ವಿಧಾನಸಭೆ ಚುನಾವಣೆಯಲ್ಲಿ ಮಾಡಿದ ಸ್ವಯಂಕೃತ ಅಪರಾಧದಿಂದ, ಚುನಾವಣೆಯಲ್ಲಿ ಸೋತು ಗೋವಿಂದರಾಜನಗರ ಜನರಿಗೆ ಅಪಚಾರ ಮಾಡಿದ್ದೇನೆ. ಈ ಮೂಲಕ ನನ್ನ ಕಾಲಿನ ಮೇಲೆ ನಾನೇ ಕಲ್ಲು ಹಾಕಿಕೊಂಡಿದ್ದೇನೆ ಎಂದು ಮಾಜಿ ಸಚಿವ ವಿ ಸೋಮಣ್ಣ ಹೇಳಿದ್ದಾರೆ.
ತಮ್ಮ ನಿವಾಸದಲ್ಲಿ ಇಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ನನಗೆ ವಿಧಾನಸಭಾ ಚುನಾವಣೆಯಲ್ಲಿ ನಮ್ಮವರೇ ಮೋಸ ಮಾಡಿದರು. ಅದು ಎಲ್ಲರಿಗೂ ಗೊತ್ತು. ನಮ್ಮ ನಾಯಕರ ಒತ್ತಾಯಕ್ಕೆ ಮಣಿದು ನಾನು ಎರಡು ಕಡೆ ಸ್ಪರ್ಧೆ ಮಾಡಿದ್ದೆ. ಹೈಕಮಾಂಡ್ ಕೊಟ್ಟ ಟಾಸ್ಕನ್ನು ನಾನೊಬ್ಬನೇ ಸೀರಿಯಸ್ ಆಗಿ ತೆಗೆದುಕೊಂಡು ಕೆಲಸ ಮಾಡಿದೆ. ಇಷ್ಟಾದರೂ ನಾನು ಚುನಾವಣೆಯಲ್ಲಿ ಸೋತೆ ಎಂದು ಪರೋಕ್ಷವಾಗಿ ಸ್ವಪಕ್ಷದ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಒಂದು ಕಡೆ ಮೂರು ಸಾವಿರ ವೋಟ್‌ನಲ್ಲಿ ಸೋತೆ, ಇನ್ನೊಂದು ಕಡೆ 70 ಸಾವಿರ ವೋಟ್ ತೆಗೆದುಕೊಂಡೆ. ನಾನು ಹೇಗೆ ಸೋತೆ ಎಂಬುದು ಎಲ್ಲರಿಗೂ ಗೊತ್ತು. ಅದನ್ನು ನನ್ನ ಬಾಯಿಂದ ಬಿಡಿಸಬೇಡಿ ಎಂದರು.
ಇನ್ನು ಪಕ್ಷದಲ್ಲಿ ರಾಜ್ಯಾಧ್ಯಕ್ಷ ಸ್ಥಾನ ಕೊಡಿ ಎಂದು ಕೇಳಿದ್ದೇನೆ. ಆಗಲಿಲ್ಲವೆಂದರೆ ಅಂದರೆ ಎರಡು ಕಾರ್ಯಾಧ್ಯಕ್ಷ ಸ್ಥಾನ ಸೃಷ್ಟಿ ಮಾಡಿ. ನನಗೆ ಅಧ್ಯಕ್ಷ ಸ್ಥಾನ ಕೊಟ್ರೆ ಅದರ ಮಜಾನೇ ಬೇರೆ. ನಾನು ಕೆಲಸ ಮಾಡುವುದರಲ್ಲಿ ಹಿಂದೆ ಬೀಳುವುದಿಲ್ಲ ಎಂದು ಸೋಮಣ್ಣ ಹೇಳಿದರು.


