ರಾಜ್ಯಾದ್ಯಂತ ವಿವಾದ ಎಬ್ಬಿಸಿರುವ ಪಿಎಸ್‍ಐ ನೇಮಕಾತಿ ಪರೀಕ್ಷೆ ಸಂಬಂಧ, ಬ್ಲೂಟೂತ್ ಬಳಸಿ ಪರೀಕ್ಷೆ ಬರೆದು ಪಿಎಸ್‍ಐ ಆಗಿ ಆಯ್ಕೆಯಾಗಿರುವವರ ಜನ್ಮ ಜಾಲಾಡಲು ಸಿಐಡಿ ಪೊಲೀಸರು ತಂತ್ರಜ್ಞಾನದ ಮೊರೆ ಹೋಗಿದ್ದಾರೆ.
ಒಂದು ವೇಳೆ ಯಾರಾದರೂ ಈ ಹಿಂದೆ ಬ್ಲೂಟೂತ್ ಬಳಿಸಿ ಪರೀಕ್ಷೆ ಬರೆದು ಪಿಎಸ್‍ಐ ಹುದ್ದೆ ಗಿಟ್ಟಿಸಿದ್ದರೆ, ಕಾನೂನಿನ ಕುಣಿಕೆ ಬೀಳುವುದು ಖಚಿತ ಎನ್ನಲಾಗುತ್ತಿದೆ. ಯಾರಿಗೂ ಕಾಣದಂತೆ ಕಿವಿಯೊಳಗೆ ಬ್ಲೂಟೂತ್ ಬಳಸಿ ಪರೀಕ್ಷೆ ಬರೆದು ಅಕ್ರಮ ಎಸಗುತ್ತಿರುವುದು ಮೊದಲಿನಿಂದಲೂ ಕೇಳಿ ಬರುತ್ತಿದೆ.
ಈ ರೀತಿ ಪರೀಕ್ಷೆ ಬರೆದು ಪಿಎಸ್‍ಐ ಹುದ್ದೆ ಗಿಟ್ಟಿಸಿರುವ ಅಭ್ಯರ್ಥಿಗಳನ್ನು ಪತ್ತೆ ಮಾಡಲು ಸಿಐಡಿ ಪೊಲೀಸರು ಈಗ ಸ್ಮಾರ್ಟ್ ಐಡಿಯಾ ಬಳಸುತ್ತಿದ್ದು, ಪರೀಕ್ಷೆ ಬರೆದ ಎಲ್ಲಾ ಅಭ್ಯರ್ಥಿಗಳ ಮೊಬೈಲ್ ಕರೆಗಳ ವಿವರಗಳನ್ನು ಪರಿಶೀಲಿಸಲು ಮುಂದಾಗಿದ್ದಾರೆ.
ಪರೀಕ್ಷೆ ನಡೆದ ಸಮಯದಲ್ಲಿ ಅಭ್ಯರ್ಥಿಗಳ ಮೊಬೈಲ್‍ಗೆ ಯಾವುದಾದರೂ ಕರೆ ಹೋಗಿದೆಯಾ? ಕರೆ ಯಾವ ನಂಬರ್‍ನಿಂದ ಹೋಗಿದೆ? ಎಷ್ಟು ನಿಮಿಷ ಮಾತನಾಡಿದ್ದಾರೆ? ಎಂಬುದರ ತಾಂತ್ರಿಕ ವಿವರಗಳನ್ನು ಸಿಐಡಿ ಪೊಲೀಸರು ಕಲೆ ಹಾಕುತ್ತಿದ್ದಾರೆ.
ಪರೀಕ್ಷೆ ಸಮಯದಲ್ಲಿ ಯಾವೆಲ್ಲಾ ಅಭ್ಯರ್ಥಿಗಳ ಮೊಬೈಲ್‍ಗಳಿಗೆ ಕರೆ ಹೋಗಿದೆ. ಅವರ ಮೊಬೈಲ್‍ಗಳಲ್ಲಿ ಎರಡು ಸಿಮ್ ಇದ್ದರೆ, ಎರಡೂ ಸಿಮ್‍ಗಳ ಮೊಬೈಲ್ ಕರೆಗಳನ್ನು (ಪರೀಕ್ಷಾ ಅವ ಮಾತ್ರ ) ಪಡೆದು ಅನ್ವೇಷಣೆ ನಡಸುತ್ತಿದ್ದಾರೆ.
ಒಂದು ವೇಳೆ ಯಾರಾದರೂ ಬ್ಲೂಟೂತ್ ಬಳಸಿ ಪರೀಕ್ಷೆ ಬರೆದಿದ್ದರೆ ಸಿಕ್ಕಿ ಬೀಳುವುದಂತೂ ಖಚಿತ ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ.
ಬ್ಲೂಟೂತ್ ಬಳಿಸಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳ ಜಾಡು ಹಿಡಿದು ತನಿಖೆ ನಡೆಸಲು ಸಿಐಡಿ ಪೊಲೀಸರು ಟವರ್ ಡಂಪ್ ಟೆಕ್ನಾಲಜಿಯಿಂದಲೂ ಅಕ್ರಮ ಪಿಎಸ್‍ಐಗಳ ಪತ್ತೆ ಮಾಡಲಿದ್ದಾರೆ.
ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯಲ್ಲಿ ಯಾವ ಮೊಬೈಲ್‍ಗಳು ಕಾರ್ಯ ನಿರ್ವಹಿಸಿವೆ, ಅಭ್ಯರ್ಥಿಗಳ ಮೊಬೈಲ್ ಸಂಖ್ಯೆಗಳು ಕಾರ್ಯ ನಿರ್ವಹಿಸುತ್ತಿರುವ ಪ್ರದೇಶ, ಅಭ್ಯರ್ಥಿಗಳ ಮೊಬೈಲ್ ಸಂಖ್ಯೆ ಯಾವ ಟವರ್ ವ್ಯಾಪ್ತಿಯಲ್ಲಿದೆ, ಪರೀಕ್ಷೆ ಸಮಯದಲ್ಲಿ ಕರೆಗಳು ಹೋಗಿವೆಯಾ ಎಂಬುದರ ಸಮಗ್ರ ವಿವರಗಳನ್ನು ಪಡೆದು ತನಿಖೆ ನಡೆಸುತ್ತಿದ್ದಾರೆ.
ಈ ಮೂಲಕ ಪಿಎಸ್‍ಐ ಆಗಿ ನೇಮಕವಾಗಿರುವ ಅಷ್ಟೂ ಅಭ್ಯರ್ಥಿಗಳು ಬರೆದಿರುವ ಪರೀಕ್ಷಾ ಕೇಂದ್ರಗಳು ಟವರ್ ಡಂಪ್ ತನಿಖೆ ಸ್ಕ್ಯಾನ್‍ಗೆ ಒಳಪಡಲಿವೆ. ಈ ಮೂಲಕವೂ ಬ್ಲೂಟೂತ್ ಪಿಎಸ್‍ಐಗಳನ್ನು ಪತ್ತೆ ಹಚ್ಚಲಿದ್ದಾರೆ. ಬ್ಲೂಟೂತ್ ಬಳಸಿ ಪಿಎಸ್‍ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಎಸಗಿದ ಸಂಬಂಧ ಈಗಾಗಲೇ ನಾಲ್ವರು ಅಭ್ಯರ್ಥಿಗಳು, ಇಬ್ಬರು ಕಿಂಗ್‍ಪಿನ್‍ಗಳು ಸಿಕ್ಕಿಬಿದ್ದಿದ್ದಾರೆ.
ಪಿಎಸ್‍ಐ ನೇಮಕಾತಿ ಪರೀಕ್ಷೆಯಲ್ಲಿ ಸ್ಮಾರ್ಟ್ ಆಗಿ ಅಕ್ರಮ ಎಸಗಿದ್ದ ಅಭ್ಯರ್ಥಿಗಳ ಭೇಟಿಗೆ ಸಿಐಡಿ ಪೊಲೀಸರು ಸ್ಮಾರ್ಟ್ ಐಡಿಯಾ ಬಳಸಿದ್ದಾರೆ.
ವರದಿ ಆಂಟೋನಿ ಬೇಗೂರು


