ತುಮಕೂರು: ಆರೆಸ್ಸೆಸ್ ನವರು ಮೂಲತಃ ಭಾರತದವರಲ್ಲ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಿಡಿಕಾರಿದ್ದು, ಟೀಕಾ ಪ್ರಹಾರ ನಡೆಸಿದರು.
ತುಮಕೂರು ನಗರದಲ್ಲಿ ಭಾನುವಾರ ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದಿಂದ ಹಮ್ಮಿಕೊಂಡಿದ್ದ ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಡಾ.ಜಿ.ಪರಮೇಶ್ವರ ಅವರನ್ನು ಮುಖ್ಯಮಂತ್ರಿ ಆಗಲು ಬಿಡಲಿಲ್ಲ. ಈಗ ಡಿ.ಕೆ.ಶಿವಕುಮಾರ್ ಅವರನ್ನು ಮುಗಿಸುವ ಪ್ರಯತ್ನಕ್ಕೆ ಕೈ ಹಾಕಿದ್ದೀರಿ . ಮುಖ್ಯಮಂತ್ರಿ ಕುರ್ಚಿಯ ಮೇಲೆ ಟವಲ್ ಹಾಕಿದ್ದೀರಿ. ಮುಂದೆ ನೀವು ಮತ್ತೆ ಮುಖ್ಯಮಂತ್ರಿಯಾಗುವುದಿಲ್ಲ ಎಂದು ಕಿಡಿಕಾರಿದರು.
ಕಾಂಗ್ರೆಸ್ ಪಕ್ಷದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಡಿ.ಕೆ.ಶಿವಕುಮಾರ್ ಜಾಮೀನಿನ ಮೇಲೆ ಹೊರಗಡೆಯಿದ್ದಾರೆ. ಕಳ್ಳರ ಸಂಘ ಇಟ್ಟುಕೊಂಡಿರುವ ಸಿದ್ದರಾಮಯ್ಯ ಅವರಿಗೆ ಆರೆಸ್ಸೆಸ್ ಬಗ್ಗೆ ಮಾತನಾಡುವ ನೈತಿಕತೆ, ಯೋಗ್ಯತೆಯಿಲ್ಲ ಎಂದು ಟೀಕಿಸಿದರು.
ನಿಮ್ಮನ್ನು ರಾಜಕೀಯದಲ್ಲಿ ಬೆಳೆಸಿದ ದೇವೇಗೌಡರನ್ನು ತುಳಿಯುವ ಕೆಲಸ ಮಾಡಿದೀರಿ. ನಿಮ್ಮಿಂದಾಗಿ ಕಾಂಗ್ರೆಸ್ ಮುಕ್ತ ಕರ್ನಾಟಕವಾಗಿದೆ ನಿಮಗೆ ಧನ್ಯವಾದಗಳು ಎಂದರು.
ಸಿದ್ದರಾಮಯ್ಯ ಅವರು ಹೆಸರು ಬದಲಾವಣೆ ಮಾಡಿಕೊಳ್ಳಬೇಕು. ರಾಮನಿಗೆ ಅವಮಾನ ಮಾಡಬೇಡಿ. ನಿಮ್ಮ ಚಿಂತನೆ, ಬುದ್ಧಿ ರಾವಣನದ್ದು, ಮುಖ ಮಾತ್ರ ರಾಮನದ್ದು ಎಂದು ಹರಿಹಾಯ್ದರು.
ಕುರುಬ ಸಮುದಾಯದ ಬಗ್ಗೆಯೂ ನಿಮಗೆ ಕಾಳಜಿಯಿಲ್ಲ. ಅವರ ಬಗ್ಗೆ ಚಿಂತನೆ ಮಾಡಿಲ್ಲ. ಖರ್ಗೆ, ಪರಮೇಶ್ವರ ಅವರನ್ನು ಮುಗಿಸಿ ಪರಿಶಿಷ್ಟರಿಗೆ ಅನ್ಯಾಯ ಮಾಡಿದ್ದೀರಿ. ಟಿಪ್ಪು ಜಯಂತಿ ಮಾಡಿ ಹಿಂದೂ, ಮುಸ್ಲಿಮರು ಹೊಡೆದಾಡುವ ಹಾಗೆ ಮಾಡಿದ್ದೀರಿ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅವಧಿಯಲ್ಲಿ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರ ಶಾಪ ಕಾಂಗ್ರೆಸ್ ಪಕ್ಷಕ್ಕಿದೆ. ಅತಿ ಹೆಚ್ಚು ಗೋ ಹತ್ಯೆಗಳು ಆಗಿದ್ದು ಸಿದ್ದರಾಮಯ್ಯ ಸರ್ಕಾರದಲ್ಲಿ. ಸಿದ್ದರಾಮಯ್ಯ ಗೋ ಹಂತಕರಿಗೆ ರಕ್ಷಣೆ ನೀಡಿದರು ಎಂದು ಅವರು ಇದೇ ವೇಳೆ ಆರೋಪಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5


