ಹಿರಿಯೂರು: ನಗರಸಭೆ ಅಧ್ಯಕ್ಷೆಯಾದ ಎಸ್ .ಶಿವರಂಜಿನಿ ಯಾದವ್, ಹಿರಿಯ ಆರೋಗ್ಯ ನಿರೀಕ್ಷಕರುಗಳಾದ ಸಂಧ್ಯಾ ಹಾಗೂ ಮೀನಾಕ್ಷಿ ಅವರು ವಾರ್ಡ್ ಪರಿಶೀಲನೆ ನಡೆಸುತ್ತಿದ್ದ ವೇಳೆ ವಾರ್ಡ್ ನಂಬರ್ 2ರಲ್ಲಿ ರಸ್ತೆ ಬದಿಯಲ್ಲಿ ಕಸ ಸುರಿದ ವ್ಯಕ್ತಿಯೋರ್ವನಿಗೆ ಸ್ವಚ್ಛತೆ ಪಾಠ ಹೇಳಿ, ಆತ ಸುರಿದ ಕಸವನ್ನು ಆತನಿಂದಲೇ, ಕಸದ ಗಾಡಿಗೆ ತುಂಬಿಸಿದ ಘಟನೆ ನಡೆದಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಸಂಧ್ಯಾ ಅವರು, ಎಲ್ಲಾ 31 ವಾರ್ಡ್ ಗಳಲ್ಲಿಯೂ ಸ್ವಚ್ಛತಾ ಕಾರ್ಯ ಮಾಡಲು ಹೆಚ್ಚಿನ ಶ್ರಮ ವಹಿಸಲಾಗುತ್ತಿದ್ದು, ಪ್ರತಿಯೊಬ್ಬ ನಾಗರಿಕರೂ ಸ್ವಚ್ಚತೆ ಕಾಪಾಡಲು ಸ್ವಯಂ ಸಂಕಲ್ಪಮಾಡಿಕೊಳ್ಳಬೇಕಾಗಿದೆ ಎಂದರು.
ಇದು ನಮ್ಮ ಹೊಣೆಗಾರಿಕೆಯಲ್ಲ ಎಂಬ ಉದಾಸೀನತೆಯ ಮನೋಭಾವದಿಂದ ಪ್ರತಿಯೊಬ್ಬ ನಾಗರಿಕರೂ ಹೊರಬಂದು, ನಮ್ಮ ಮನೆ ಹಾಗೂ ಸುತ್ತಮುತ್ತಲಿನ ವಾತಾವರಣ ಹಾಗೂ ನಾವು ನಡೆದಾಡುವ ಜಾಗವನ್ನು ನಾವೇ ಸ್ವಚ್ಛವಾಗಿಟ್ಟುಕೊಳ್ಳಬೇಕೆಂಬ ಹೊಣೆಗಾರಿಕೆ ಮತ್ತು ಜವಾಬ್ದಾರಿಯನ್ನು ನಾವು ಮೈಗೂಡಿಸಿಕೊಳ್ಳಬೇಕು ಎಂದರು.
ಮೀನಾಕ್ಷಿ ಅವರು ಮಾತನಾಡಿ, ನಮ್ಮ ಮನೆಯ ಕಸ ಮತ್ತು ನಗರದ ಕಸವನ್ನು ಸ್ವಚ್ಛ ಮಾಡುವುದು ಕೇವಲ ನಗರಸಭೆ, ಪೌರಕಾರ್ಮಿಕರ ಕೆಲಸ ಎಂಬ ಮನೋಭಾವದಿಂದ ನಗರದ ನಾಗರಿಕರು ಹೊರಬಂದು, ನಗರದ ಸ್ವಚ್ಛತೆ ಕಾಪಾಡುವುದು ಎಲ್ಲರ ಹೊಣೆ ಎಂಬುದನ್ನು ಪ್ರತಿಯೊಬ್ಬ ವ್ಯಕ್ತಿಯೂ ಸಹ ಅರಿತುಕೊಂಡು ನಗರ ಪ್ರದೇಶದ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕಾಗಿದೆ. ಸದ್ಯದಲ್ಲಿಯೇ ಎಲ್ಲಂದರಲ್ಲಿ ಕಸ ಎಸೆಯುವವರಿಗೆ ಸ್ಥಳದಲ್ಲಿಯೇ ದಂಡ ವಿಧಿಸುವ “ಸ್ಪಾಟ್ ಫೈನ್ ಮಷೀನ್” ಗಳನ್ನು ಖರೀದಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರಾದ ಎಸ್.ಶಿವರಂಜನಿ ಯಾದವ್, ಉಪಾಧ್ಯಕ್ಷರಾದ ಗುಂಡೇಶ್ ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಜ್ಜಪ್ಪ ಯಾನೆ ಜೆ.ಆರ್.ಅಜಯಕುಮಾರ್, ನಗರಸಭೆ ಸದಸ್ಯರಾದ ಜಿ.ಎಸ್.ತಿಪ್ಪೇಸ್ವಾಮಿ ಹಾಗೂ ಪೌರಕಾರ್ಮಿಕರು ಉಪಸ್ಥಿತರಿದ್ದರು.
ವರದಿ: ಮುರುಳಿಧರನ್ ಆರ್., ಚಿತ್ರದುರ್ಗ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


