ಹಿರಿಯೂರು: ನದಿ ನೀರು ವ್ಯರ್ಥವಾಗಿ ಹರಿದು ಸಮುದ್ರ ಸೇರುವುದನ್ನು ತಪ್ಪಿಸಲು ನದಿ ಜೋಡಣೆ ಮೂಲಕ ದೇಶದ ಎಲ್ಲಾ ಕೆರೆಕಟ್ಟೆಗಳನ್ನು ತುಂಬಿಸುವ ಮೂಲಕ ಕುಡಿಯುವ ನೀರು ಮತ್ತು ನೀರಾವರಿ ಸಮಸ್ಯೆ ಬಗೆಹರಿಸಬೇಕು ಎಂದು ರಾಜ್ಯ ರೈತಸಂಘ ಮತ್ತು ಹಸಿರುಸೇನೆ ರಾಜ್ಯ ಸಂಚಾಲಕ ಕನಕಂಜೇನಹಳ್ಳಿ ಪಟೇಲ್ ಪ್ರಸನ್ನ ಕುಮಾರ್ ಒತ್ತಾಯಿಸಿದರು.
ನಗರದ ತಾಲ್ಲೂಕು ಕಚೇರಿಗೆ ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕು ಕನಕಂಜೇನಹಳ್ಳಿಯಿಂದ ನದಿ ಜೋಡಣೆಗೆ ಒತ್ತಾಯಿಸಿ ಹಮ್ಮಿಕೊಂಡಿರುವ ರಾಷ್ಟ್ರಪತಿ ಭವನ್ ಚಲೊ ಜಾಥಾ ಬುಧವಾರ ಆಗಮಿಸಿದಾಗ ತಾಲ್ಲೂಕು ರೈತ ಸಂಘದ ನೇತೃತ್ವದಲ್ಲಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು.
ನಂತರ ಸ್ಥಳೀಯ ರೈತರನ್ನು ಉದ್ದೇಶಿಸಿ ಅವರು ಮಾತನಾಡಿದರು. ನದಿ ಜೋಡಣೆ ಕಾರ್ಯಕ್ರಮ ಯಶಸ್ವಿಯಾದರೆ ರೈತರ ಜಮೀನುಗಳಿಗೆ ಸಾಕಷ್ಟು ನೀರು ಹರಿದು ಬರುತ್ತದೆ. ಇದರಿಂದ ಕೃಷಿ ಉತ್ಪನ್ನ ಪ್ರಮಾಣ ಸಹ ಹೆಚ್ಚುತ್ತದೆ ಎಂದರು.
ಆಹಾರೋತ್ಪಾದನೆಯಲ್ಲಿ ದೇಶ ಅದ್ಭುತ ಸಾಧನೆ ತೋರುತ್ತದೆ. ಪ್ರಯುಕ್ತ ಉತ್ತರದ ಹಿಮಾಲಯದಿಂದ ದಕ್ಷಿಣದ ಹಿಂದೂ ಮಹಾಸಾಗರದವರೆಗೆ, ಪಶ್ಚಿಮದ ಗುಜರಾತಿನಿಂದ ಪೂರ್ವದ ಅರುಣಾಚಲದವರೆಗೆ ಹರಿಯುವ ನದಿಗಳ ಪಟ್ಟಿಯನ್ನು ಪ್ರಧಾನಿ ಹಾಗೂ ರಾಷ್ಟ್ರಪತಿಗೆ ಸಲ್ಲಿಸುತ್ತಿದ್ದೇವೆ. ಈ ಯೋಜನೆಯನ್ನು ರೈತರ ಭವಿಷ್ಯದ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ಜಾರಿಗೆ ತರಬೇಕು’ ಎಂದು ಅವರು ಆಗ್ರಹಿಸಿದರು.
ಮಾರ್ಚ್ 23ರಂದು ಬೆಳಿಗ್ಗೆ 10ಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿ ನದಿ ಜೋಡಣೆಯ ಅಗತ್ಯ ಮತ್ತು ಅನಿವಾರ್ಯತೆ ಬಗ್ಗೆ ಮನವರಿಕೆ ಮಾಡಿಕೊಟ್ಟು ಮನವಿ ಸಲ್ಲಿಸುತ್ತೇವೆ. ಅದೇ ದಿನ ಮಧ್ಯಾಹ್ನ 12ಕ್ಕೆ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ ಚರ್ಚಿಸುತ್ತೇವೆ. ಈ ಹೋರಾಟಕ್ಕೆ ಎಲ್ಲಾ ರೈತ ಸಂಘಟನೆಗಳು, ಪ್ರಗತಿಪರ ಸಂಘಗಳು, ಮಹಿಳಾ ಸಂಘಗಳು ಕೈಜೋಡಿಸಬೇಕು’ ಎಂಬುದಾಗಿ ರೈತಮುಖಂಡರಾದ ಪ್ರಸನ್ನ ಕುಮಾರ್ ಮನವಿ ಮಾಡಿದರು.
ಈ ಸಂದರ್ಭದಲ್ಲಿ ರಾಷ್ಟ್ರಪತಿ ಭವನ್ ಚಲೋ ಕಾರ್ಯಕ್ರಮದಲ್ಲಿ ಅಂತ್ಯಜ ಸಂಘಟನೆ ರಾಜ್ಯಾಧ್ಯಕ್ಷ ಡಾ.ಅಶ್ವತ್ಥನಾರಾಯಣ, ಕಾಡುಗೋಡಿ ನಾರಾಯಣಸ್ವಾಮಿ, ಮಹಮದ್ ದಸ್ತಗೀರ್, ಅಯಾಜ್ ಖಾನ್, ಮಂಜುನಾಥ್, ನವಾಬ್ ಪಾಷಾ, ತಾಲ್ಲೂಕು ರೈತಸಂಘದ ಅಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ ಸೇರಿದಂತೆ ಅನೇಕ ರೈತಮುಖಂಡರು ಪಾಲ್ಗೊಂಡಿದ್ದರು.
ವರದಿ: ಮುರುಳಿಧರನ್ ಆರ್., ಹಿರಿಯೂರು. ( ಚಿತ್ರದುರ್ಗ – ದಾವಣಗೆರೆ )
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB