ತುಮಕೂರು: ಕಲ್ಪತರು ನಾಡು ತುಮಕೂರು ಈಗ ರಾಷ್ಟ್ರೀಯ ಮಟ್ಟದ ಕ್ರೀಡಾ ಸಂಭ್ರಮಕ್ಕೆ ಸಜ್ಜಾಗಿದೆ. ಇದೇ ಏಪ್ರಿಲ್ 24ರಿಂದ ಮೂರು ದಿನಗಳ ಕಾಲ ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ’24ನೇ ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ ಕ್ರೀಡಾಕೂಟ’ (U–20) ಆಯೋಜನೆಯಾಗಿದ್ದು, ಜಿಲ್ಲೆಗೆ ಈ ಪ್ರತಿಷ್ಠಿತ ಕೂಟದ ಆತಿಥ್ಯ ವಹಿಸುವ ಅವಕಾಶ ಒದಗಿ ಬಂದಿದೆ.
ಈ ಬಾರಿಯ ಕ್ರೀಡಾಕೂಟ ಕೇವಲ ಸ್ಪರ್ಧೆಯಲ್ಲ, ಬದಲಾಗಿ ಅಂತರರಾಷ್ಟ್ರೀಯ ಮಟ್ಟಕ್ಕೆ ಏರಲು ಕ್ರೀಡಾಪಟುಗಳಿಗೆ ಇರುವ ದೊಡ್ಡ ಅವಕಾಶ. ಆಗಸ್ಟ್ 5 ರಿಂದ 9 ರವರೆಗೆ ಅಮೆರಿಕದ ಒರೆಗನ್ ಸ್ಟೇಟ್‌ನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್ ಶಿಪ್ ಗೆ ಭಾರತವನ್ನು ಪ್ರತಿನಿಧಿಸುವ ಅಥ್ಲೀಟ್ ಗಳನ್ನು ಈ ಕೂಟದ ಮೂಲಕ ಆಯ್ಕೆ ಮಾಡಲಾಗುವುದು ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಮಾಹಿತಿ ನೀಡಿದ್ದಾರೆ.
ರಾಷ್ಟ್ರದಾದ್ಯಂತ ವಿವಿಧ ರಾಜ್ಯಗಳಿಂದ ಸುಮಾರು 1500 ಕ್ರೀಡಾಪಟುಗಳು ಆಗಮಿಸಲಿದ್ದಾರೆ. ಒಟ್ಟು 40 ವಿವಿಧ ಅಥ್ಲೆಟಿಕ್ ಸ್ಪರ್ಧೆಗಳು ನಡೆಯಲಿವೆ. ರಾಜ್ಯದಿಂದ 110 ಅಥ್ಲೀಟ್ ಗಳು ಪಾಲ್ಗೊಳ್ಳುತ್ತಿದ್ದು, ಅದರಲ್ಲಿ 6 ಮಂದಿ ತುಮಕೂರು ಜಿಲ್ಲೆಯವರೇ ಆಗಿರುವುದು ವಿಶೇಷ. ನಿಖರ ಫಲಿತಾಂಶಕ್ಕಾಗಿ ‘ಫೋಟೋ ಫಿನಿಷ್’ ನಂತಹ ಅತ್ಯಾಧುನಿಕ ತಾಂತ್ರಿಕ ಉಪಕರಣಗಳನ್ನು ಬಳಸಲಾಗುವುದು. ಕ್ರೀಡಾಕೂಟದಲ್ಲಿ ಯಾವುದೇ ಅಕ್ರಮ ನಡೆಯದಂತೆ ತಡೆಯಲು ‘ಡೋಪ್ ಟೆಸ್ಟ್’ (ಉದ್ದೀಪನ ಮದ್ದು ಪರೀಕ್ಷೆ) ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಬೆಂಗಳೂರು ಹೊರತುಪಡಿಸಿ ಜಿಲ್ಲಾ ಕೇಂದ್ರವೊಂದರಲ್ಲಿ ಇಂತಹ ಬೃಹತ್ ಕ್ರೀಡಾಕೂಟ ನಡೆಯುತ್ತಿರುವುದು ಇದೇ ಮೊದಲು. ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಅಭಿವೃದ್ಧಿಪಡಿಸಲಾದ ವಿಶ್ವದರ್ಜೆಯ ಸಿಂಥೆಟಿಕ್ ಟ್ರ್ಯಾಕ್ ಮತ್ತು ಅಂತರರಾಷ್ಟ್ರೀಯ ಗುಣಮಟ್ಟದ ಮೂಲಸೌಕರ್ಯಗಳೇ ಈ ಆತಿಥ್ಯಕ್ಕೆ ಮುಖ್ಯ ಕಾರಣ ಎಂದು ಸಚಿವರು ಶ್ಲಾಘಿಸಿದರು.
ಏಪ್ರಿಲ್ 24ರಂದು ಬೆಳಿಗ್ಗೆ 11 ಗಂಟೆಗೆ ಕ್ರೀಡಾಕೂಟಕ್ಕೆ ಅಧಿಕೃತ ಚಾಲನೆ ಸಿಗಲಿದೆ. ಅತಿಯಾದ ಬಿಸಿಲಿರುವ ಕಾರಣ, ಕ್ರೀಡಾಪಟುಗಳ ಹಿತದೃಷ್ಟಿಯಿಂದ ಸ್ಪರ್ಧೆಗಳನ್ನು ಮುಂಜಾನೆಯಿಂದ ಬೆಳಿಗ್ಗೆ 10 ಗಂಟೆಯವರೆಗೆ ಹಾಗೂ ಸಂಜೆ ಹಗಲು ಬೆಳಕಿನಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಪರಮೇಶ್ವರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿ.ಪಂ. ಸಿಇಒ ಬಿ.ವಿ. ಅಶ್ವಿಜ, ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ವಿ. ಅಶೋಕ್ ಸೇರಿದಂತೆ ಕರ್ನಾಟಕ ಅಥ್ಲೆಟಿಕ್ ಅಸೋಸಿಯೇಷನ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


