ಮಧುಗಿರಿ: ಪಟ್ಟಣದ ಬೆಟ್ಟದ ಇಳಿಜಾರಿನ ಕಲ್ಲು ಬಂಡೆಗಳಿಂದ ಕೂಡಿದ ಬಂಡೆಯ ಬುಡದಲ್ಲಿ ಅಪರೂಪದ ನಾಗಾರ್ಜುನ ಸಾಗರ ರೇಸರ್ ಹಾವು ಪತ್ತೆಯಾಗಿದ್ದು, ಉರಗ ಪ್ರೇಮಿಗಳಿಗೆ ಕುತೂಹಲ ಹೆಚ್ಚಾಗಿದೆ ಎಂದು ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆಯ ಅಧ್ಯಕ್ಷ ಬಿ.ವಿ.ಗುಂಡಪ್ಪ ತಿಳಿಸಿದ್ದಾರೆ.
ಇದು ರಸೆಲ್ ಕುತ್ರಿ ಹಾವನ್ನು ಹೋಲುತ್ತದೆಯಾದರೂ ಮೊನಚಾದ ತಲೆ, ದೇಹದ ಮೇಲಿನ ಹುರುಪೆಗಳು ಹಾಗೂ ಬಣ್ಣದ ಸಹಾಯದಿಂದ ವ್ಯತ್ಯಾಸ ತಿಳಿಯಬಹುದು. ನೀಳ ದೇಹದ ಮೇಲೆ ಮೃದುವಾದ ಹುರುಪೆಗಳು, ಬೆನ್ನಿನ ಭಾಗದಲ್ಲಿ ಗಾಢವಾದ ಬೂದು ಬಣ್ಣದ ಉಂಗುರಾಕಾರದ ರಚನೆಗಳು ದೇಹದ ಅರ್ಧ ಭಾಗದವರೆಗೂ ಕಂಡು ಬರುತ್ತವೆ. ದೇಹದ ನಡು ಭಾಗದಿಂದ ಬಾಲದ ತುದಿಯವರೆಗೆ ಉಂಗುರಾಕಾರದ ರಚನೆಗಳು ಕಂಡು ಬರುವುದಿಲ್ಲ.
ದಕ್ಷಿಣ ಭಾರತದ ದಖನ್ ಪ್ರಸ್ಥಭೂಮಿಯಲ್ಲಿ ಮಾತ್ರ ಕಂಡು ಬರುವ ಈ ಹಾವು 1976ರಲ್ಲಿ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ನಾಗಾರ್ಜುನ ಬೆಟ್ಟದಲ್ಲಿ ಕಂಡು ಬಂದಿದ್ದರಿಂದ ಈ ಹಾವಿಗೆ ಈ ಹೆಸರಿಟ್ಟಿದ್ದಾರೆ. ಈ ಹಾವುಗಳು ಶತ್ರುಗಳಿಂದ ರಕ್ಷಿಸಿ ಕೊಳ್ಳಲು ಹಾಗೂ ಆಹಾರ ಜೀವಿಗಳನ್ನು ಹಿಡಿಯಲು ವೇಗ ಗತಿಯಲ್ಲಿ ಸಾಗುವುದರಿಂದ ರೇಸರ್ ಹೆಸರು ಬಂದಿದೆ. ಇದು ವಿಷ ರಹಿತ ಹಾವಾಗಿದ್ದು ಮಾನವರಿಗೆ ಯಾವುದೇ ಹಾನಿ ಇಲ್ಲ. ಹಗಲು ಹೊತ್ತಿನಲ್ಲಿ ಹಲ್ಲಿ, ಓತಿ, ಹಾವುರಾಣಿ, ಸಣ್ಣ ಇಲಿ ಮರಿಗಳನ್ನು ತಿಂದು ಕಲ್ಲಿನ ಪೊಟರೆಗಳಲ್ಲಿ ವಾಸಿಸುತ್ತದೆ.
ಮಧುಗಿರಿಯ ಉರಗ ರಕ್ಷಕ ಫಾಯತ್ ಅಲಿ ಖಾನ್ ಹಾಗೂ ರಂಗನಾಥ್ ಇವರ ಸಮ್ಮುಖದಲ್ಲಿ ಬೆಟ್ಟದ ಬುಡದಲ್ಲಿ ಅದರ ಸ್ವಸ್ಥಾನಕ್ಕೆ ಬಿಡುಗಡೆ ಮಾಡಲಾಗಿದೆ. ಜಿಲ್ಲೆಯಲ್ಲಿ ಇಲ್ಲಿಯವರೆಗೆ 38 ಪ್ರಬೇಧದ ಹಾವುಗಳನ್ನು ಗುರುತಿಸಿದ್ದು, ಅವುಗಳಲ್ಲಿ 5 ಪ್ರಬೇಧದ ವಿಷಕಾರಿ ಹಾವುಗಳು, 3 ಪ್ರಬೇಧಗಳು ಅರೆವಿಷಕಾರಿಳಾಗಿದ್ದು, ಉಳಿದವುಗಳೆಲ್ಲಾ ವಿಷ ರಹಿತವಾಗಿವೆ. ಆಹಾರ ಜಾಲದಲ್ಲಿ ಪ್ರಮುಖ ಪಾತ್ರ ವಹಿಸುವ ಇವುಗಳ ಸಂರಕ್ಷಣೆಯಲ್ಲಿ ನಮ್ಮ ಉಳಿವಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


