ಗುಬ್ಬಿ: ತಾಲ್ಲೂಕು ನಂದಿಹಳ್ಳಿ ಶಿವಣ್ಣ ಅವರ ಜನ್ಮಸ್ಥಳವಾಗಿದ್ದು, ಕಾರ್ಮಿಕ ಮುಖಂಡ ಎನ್.ಶಿವಣ್ಣ (80) ಹೃದಯಾಘಾತದಿಂದ ಬುಧವಾರ ಬೆಂಗಳೂರಿನಲ್ಲಿ ಮಗನ ಮನೆಯಲ್ಲಿ ನಿಧನರಾದರು ಎಂದು ತಿಳಿದುಬಂದಿದೆ. ಮೃತರು ಪತ್ನಿ, ಪುತ್ರ, ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಶಿವಣ್ಣ ಅವರ ಇಚ್ಛೆಯಂತೆ ದೇಹವನ್ನು ರಾಜರಾಜೇಶ್ವರಿ ವೈದ್ಯಕೀಯ ಕಾಲೇಜಿಗೆ ದಾನ ಮಾಡಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಶಿವಣ್ಣ ಅವರು ಎಐಟಿಯುಸಿ ರಾಜ್ಯ ಕಾರ್ಯದರ್ಶಿ, ಸಿಪಿಐ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದರು. ವಿವಿಧ ಕಾರ್ಮಿಕ ಸಂಘಟನೆಗಳ ಅಧ್ಯಕ್ಷರಾಗಿ ಸಂಘಟನೆ ಮುನ್ನಡೆಸಿದ್ದರು. ಒಮ್ಮೆ ತುರುವೇಕೆರೆ ತಾಲ್ಲೂಕು ಬೋರ್ಡ್ ಸದಸ್ಯರಾಗಿದ್ದರು. ಡಿಪ್ಲೊಮಾ ಶಿಕ್ಷಣ ಮುಗಿಸಿ, ಅಮ್ಮಸಂದ್ರ ಸಿಮೆಂಟ್ ಕಾರ್ಖಾನೆಯಲ್ಲಿ ಉದ್ಯೋಗಕ್ಕೆ ಸೇರಿಕೊಂಡ ಶಿವಣ್ಣ ಅವರು ಅಲ್ಲೂ ಕಾರ್ಮಿಕ ಸಂಘಟನೆ ಕಟ್ಟಿ ಬೆಳೆಸುವ ಮೂಲಕ ಕಾರ್ಮಿಕರಿಗೆ ಹಲವು ಸವಲತ್ತು ಕೊಡಿಸಿದ್ದರು. ನಂತರ ಕಾರ್ಮಿಕ ಸಂಘಟನೆ, ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ವಿವಿಧ ಕಾರ್ಮಿಕ ಸಂಘಟನೆಗಳ ನೇತೃತ್ವ ವಹಿಸಿಕೊಂಡು, ಅವರಿಗೆ ನ್ಯಾಯ ಕೊಡಿಸುವ ಹೋರಾಟದಲ್ಲಿ ನಿರತರಾಗಿದ್ದರು.
ಕಳೆದ ಲೋಕಸಭೆ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಿಂದ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಎದುರು ಸ್ಪರ್ಧಿಸಿ ಪರಾಭವಗೊಂಡಿದ್ದರು. ಒಂದು ರೀತಿಯಲ್ಲಿ ದೇವೇಗೌಡರ ಸೋಲಿಗೂ ಶಿವಣ್ಣ ಕಾರಣರಾದರು ಎಂದು ವಿಶ್ಲೇಷಿಸಲಾಗಿತ್ತು. ಈ ಚುನಾವಣೆಯಲ್ಲಿ 15 ಸಾವಿರಕ್ಕೂ ಅಧಿಕ ಮತ ಗಳಿಸಿದ್ದರು. ಈ ಮತ ವಿಭಜನೆಯಿಂದಾಗಿಯೇ ದೇವೇಗೌಡರು ಸೋತರು ಎಂದು ವಿಶ್ಲೇಷಿಸಲಾಗಿತ್ತು.
ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಅಮ್ಮಸಂದ್ರ ಸೀಮೆಂಟ್ ಫ್ಯಾಕ್ಟರಿಯ ಕಾರ್ಮಿಕರಾಗಿ, ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಶಿವಣ್ಣ ಕೆಲಸ ಮಾಡಿದರು. 1962ರಲ್ಲಿ ಹೋರಾಟಕ್ಕೆ ಧುಮುಕಿದ ಎನ್.ಶಿವಣ್ಣ ಕಾರ್ಮಿಕರ ಹಕ್ಕುಗಳ ಪರವಾಗಿ ಹೋರಾಟ ಮಾಡಿದರು.
ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿಯಾಗಿ ದುಡಿದರು. ಜೊತೆಗೆ ಭಾರತ ಕಮ್ಯೂನಿಸ್ಟ್ ಪಕ್ಷ ಜಿಲ್ಲಾ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿ ಕಾರ್ಮಿಕರು, ರೈತರು, ಅಂಗನವಾಡಿ, ಆಶಾ ಕಾರ್ಯಕರ್ತರಿಗೆ ಸೌಲಭ್ಯಗಳನ್ನು ಒದಗಿಸಿಕೊಡಲು ನಿರಂತರ ಹೋರಾಟ ಮಾಡಿದರು.
2002ರಲ್ಲಿ ಸಿಪಿಐ ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡ ಎನ್.ಶಿವಣ್ಣ ಪಕ್ಷವನ್ನು ಕಟ್ಟುವಲ್ಲಿ ಶ್ರಮಿಸಿದರು. ಎಡ ಚಳವಳಿಯಲ್ಲಿ ಶಿವಣ್ಣ ಅವರ ಹೆಸರು ಪ್ರಮುಖವಾದುದು.
ಅಂಗನವಾಡಿ, ಆಶಾ, ಬಿಸಿಯೂಟ ನೌಕರರ ಸಂಘಟನೆಯ ಕಾರ್ಯದರ್ಶಿಯಾಗಿ ಮತ್ತು ಬೆಂಗಳೂರಿನ ಆರೋಗ್ಯ ಕಾರ್ಯಕರ್ತೆಯರ ಸಂಘಟನೆಯ ಪ್ರಧಾನ ಕಾರ್ಯದರ್ಶಿಯಾಗಿ ಉತ್ತಮ ಕೆಲಸ ಮಾಡಿದರು.
ಅಷ್ಟೇ ಅಲ್ಲ ಎಐಟಿಯುಸಿಯ ತುಮಕೂರು ಜಿಲ್ಲಾ ಕಾರ್ಯದರ್ಶಿಯಾಗಿ, ರಾಜ್ಯ ಕಾರ್ಯದರ್ಶಿಯಾಗಿ ಮತ್ತು ಬೆಂಗಳೂರು ಮತ್ತು ತುಮಕೂರು ಜಿಲ್ಲೆಯಲ್ಲಿ ಹಲವು ಕಾರ್ಖಾನೆಯ ಕಾರ್ಮಿಕರ ಸಂಘದ ಅಧ್ಯಕ್ಷರಾಗಿಯೂ ಕೆಲಸ ನಿರ್ವಹಿಸಿದ್ದಾರೆ.
ಕಾರ್ಮಿಕ, ರೈತ, ಅಂಗನವಾಡಿ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದ ಎನ್. ಶಿವಣ್ಣ ಜೀವಿತದ ಕೊನೆಯವರೆಗೂ ಹೋರಾಟದಲ್ಲೇ ಇದ್ದರು. ಎನ್.ಶಿವಣ್ಣ ನಿಧನಕ್ಕೆ ಸಿಪಿಐ ಜಿಲ್ಲಾ ಕಾರ್ಯದರ್ಶಿ ಗಿರೀಶ್, ಎಐಟಿಯುಸಿ ಮುಖಂಡ ಕಂಬೇಗೌಡ ಸಂತಾಪ ವ್ಯಕ್ತಪಡಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5