ಮಧುಗಿರಿ: ಪಟ್ಟಣದ 19 ವಾರ್ಡ್ ನಲ್ಲಿ ಶಾಸಕ ಎಂ.ವಿ ವೀರಭದ್ರಯ್ಯ ನವರು ಸುಮಾರು ಎಂಟು ಲಕ್ಷದ ಮೌಲ್ಯದ ಶುದ್ಧ ನೀರಿನ ಘಟಕವನ್ನು ಉದ್ಘಾಟನೆ ಮಾಡಿದ್ದರು. ಆದರೆ ಶುದ್ಧ ನೀರಿನ ಘಟಕ ನೋಡಿಕೊಳ್ಳುವವರು ಯಾರು ಇಲ್ಲದ, ಕಾರಣ ಸುತ್ತಮುತ್ತ ನಿಂತಿರುವ ಕೊಚ್ಚೆ ನೀರು ತೊಟ್ಟಿಗೆ ಬಂದು, ಅದೇ ನೀರು ಶುದ್ಧವಾಗಿ ಬರುತ್ತಿತ್ತು.
ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹಣ ವೆಚ್ಚ ಮಾಡಿ ಕುಡಿಯುವ ನೀರಿನ ಘಟಕ ತೆರೆದಿದ್ದರೂ, ಕುಡಿಯಲು ನೀರು ಯೋಗ್ಯವಲ್ಲದ ಕಾರಣ ಸಾರ್ವಜನಿಕರು ಯಾರು ನೀರನ್ನೂ ಕುಡಿಯುತ್ತಿರಲಿಲ್ಲ. ಇದನ್ನು ಮನಗಂಡ ಕನ್ನಡ ಜಾಗೃತಿ ವೇದಿಕೆಯ ಪದಾಧಿಕಾರಿಗಳು ಸ್ವತಃ ಸ್ಥಳಕ್ಕೆ ಹೋಗಿ ನೀರನ್ನು ಕುಡಿದು ಪರೀಕ್ಷಿಸಿದಾಗ ನೀರು ಅಶುದ್ಧಿಯಾಗಿ ಬರುತ್ತಿರುವುದು ಕಂಡುಬಂದಿತು.
ಕುಡಿಯುವ ನೀರಿನ ಘಟಕದ ದುಸ್ಥಿತಿ ಕಂಡ ಕನ್ನಡ ಜಾಗೃತಿ ವೇದಿಕೆಯ ಪದಾಧಿಕಾರಿಗಳು ನಮ್ಮ ತುಮಕೂರು ನ್ಯೂಸ್ ಗೆ ಮಾಹಿತಿ ತಿಳಿಸಿದ್ದು, ಈ ವಿಚಾರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಸುದ್ದಿ ನಮ್ಮ ತುಮಕೂರು ನ್ಯೂಸ್ ಚಾನಲ್ ನಲ್ಲಿ ವರದಿಯಾದ ಬೆನ್ನಲ್ಲೇ ಎಚ್ಚೆತ್ತುಕೊಂಡ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ.
ಸುದ್ದಿ ಪ್ರಕಟವಾಗುತ್ತಲೇ ಸಮಸ್ಯೆಯನ್ನು ಮನವರಿಕೆ ಮಾಡಿಕೊಂಡ ಅಧಿಕಾರಿಗಳು, ಕೇವಲ ಐದು ದಿನಗಳಲ್ಲಿ ಶುದ್ಧ ನೀರಿನ ಘಟಕ ರಿಪೇರಿ ಮಾಡಿಸಿ, ಸ್ವತಃ ಪುರಸಭಾ ಮುಖ್ಯಾಧಿಕಾರಿ (ಪ್ರಭಾರ ) ಫಿರೋಜ್ ಅಮಿರ್ ಮತ್ತು ಪುರಸಭೆ ಜೆ.ಇ. ಇಂಜಿನಿಯರ್ ಸಂಜೀವ್ ಮೂರ್ತಿ ನೀರು ಕುಡಿದು, ಈಗ ನೀರು ಕುಡಿಯಲು ಯೋಗ್ಯವಾಗಿದೆ. ನೀರು ಬೋರ್ ನಿಂದ ನೇರವಾಗಿ ಬರುತ್ತಿದೆ. ಟಿ.ಡಿ.ಎಸ್ 24 ಇದೆ. ಸಾರ್ವಜನಿಕರು ಹಿಂಜರಿಯದೆ ನೀರಿನ್ನು ಉಪಯೋಗಿಸಿಕೊಳ್ಳಿ ಎಂದು ಮಾಹಿತಿ ನೀಡಿದರು.
ನಂತರ ಕನ್ನಡ ಜಾಗೃತಿ ವೇದಿಕೆ ಅಧ್ಯಕ್ಷ ರಾಘವೇಂದ್ರ ನಮ್ಮ ತುಮಕೂರು ಮಾಧ್ಯಮದೊಂದಿಗೆ ಮಾತನಾಡಿ, ಪಟ್ಟಣದ 19ನೇ ವಾರ್ಡನಲ್ಲಿ ಉದ್ಘಾಟನೆಗೊಂಡಿದ್ದ ಶುದ್ಧ ನೀರಿನ ಘಟಕದಲ್ಲಿ ನೀರು ಕುಡಿಯಲು ಯೋಗ್ಯವಾಗಿರಲಿಲ್ಲ. ನಮ್ಮ ಸಂಘಟನೆಯಿಂದ ಸ್ವತಃ ನೀರು ಕುಡಿದು ನೋಡಿದಾಗ ನೀರು ಅಶುದ್ದಿಯಾಗಿತ್ತು. ಇದನ್ನು ನಾವು ಮಾಧ್ಯಮಗಳ ಮೂಲಕ ಅಧಿಕಾರಿಗಳಿಗೆ ಮುಟ್ಟಿಸಿದೆವು, ಕೂಡಲೇ ಎಚ್ಚೆತ್ತುಕೊಂಡ ಅಧಿಕಾರಿಗಳು ಶುದ್ಧ ನೀರಿನ ಘಟಕವನ್ನು ಸರಿಪಡಿಸಿದ್ದಾರೆ, ಈಗ ನೀರನ್ನು ಸಾರ್ವಜನಿಕರೆಲ್ಲರೂ ಕುಡಿಯಲು ಉಪಯೋಗಿಸಬಹುದು ಎಂದು ತಿಳಿಸಿದರು. ನಮ್ಮತುಮಕೂರು ಮಾಧ್ಯಮದ ವರದಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿಶೇಷ ವರದಿ: ಅಬಿದ್ ಮಧುಗಿರಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz