ಪರಿಶೆಯ ಕಳ್ಳೇಪುರಿಯಂತೆ ನಕಲಿ ಗೌರವ ಡಾಕ್ಟರೇಟ್ ಪದವಿಗಳನ್ನು ಮಾರುವ ಫೇಕ್ ಯೂನಿವರ್ಸಿಟಿಗಳು ಹುಟ್ಟಿಕೊಂಡಿವೆ. ಕರ್ನಾಟಕಾದ್ಯಂತ ಹಾಗೂ ಹೊರ ರಾಜ್ಯಗಳಲ್ಲಿಯೂ ಗೌರವ ಡಾಕ್ಟರೇಟ್ ಪದವಿಯನ್ನು ಮಾರುವ ದಂಧೆಯು ಅವ್ಯಾಹತವಾಗಿ ನಡೆಯುತ್ತಿದೆ. ಗೌಡಾ ಪದವಿ ನೀಡುವ ಈ ಫೇಕ್ ಯೂನಿವರ್ಸಿಟಿಗಳಲ್ಲಿ ಕುಲಪತಿ, ಡೀನ್, ಪ್ರೊಫೆಸರ್, ರೀಸರ್ಚ್ ಸ್ಕಾಲರ್ಸ್, ಸ್ಟೂಡೆಂಟ್ಸ್ ಯಾವುದೂ ಇರುವುದಿಲ್ಲ.
ಕುಲಪತಿ -ಶಿಕ್ಷಕ ವರ್ಗ- ವಿದ್ಯಾರ್ಥಿಗಳು – ಸಂಶೋಧಕರುಗಳೇ ಇಲ್ಲದಿರುವ ಇಂಡಿಯನ್ ವರ್ಚುಯಲ್ ಅಕಾಡೆಮಿ ಫಾರ್ ಪೀಸ್ ಅಂಡ್ ಎಜುಕೇಶನ್ ಸಂಸ್ಥೆ, ವರ್ಚುಯಲ್ ಗ್ಲೋಬಲ್ ಪೀಸ್ ಯೂನಿವರ್ಸಿಟಿ ಹೆಸರಿನ ಫೇಕ್ ವಿಶ್ವವಿದ್ಯಾನಿಲಯಗಳು ಫೇಕ್ ‘ಗೌಡಾ’ ನೀಡುತ್ತಿವೆ. ದೊಡ್ಡ ಪ್ರಮಾಣದಲ್ಲಿ ಹಣಕಾಸಿನ ದಂಧೆ ಇಲ್ಲಿ ನಡೆಯತ್ತಿದೆ. ಸರ್ಕಾರದಿಂದ ಅಂಗೀಕಾರ ಪಡೆದಿರುವ ಯಾವುದೇ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ಗಾಗಿ ನೋಂದಾಯಿಸಿ ಸಂಶೋಧನೆ ನಡೆಸದಿರುವ ಅಥವಾ ಯಾವುದೇ ನಿರ್ದಿಷ್ಟ ಕ್ಷೇತ್ರದಲ್ಲಿ ಸಮಾಜಕ್ಕೆ ಗಣನೀಯ ಕೊಡುಗೆ ನೀಡದಿರುವ ಹಾದಿಬೀದಿಯ ಜನರೆಲ್ಲರಿಗೂ ರಮಾರುಮಿಯಾಗಿ ಡಾಕ್ಟರೇಟ್ ಪದವಿಯನ್ನು ಕೊಡುವ ಇಂತಹ ಫೇಕ್ ವಿವಿಗಳಲ್ಲಿ ಕಕಾಕಿಕೀ ತಿಳಿಯದಿರುವ ಅನಕ್ಷರಸ್ಥರು ಕೂಡಾ ಗೌಡಾ ಖರೀದಿಸುತ್ತಿದ್ದಾರೆ. ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನಲ್ಲಿ ಈ ದಂಧೆಯು ಹೆಚ್ಚು ವ್ಯಾಪಿಸಿದೆ. ಒಂದೇ ವರ್ಷದಲ್ಲಿ ಹತ್ತಕ್ಕೂ ಹೆಚ್ಚು ಜನರಿಗೆ ಗೌಡಾ ಪದವಿ ನೀಡಲಾಗಿದೆ ಎಂದು ಕೆಲವು ಮೂಲಗಳಿಂದ ತಿಳಿದುಬಂದಿದೆ. ಈ ಹಾವಳಿಯನ್ನು ಪ್ರಜ್ಞಾವಂತ ಜನ ಮಟ್ಟ ಹಾಕಬೇಕಾಗಿದೆ. ತಮಿಳುನಾಡಿನ ಚೆನ್ನೈ ಮೂಲದ ವರ್ಚುಯಲ್ ಗ್ಲೋಬಲ್ ಪೀಸ್ ಯೂನಿವರ್ಸಿಟಿ ಎಂಬ ಫೇಕ್ ವಿಶ್ವವಿದ್ಯಾಲಯವು ಫೇಕ್ ಡಾಕ್ಟರೇಟ್ ನೀಡುತ್ತಿರುವುದರ ಬಗ್ಗೆ ಅಸಲಿ ಸಂಶೋಧಕರು ಆಲೋಚಿಸಬೇಕು. ನಿಜಕ್ಕೂ ಇದೊಂದು ಸಾಂಸ್ಕೃತಿಕ ಅತ್ಯಾಚಾರ.
ಯಾವುದೇ ಸಂಘ ಸಂಸ್ಥೆಗಳು ಗೌಡಾ ವಿತರಿಸುವಂತಿಲ್ಲ. ಹಾಗೆ ಗೌಡಾ ವಿತರಿಸುವ ಬಗ್ಗೆ ರಿಜಿಸ್ಟ್ರೇಶನ್ ಕೂಡಾ ಮಾಡಿಸಿರುವುದಿಲ್ಲ. ಅದಕ್ಕೆ ಅವಕಾಶವೂ ಇರುವುದಿಲ್ಲ. ಸರ್ಕಾರವು ರೂಪಿಸಿರುವ ವಿಶ್ವವಿದ್ಯಾಲಯಗಳ ನಿಯಮಾವಳಿಗಳ ಅನುಸಾರ ವಾಗಿ ‘ಗೌಡಾ’ ಪಡೆದವರು ತಮ್ಮ ಹೆಸರಿನೊಂದಿಗೆ ಡಾ. ಸೇರಿಸಿಕೊಳ್ಳಬಾರದೆಂಬ ನಿಯಮವಿದೆ. ಹೀಗಿದ್ದೂ ಡಾ.ರಾಜಕುಮಾರ್, ಡಾ.ವಿಷ್ಣುವರ್ಧನ್ ಮುಂತಾದ ಕೆಲವರು ಬಳಸುವುದನ್ನು ಯಾರೂ ಆಕ್ಷೇಪಿಸದೆ ಇದೊಂದು ಟ್ರೆಂಡ್ ಆಯಿತು. ಭಾರತದ ಯಾವುದೇ ಅಧಿಕೃತ ವಿಶ್ವವಿದ್ಯಾಲಯವು ತನ್ನ ವಾರ್ಷಿಕ ಘಟಿಕೋತ್ಸವದ ಪ್ರಯುಕ್ತ ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಮೂವರನ್ನು ಗುರುತಿಸಿ ಗೌಡಾ ಪದವಿ ನೀಡಬಹುದು. ಗೌಡಾ ಪದವಿಗಾಗಿ ಗಣ್ಯ ವ್ಯಕ್ತಿಗಳನ್ನು ಆಯ್ಕೆ ಮಾಡಲು ಆಯ್ಕೆ ಸಮಿತಿಗಳಿರುತ್ತವೆ. ಇದಕ್ಕೆ ರಾಜ್ಯಪಾಲರ ಅನಮೋದನೆಯೂ ಅಗತ್ಯವಾಗಿರುತ್ತದೆ. ಉಳಿದಂತೆ ಯಾವುದೇ ಸಂಘ ಸಂಸ್ಥೆಗಳು ಗೌಡಾ ಪದವಿಯನ್ನು ನೀಡುವಂತಿಲ್ಲ.
ವರ್ಚುಯಲ್ ಗ್ಲೋಬಲ್ ಪೀಸ್ ಯೂನಿವರ್ಸಿಟಿ ಎಂಬ ಯಾವುದೇ ಅಧಿಕೃತ ವಿಶ್ವವಿದ್ಯಾಲಯ ಅಸ್ತಿತ್ವದಲ್ಲಿರುವುದಿಲ್ಲ. ಫೇಕ್ ಡಾಕ್ಟರೇಟ್ ಕೊಡುವ ಫೇಕ್ ಸಂಸ್ಥೆಗಳನ್ನು ಸರ್ಕಾರವೇ ಮಟ್ಟಹಾಕಬೇಕು. ನಾವು ಇವುಗಳ ವಿರುದ್ಧ ಅರಿವು ಮೂಡಿಸಬೇಕು. ನೆರೆಯ ತಮಿಳುನಾಡಿನ ಯಾವುದೋ ವಿಳಾಸವಿರದ ವರ್ಚುಯಲ್ ಗ್ಲೋಬಲ್ ಪೀಸ್ ಯೂನಿವರ್ಸಿಟಿ ಇವರ ಸೇವೆಯನ್ನು ಗುರುತಿಸುವುದಾದರೆ ನಮ್ಮದೇ ಕರ್ನಾಟಕದ ವಿಳಾಸವಿರುವ ವಿಶ್ವವಿದ್ಯಾಲಯಗಳು ಇವರ ದೊಡ್ಡ ಪರಿಗಣನೀಯ ಸೇವೆಯನ್ನು ಗೌಡಾ ನೀಡಲು ಗುರುತಿಸಬಹುದಿತ್ತಲ್ಲವೇ?
ಡಾ.ವಡ್ಡಗೆರೆ ನಾಗರಾಜಯ್ಯ
8722724174
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy