25 ವಯಸ್ಸಿನ ಯುವಕ ಇದ್ದು, ಆತ ಇಲ್ಲಿ ಯಾವುದೇ ರೀತಿಯ ಚಟುವಟಿಕೆಗಳು ನಡೆಯುತ್ತಿಲ್ಲ ಎಂದು ತಿಳಿಸಿದ್ದಾನೆ.
ಗೊಂದಲಕ್ಕೊಳಗಾದ ಅಧಿಕಾರಿಗಳು ಇನ್ನೇನೂ ವಾಪಸ್ ಬರಬೇಕು ಎನ್ನುವ ಹಂತದಲ್ಲಿ ಅನುಮಾನಗೊಂಡು ಎರಡನೇ ಮಹಡಿಗೆ ತಲುಪಿದ್ದಾರೆ. ಅಲ್ಲಿ ರೂಪ ಮತ್ತು ಉಮಾ ಎಂಬ ಇಬ್ಬರು ಮಹಿಳೆಯರು ಹಾಗೂ ಮಕ್ಕಳು ಕಂಡುಬಂದಿದ್ದಾರೆ. ಅವರನ್ನು ವಿಚಾರಿಸಿದಾಗ ಅಜ್ಜಿಯ ತಿಥಿಗಾಗಿ ಬಂದಿರುವುದಾಗಿ ಹೇಳಿದ್ದಾರೆ. ಸ್ಥಳ ಪರಿಶೀಲನೆ ಮಾಡಿದಾಗ ಅಲ್ಲಿ ಬನ್ನೂರಿನ ಎಸ್.ಕೆ. ಆಸ್ಪತ್ರೆಗೆ ಸಂಬಂಧಿಸಿದ ಕೆಲವು ಬಿಲ್ ಗಳು ಮತ್ತು ದಾಖಲಾತಿಗಳು ಪತ್ತೆಯಾಗಿವೆ. ಜೊತೆಗೆ ಹತ್ತಿ ಬಟ್ಟೆ, ಇಂಜೆಕ್ಷನ್, ಮಾತ್ರೆಗಳು ಕಂಡು ಬಂದಿವೆ.
ಅಲ್ಲಿನ ಶ್ಯಾಮಲಾ ಎಂಬುವರನ್ನು ವಿಚಾರಿಸಿದಾಗ ಆಕೆ ತಾನು ಎಸ್.ಕೆ. ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದು, ಬಿಎಸ್ ಸಿ ನರ್ಸಿಂಗ್ ಮಾಡಿದ್ದೇನೆ. ಪತಿ ಕಾರ್ತಿಕ್ ಹಾಗೂ ಪುಟ್ಟರಾಜು ಎಂಬುವರೊಂದಿಗೆ ಸೇರಿಕೊಂಡು ಲಿಂಗಪತ್ತೆ ಹಾಗೂ ಭ್ರೂಣಹತ್ಯೆ ಕಾರ್ಯಾಚರಣೆ ಮಾಡುವುದಾಗಿ ಒಪ್ಪಿಕೊಂಡಿದ್ದಾರೆ.
ಅಲ್ಲಿದ್ದ ಮಹಿಳೆಯರಾದ ರೂಪ ಮತ್ತು ಉಮಾ ಅವರು ಕೂಡ ತಮ್ಮ ಮನೆಯವರೇ ಈ ಕೆಲಸಕ್ಕೆ ಒಪ್ಪಿಕೊಂಡು ಹಣ ಕೊಟ್ಟು ಕಳುಹಿಸಿದ್ದಾರೆ. ಈಗಾಗಲೇ ತಲಾ 30 ಸಾವಿರ ರೂ.ಗಳನ್ನು ಕೊಟ್ಟಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ. ಆದರ ಆಧಾರದ ಮೇಲೆ ಸ್ವಾಮಿ. ಗೋವಿಂದರಾಜು, ಶ್ಯಾಮಲಾ, ಕಾರ್ತಿಕ್, ಪುಟ್ಟರಾಜ್, ಉಮಾ ಅವರ ಪತಿ ಶಿವಕುಮಾರ್, ರೂಪಾ ಅವರ ಪತಿ ಹರೀಶ್ ನಾಯ್ಕ ಅವರ ವಿರುದ್ಧ ಮೈಸೂರು ಜಿಲ್ಲೆಯ ವರುಣಾ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ ಕಲಂ 88, 91, 62 ಹಾಗೂ ಎಂಪಿಟಿಪಿ ಕಾಯ್ದೆಯಡಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC