ಪಠ್ಯಪುಸ್ತಕ ಪರಿಷ್ಕರಣೆ ವಿವಾದಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ಬಿ.ಸಿ ನಾಗೇಶ್‌ರವರು ನಾಳೆ ವರದಿ ನೀಡಲಿದ್ದು, ವರದಿಯನ್ನಾಧರಿಸಿ ಮುಂದಿನ ಕ್ರಮಗಳನ್ನು ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಉಡುಪಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಲಾ ಪಠ್ಯಗಳಲ್ಲಿ ಅಳವಡಿಸಿರುವ ಕೆಲ ಪಾಠಗಳ ಬಗ್ಗೆ ಪರ-ವಿರೋಧ ಅಭಿಪ್ರಾಯಗಳು ಬರುತ್ತಿವೆ. ಹಾಗಾಗಿ, ಶಿಕ್ಷಣ ಸಚಿವರಿಗೆ ವರದಿ ನೀಡುವಂತೆ ಸೂಚಿಸಿದ್ದೇನೆ. ಎಲ್ಲ ಆಯಾಮಗಳಿಂದಲೂ ಪರಿಶೀಲಿಸಿ ಶಿಕ್ಷಣ ಸಚಿವರು ನಾಳೆ ವರದಿ ನೀಡುವರು ಎಂದರು.ಕೆಲ ಸ್ವಾಮೀಜಿಗಳು, ಶಿಕ್ಷಣ ತಜ್ಞರೂ ಸಹ ತಮಗೆ ಪತ್ರ ಬರೆದಿದ್ದಾರೆ. ಶಿಕ್ಷಣ ಸಚಿವರ ವರದಿ ನಂತರ ಈ ಎಲ್ಲ ಗೊಂದಲಗಳಿಗೂ ತೆರೆ ಎಳೆಯುವ ಕೆಲಸವನ್ನು ಸರ್ಕಾರ ಮಾಡಲಿದೆ ಎಂದರು.ಕೆಲ ಸಾಹಿತಿಗಳು ತಮ್ಮ ಪಠ್ಯಗಳನ್ನು ಶಾಲಾ ಪಠ್ಯದಿಂದ ವಾಪಸ್ ಪಡೆಯುವಂತೆ ಪತ್ರ ಬರೆದಿರುವ ಬಗ್ಗೆಯೂ ಪ್ರತಿಕ್ರಿಯಿಸಿದ ಅವರು, ಶಿಕ್ಷಣ ಸಚಿವರ ವರದಿ ನಂತರ ಈ ಎಲ್ಲದ್ದಕ್ಕೂ ಒಂದು ತೆರೆ ಬೀಳುತ್ತದೆ. ನಾಳೆಯೇ ಶಿಕ್ಷಣ ಸಚಿವರು ವರದಿ ನೀಡುತ್ತಾರೆ ಎಂದರು.
ಹಿಜಾಬ್ ಮತ್ತು ಲವ್‌ಜಿಹಾದ್‌ಗಳಿಗೆ ತೆರೆ ಎಳೆಯಲು ಕಾನೂನುಗಳನ್ನು ಜಾರಿ ಮಾಡಲಾಗಿದೆ. ಎಲ್ಲರೂ ಕಾನೂನನ್ನು
ಪಾಲಿಸಲೇಬೇಕು ಎಂದವರು ಹೇಳಿದರು.ಲವ್‌ಜಿಹಾದ್ ಹೊಸದೇನೂ ಅಲ್ಲ, ಮೊದಲಿನಿಂದಲೂ ಇದೆ, ಅದನ್ನು ತಡೆಯಲು ಕಾನೂನನ್ನು ರೂಪಿಸಿದ್ದೇವೆ. ಅದನ್ನು ಪಾಲಿಸಲೇಬೇಕು ಎಂದರು.ಲೋಕಾಯುಕ್ತ ಮತ್ತು ಭ್ರಷ್ಟಾಚಾರ ನಿಗ್ರಹ ದಳದ ಬಲವರ್ಧನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಈ ಹಿಂದೆ ಲೋಕಾಯುಕ್ತರು ಐಪಿಸಿ ಅಡಿ ಪ್ರಕರಣ ದಾಖಲಿಸಲು ಅವಕಾಶವಿರಲಿಲ್ಲ. ಎಸಿಬಿಯಲ್ಲಿ ಅದಕ್ಕೆ ಅವಕಾಶವಿದೆ. ಈ ಸಂಬಂಧ ನ್ಯಾಯಾಲಯದಲ್ಲಿ ಪ್ರಕರಣ ಇದೆ. ಏನು ತೀರ್ಪು ಬರುತ್ತೋ ನೋಡೋಣ ಎಂದರು.
ವರದಿ ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB


