ತುಮಕೂರು: “ಈ ನನ್ನ ಮಗ ನಮ್ಮ ಮಂತ್ರಿ ಹೆಂಗೆ ಗೊತ್ತಾ ದಕ್ಷಿಣ ಕೋರಿಯಾದ ಕಿಂಗ್ ಪಿನ್ ಇದಾನಲ್ಲ ಆ ರೀತಿ. ಹಾಳು ಮಾಡಿಬಿಟ್ಟಿದ್ದಾನೆ ನಮ್ಮ ಜಿಲ್ಲೆಯನ್ನ, ಮಾತು ಎತ್ತಿದ್ರೆ ಹೊಡಿ ಬಡಿ ಕಡಿ ಅಂತಾನೆ” ಎಂದು ಸಚಿವ ಮಾಧುಸ್ವಾಮಿ ವಿರುದ್ಧ ಸ್ವಪಕ್ಷದವರೇ ಮಾತನಾಡಿರುವ ಘಟನೆ ನಡೆದಿದೆ.
ತುಮಕೂರಿನಲ್ಲಿ ಕರೆದಿದ್ದ ಸುದ್ದಿಗೋಷ್ಠಿ ಆರಂಭದಲ್ಲಿ ಸಂಸದ ಜಿ ಎಸ್ ಬಸವರಾಜ್ ಮತ್ತು ಸಚಿವ ಭೈರತಿ ಬಸವರಾಜ್ ಗುಸುಗುಸು ಮಾತನಾಡಿದ್ದು, ಸಚಿವ ಮಾಧುಸ್ವಾಮಿ ಅವರ ಕಾರ್ಯವೈಖರಿ ಬಗ್ಗೆ ಪರಸ್ಪರ ಟೀಕೆ ಮಾಡುತ್ತಾ ಹೋಗುತ್ತಾರೆ. ಆ ಬಳಿಕ ಸುಮ್ಮನಿರು ಆ ಮೇಲೆ ಮಾತನಾಡೋಣ ಎನ್ನುತ್ತಾ ಪತ್ರಿಕಾಗೋಷ್ಠಿ ನಡೆಸಲು ಮುಂದಾಗಿದ್ದಾರೆ.
ಇವರಿಬ್ಬರೂ ಕಾನೂನು ಸಚಿವ ಮಾಧುಸ್ವಾಮಿ ಬಗ್ಗೆ ಹಾಗೂ ಅವರು ಜಿಲ್ಲೆಯಲ್ಲಿ ಮಾಡುತ್ತಿರುವ ಕೆಲಸ, ತಮಗೆ ಯಾವ ರೀತಿ ತೊಂದರೆಯಾಗುತ್ತಿದೆ ಎಂದು ಹೇಳುತ್ತಿರುವುದು ಸ್ಪಷ್ಟವಾಗಿದೆ. ಜಿಲ್ಲೆಯ ಬಿಜೆಪಿ ನಾಯಕರ ಮಧ್ಯೆ ಎಲ್ಲವೂ ಸರಿಯಿಲ್ಲ, ಒಗ್ಗಟ್ಟು ಇಲ್ಲ ಎಂಬುದನ್ನು ಇದು ತೋರಿಸುತ್ತದೆ.
ತುಮಕೂರಿನಲ್ಲಿ ಸ್ಮಾರ್ಟ್ ಸಿಟಿ ಉದ್ಘಾಟನಾ ಸಮಾರಂಭ ಏರ್ಪಡಿಸಲಾಗಿತ್ತು. ಕಾರ್ಯಕ್ರಮ ಉದ್ಘಾಟನೆ ಬಳಿಕ ಸಚಿವ ಭೈರತಿ ಬಸವರಾಜ್ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡಿ ಹೋಗೋಣ ಎಂದು ಕಾನೂನು ಸಚಿವ ಮಾಧುಸ್ವಾಮಿಯನ್ನು ಕರೆದರು. ಅದಕ್ಕೆ ಸಚಿವ ಸಂಪುಟ ಸಭೆ ನೆಪ ಹೇಳಿ ಸಚಿವ ಮಾಧುಸ್ವಾಮಿ ಕಾರ್ಯಕ್ರಮದಿಂದ ಅರ್ಧಕ್ಕೆ ವೇದಿಕೆಯಿಂದ ನಿರ್ಗಮಿಸಿದರು.
ಸಚಿವ ಮಾಧುಸ್ವಾಮಿ ಹೋಗುತ್ತಿರುವುದು ನೋಡಿದರೆ ಸಿಟ್ಟು, ಅಸಮಾಧಾನದಿಂದ ಎದ್ದುಹೋದಂತೆ ಇತ್ತು. ಅವರ ನಡೆ ಸಚಿವ ಭೈರತಿ ಬಸವರಾಜ್ ಮತ್ತು ಸಮಾರಂಭದಲ್ಲಿದ್ದವರಿಗೆ ಇರಿಸು ಮುರುಸು ಉಂಟುಮಾಡಿದ್ದಂತೂ ನಿಜ ಇದೇ ಉರಿಯಲ್ಲಿ ಮಾಧುಸ್ವಾಮಿ ವಿರುದ್ಧ ಕಿಡಿಕಾರಿದ್ದಾರೆ ಎನ್ನಲಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy