ತುಮಕೂರು: ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಹಾಗೂ ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿಯ ವತಿಯಿಂದ ಇಂದು ತುಮಕೂರು ನಗರದ ಅಮಾನಿಕೆರೆ ಗಾಜಿನಮನೆಯ ಆವರಣದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಜನ್ಮದಿನಾಚರಣೆಯನ್ನು ಇಂದು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವುದರ ಮೂಲಕ ಆಚರಣೆಯನ್ನು ಮಾಡಲಾಯಿತು.
ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ನಂತರ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಹಾಗೂ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷರಾದ ಎನ್.ಕೆ.ನಿಧಿಕುಮಾರ್ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ಮೈಸೂರು ಸಂಸ್ಥಾನದ ಒಡೆಯರ್ ರಾಜಸಂತತಿಯ 24ನೇ ರಾಜರಾಗಿದ್ದವರು, ಇವರ ಆಳ್ವಿಕೆ 1902 ರಿಂದ 1940 ರವರೆಗೆ ರಾಜ್ಯಭಾರ ಮಾಡಿದಂತಹ ಮಹಾನ್ ನಾಯಕರು. ಶ್ರೀಯುತರು ಕೇವಲ 10 ವರ್ಷದ ಬಾಲಕರಾಗಿದ್ದುದರಿಂದ ಅವರ ತಾಯಿಯವರಾದ, ಮಾತೃಶ್ರೀ ಮಹಾರಾಣಿ ವಾಣಿ ವಿಲಾಸ ಸನ್ನಿಧಾನ ದವರು ರೀಜೆಂಟರಾಗಿ ಆಡಳಿತ ನಿರ್ವಹಣೆ ಮಾಡಿದರು. ರಾಜಕುಮಾರನಿಗೆ ಸೂಕ್ತ ವಿದ್ಯಾಭ್ಯಾಸ, ಆಡಳಿತ ತರಬೇತಿ ಇವುಗಳನ್ನು ಮಹಾರಾಣಿಯವರು ತೀವ್ರ ನಿಗಾ ವಹಿಸಿ ನಡೆಸಿದ ಪರಿಣಾಮವಾಗಿ, ಮೈಸೂರು ರಾಜ್ಯಕ್ಕೆ ಒಬ್ಬ ಸಮರ್ಥ ಆಡಳಿತಗಾರರಾಗಿ ನಾಲ್ವಡಿ ಕೃಷ್ಣರಾಜ ಒಡೆಯರು ದೊರಕಿದ್ದು ಇದೀಗ ಇತಿಹಾಸವೆಂದು ತಿಳಿಸಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಕೊಡುಗೆಯು ನಮ್ಮ ರಾಜ್ಯಕ್ಕೆ ಅಪಾರವಾದದ್ದು ಅವರು ಕಾಲದಲ್ಲಿ ನಿರ್ಮಿತವಾದ ಹಲವಾರು ಸ್ಮಾರಕಗಳು, ಜೊತೆಗೆ ಈಗಿನ ಕೆ.ಆರ್. ಎಸ್ ಅಣೆಕಟ್ಟು ಸೇರಿದಂತೆ ವಿವಿಧ ಕೆರೆ ಕಟ್ಟೆಗಳ ಅಭಿವೃದ್ಧಿ, ಕೈಗಾರಿಕೆಗಳ ಸ್ಥಾಪನೆ, ಕರಕುಶಲ ವಸ್ತುಗಳ ತಯಾರಿಕಾ ಘಟಕಗಳ ಸ್ಥಾಪನೆ ಸೇರಿದಂತೆ ಆಗಿನ ಮೈಸೂರು ಸಂಸ್ಥಾನ (ಆಧುನಿಕ ಕರ್ನಾಟಕ ರಾಜ್ಯದ) ಸರ್ವತೋಮುಖದ ಅಭಿವೃದ್ಧಿಗೆ ಒಡೆಯರ್ ರವರ ಕೊಡುಗೆ ಅಪರಾವಾಗಿದ್ದು, ಅವರ ಕಾಲಘಟ್ಟದಲ್ಲಿಯೇ ಬುಡಕಟ್ಟು, ಪರಿಶಿಷ್ಠ ಜಾತಿ ಸೇರಿದಂತೆ ಅತ್ಯಂತ ತಳ ಸಮುದಾಯದವರೂ ಸಹ ಸಮಾಜದಲ್ಲಿ ಗೌರವಯುತವಾಗಿ ಜೀವಿಸಲು ಅವಕಾಶ ಮಾಡಿಕೊಟ್ಟಂತಹವರಾಗಿದ್ದರು ಎಂದರು.
ಆಗಿನ ಮೈಸೂರು ಸಂಸ್ಥಾನದಲ್ಲಿನ ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸವನ್ನು, ಉಚಿತವಾಗಿ ಮತ್ತು ಕಡ್ಡಾಯವಾಗಿ ಆರಂಭಿಸಲಾಯಿತು. ನಾಲ್ವಡಿ ಕೃಷ್ಣರಾಜರ ಮಹತ್ತರ ಸಾಧನೆಯೆಂದರೆ ಮೈಸೂರು ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿದ ಇದು ದೇಶದಲ್ಲೇ ಮೊಟ್ಟಮೊದಲ ವಿಶ್ವವಿದ್ಯಾನಿಲಯವು ನಮ್ಮ ಮೈಸೂರಿನಲ್ಲಿ ತೆರೆದು ದಾಖಲೆ ನಿರ್ಮಿಸಿದ ಕೀರ್ತಿ ನಾಲ್ವಡಿಯವರಿಗೆ ಸಲ್ಲುತ್ತದೆ. ಅವರ ಕಾಲದಲ್ಲಿ ರಾಜ್ಯದ ನಾನಾ ಭಾಗಗಳಲ್ಲಿ 270 ಉಚಿತ ಆಸ್ಪತ್ರೆಗಳು ಕಾರ್ಯಾರಂಭ ಮಾಡಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಸರ್ವತೋಮುಖ ಅಭಿವೃದ್ಧಿಯ ಹರಿಕಾರವೆಂದು ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ಕಾರ್ಯಧ್ಯಕ್ಷರಾದ ತ್ಯಾಗರಾಜು ತಿಳಿಸಿದರು.
ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ಜಿಲ್ಲಾ ಉಪಾಧ್ಯಕ್ಷರಾದ ಎಸ್.ಲಕ್ಷ್ಮೀನಾರಾಯಣ ಮಾತನಾಡುತ್ತಾ ಈಗಿನ ಬೆಂಗಳೂರಿನ ಮಿಂಟೊ ಕಣ್ಣಾಸ್ಪತ್ರೆ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದೆಯೆಂದರೆ ಅದಕ್ಕೆ ಮೂಲ ಕಾರಣ ಒಡೆಯರ್ ರವರು ಜೊತೆಗೆ ಅವರು ವಾಣಿಜ್ಯದ್ಯೋಮದ ಉದ್ದೇಶಕ್ಕಾಗಿ ನಮ್ಮ ರಾಜ್ಯದೇ ಒಂದು ಹಣಕಾಸು ಸಂಸ್ಥೆಯಿರಬೇಕೆಂದು ಮೈಸೂರು ಬ್ಯಾಂಕ್ ಖಾಸಗೀ ಸಹಭಾಗಿತ್ವದೊಡನೆ ಕಾರ್ಯಾರಂಭ ಮಾಡಿಸಿದ ಪ್ರಪ್ರಥಮ ವ್ಯಕ್ತಿ, ಜೊತೆಗೆ 1906ರಲ್ಲಿಯೇ ಸಹಕಾರ ಸಂಘಗಳನ್ನು ಸ್ಥಾಪಿಸಲಾಯಿತು. ರೈತರಿಗಾಗಿ ಜಮೀನು ಅಡಮಾನ ಬ್ಯಾಂಕುಗಳನ್ನು ಸಹ ಇವರ ಆದ್ವರ್ಯದಲ್ಲಿಯೇ ಪ್ರಾರಂಭಿಸಲಾಯಿತು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಜಿಲ್ಲಾ ಅಧ್ಯಕ್ಷರು ಎನ್.ಕೆ. ನಿಧಿ ಕುಮಾರ್, ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಸಮಿತಿ ಸದಸ್ಯರಾದ ರವಿಕುಮಾರ್ ಎನ್., ಜಿಲ್ಲಾ ಉಪಾಧ್ಯಕ್ಷರಾದ ಲಕ್ಷ್ಮೀನಾರಾಯಣ ಎಸ್., ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷರಾದ ಟೈಲರ್ ಜಗದೀಶ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹರೀಶ್ ಕುಮಾರ್ ಡಿ., ಜಿಲ್ಲಾ ಕಾರ್ಯದರ್ಶಿ ತ್ಯಾಗರಾಜ್ ಕೆ., ಕಾರ್ಮಿಕ ಘಟಕದ ತಾಲೂಕು ಅಧ್ಯಕ್ಷರಾದ ಹನುಮನರಸಯ್ಯ, ತಾಲೂಕು ಗೌರವಾಧ್ಯಕ್ಷರಾದ ಗಂಗಾಧರ್ ಜಿ.ಆರ್., ತುಮಕೂರು ನಗರ ಅಧ್ಯಕ್ಷರಾದ ದಿಬ್ಬೂರು ಶ್ರೀನಿವಾಸ್, ಪದಾಧಿಕಾರಿಗಳಾದ ಮಾರ್ಕೆಟ್ ಮಣ್ಣಪ್ಪ, ನಿರ್ವಹಣೆ ಲೇವೇಟ್ ವಿ.ಜಿ., ಯತ್ವಿಕ್ ಜೆ. ನಾಯಕ್ ಸೇರಿದಂತೆ ಇನ್ನು ಮುಂತಾದವರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


