ಆಶ್ರಯವಿಲ್ಲದೆ ಜೀವಗಳಿಗೆ ಬದುಕು ಸವಾಲಾಗಿ ಬಿಡುತ್ತದೆ. ಇಡೀ ಜೀವನವೆಲ್ಲಾ ಕೆಸರಲ್ಲಿ ನಡೆಯುವ ಅನುಭವ .ಎಲ್ಲಿ ತಪ್ಪು ಹೆಜ್ಜೆ ಇಟ್ಟರು ಜಾರಿ ಬೀಳುವ ಭಯ. ಸಂಬಂಧಗಳು ಗಟ್ಟಿಯಾಗಿ ನಿಲ್ಲುವ ಬದಲಿಗೆ ಕಿತ್ತು ಹೋಗುವ ಸಂಭವವೇ ಹೆಚ್ಚು. ಆಗ ನನಗೆ 18ರ ಪ್ರಾಯ .ಬಹಳ ಪ್ರಯಾಸದಿಂದ 10 ನೇ ತರಗತಿ ಮುಗಿಸಿದ್ದೆ. ಅಪ್ರಬುದ್ಧ ವಯಸ್ಸು. ಕನಸು ಕಾಣುವ ಹಂಬಲ ಎಲ್ಲರಂತೆ ಓದು ಮುಂದುವರಿಸುವ ಆಸೆ. ಕಂಡ ಕನಸೆಲ್ಲಾ ನನಸಾಗುವುದು ಸುಲಭದ ಮಾತಲ್ಲ.
ಇಸ್ಲಾಮಿನ ಶಿಕ್ಷಣ ಪಡೆದಿದ್ದ ತಂದೆಯವರು ಊರಿನ ಮಸೀದಿಯಲ್ಲಿ ಮೌಲವಿಗಳಾಗಿ ಸೇವೆಸಲ್ಲಿಸುತ್ತಿದ್ದರು. ಆಗ ಅವರಿಗೆ ತಿಂಗಳ ಸಂಬಳದ ರೂಪದಲ್ಲಿ 40 ರೂಪಾಯಿ ಊರಿನ ಹಿರಿಯರು ವಂತಿಗೆ ರೂಪದಲ್ಲಿ ಕೊಡುತ್ತಿದ್ದರು. ನಿಗದಿತ ಹಣ ಸರಿಯಾಗಿ ತಲುಪಿದ್ದು ಕಾಣಲಿಲ್ಲ. ತಿಂಗಳೆಲ್ಲಾ ಊರಿನ ಉಸಾಬರಿ ಮಾಡಿದರೂ ಕೊಡುವ ದುಡ್ಡು 4 ದಿನಕ್ಕೆ ಸಾಕಾಗುತ್ತಿರಲಿಲ್ಲ. ಗುಡಿಸಲ ಬದುಕು ಮೂರಾಬಟ್ಟೆ ಎಂಬಂತೆ ಬಡತನ ಕಿತ್ತು ತಿನ್ನುತ್ತಿತ್ತು. ಮಕ್ಕಳಿಂದ ತುಂಬಿದ ಸಂಸಾರ. ಮೂರು ಗಂಡು ನಾಲ್ಕು ಹೆಣ್ಣು ಮಕ್ಕಳು. ತಂದೆ-ತಾಯಿ ಸೇರಿ 9 ಜೀವಗಳು 40 ರೂಪಾಯಿ ಭರವಸೆಯಲ್ಲಿ ಸಂಸಾರ ನೌಕೆ ಸಾಗಬೇಕಾಯಿತು. ಹಬ್ಬ-ಹರಿದಿನಗಳಲ್ಲಿ ಸಿಗುವ ದಾನ-ಧರ್ಮ ನಮಗೆ ಪಂಚಾಮೃತ. ಊರಲ್ಲಿ ಯಾವುದಾದರೂ ಶುಭಕಾರ್ಯ ವಿದ್ದರೆ ಅಂದು ಮನೆಮಂದಿಗೆಲ್ಲ ರಾಜ ಭೋಜನ ಮನೆಯ ಆತಿಥ್ಯ ವೆಂಬಂತೆ ಅನುಭವ. ರಾತ್ರಿ 10:00 ಗಂಟೆ ಆದರೂ ಕಾಯುವ ಗಟ್ಟಿ ಮನಸ್ಸು. ಅಪ್ಪಿತಪ್ಪಿ ಊಟಕ್ಕೆ ಕರೆಯುವುದನ್ನು ಮರೆತರೆ ಅಂದು ನಮಗೆ ಏಕಾದಶಿ.
ತಿಳಿದೋ ತಿಳಿಯದೆಯೋ ನಾನು ಕೇಳಿದೆ. “ಅಬ್ಬಾ ಜಾನ್, ನನಗೆ ಇಷ್ಟೊಂದು ಜನ ತಮ್ಮ- ತಂಗಿಯರು ಬೇಕಾಗಿತ್ತಾ”? ಅಮ್ಮಿನನ್ನ ಬಾಯಿ ಮುಚ್ಚಲು ಪ್ರಯತ್ನಿಸಿದರು. ತಂದೆಯವರು ಮಾತ್ರ ಮಾತನಾಡದೆ ತಲೆತಗ್ಗಿಸಿದರು. ಸಂಕೋಚವೋ ಅಥವಾ ನಾಚಿಕೆಯೋ ತಿಳಿಯದು “ಅಲ್ಲಾಹ ಕೊಟ್ಟಿದ್ದು” ಎಂದು ಮೌನಕ್ಕೆ ಶರಣಾಗುತ್ತಿದ್ದರು .ಅವರಿಗೆ ಕುಟುಂಬ ಯೋಜನೆಯ ಅರಿವಿಲ್ಲದಿರಬಹುದು. ನನಗೆ ವ್ಯಾವಹಾರಿಕ ಜ್ಞಾನವಿಲ್ಲದಿದ್ದರೂ ಕಿತ್ತುತಿನ್ನುವ ಬಡತನ ನಾಲಿಗೆಯಿಂದ ಶಬ್ದಗಳು ಹೇಳಿಸುತಿತ್ತು. ಗಂಡು ಮಕ್ಕಳಾದ ನಾವು ತೇಪೆ ಹಚ್ಚಿದ ಲಂಗೋಟಿಯಲ್ಲಿ ಊರು ಕೇರಿ ಸುತ್ತಾಡಿ ಬರುತ್ತಿದ್ದೆವು. ಹೆಣ್ಣುಮಕ್ಕಳು ರಾತ್ರಿವೇಳೆಯಲ್ಲಿ ಕೆಲಸ ಕಾರ್ಯದಲ್ಲಿ ತೊಡಗಬೇಕಾಗಿತ್ತು. ಕಾರಣವಿಷ್ಟೇ , ದೇಹ ಸರಿಯಾಗಿ ಮುಚ್ಚಿಕೊಳ್ಳಲು ಬಟ್ಟೆಯಿರಲಿಲ್ಲ. ಮರ್ಯಾದೆಯ ಅಂಜಿಕೆ. ಅಮ್ಮ ತನ್ನ ಸೀರೆಯಲ್ಲಿ ಅರ್ಧ ಹರಿದು ಲಂಗ ಮಾಡಿಕೊಡುವ ದೃಶ್ಯ ಮನಸ್ಸಿಗೆ ತ್ರಿಶೂಲ ದಂತೆ ಚುಚ್ಚುತ್ತಿತ್ತು.
ಬಹಳಷ್ಟು ಬಂಧು ಬಳಗವಿತ್ತು. ಅವರಿಂದ ನಿರೀಕ್ಷಿಸಿದಷ್ಟು ಮರೀಚಿಕೆಗೆ ಸಮ. ಹಬ್ಬ ಹುಣ್ಣಿಮೆಗಳಲ್ಲಿ ಅಪ್ಪ ಗಂಡಸಿ ಸಂತೆಯಿಂದ ತರುವ ಹರಾಜಿನ ಬಟ್ಟೆ, ಎರಡು ಕೆಜಿ ಅಕ್ಕಿ ,1ಕೆಜಿ ಕೇರಿ ಬೆಲ್ಲಕ್ಕೆ ಕಾದು ಕುಳಿತಿರುತ್ತಿದ್ದೆವು .ಅದಕ್ಕಿಂತ ಮಿಗಿಲಾಗಿ 12 ಆಣೆಯ ಖಾರ ಪುರಿಗಾಗಿ ಕಾದಿರುತಿದ್ಧೆವು. ನಾನು ಹಿರಿಯ ಮಗನಾದ್ದರಿಂದ ಹತ್ತನೇ ತರಗತಿಯವರಿಗೆ ಓದಿಸಿದ್ದು ಅಪ್ಪ ಅಮ್ಮನಿಗೆ ಸಾಕಾಗಿತ್ತು. ತಮ್ಮ- ತಂಗಿಯರನ್ನು ಮೂರರಿಂದ ನಾಲ್ಕನೇ ತರಗತಿಯವರೆಗೆ ಓದಿಸಿ ಮುಂದೆ ಓದಿಸಲಾಗದೆ ಶಾಲೆ ಬಿಡಿಸಿ ತೆಂಗಿನ ಸೋಗೆ ಕಡ್ಡಿಸಿಗಿಯುವ ಕೆಲಸಕ್ಕೆ ಹಚ್ಚಿದರು. ಸಂಸಾರದ ಹೊಣೆ ಹೊರುವಷ್ಟು ನನ್ನಲ್ಲಿ ಶಕ್ತಿ ಇರಲಿಲ್ಲ.
ನನ್ನ ತಂಗಿ ಸಾಯಿರಾಬಾನು ನಾಲ್ಕನೇ ತರಗತಿಯಲ್ಲಿ ಓದುತ್ತಿರಬೇಕಾದರೆ ನಮ್ಮೂರ ಪೂಜಾರಿ ಚಿಕ್ಕಣ್ಣನವರ ಮಗಳು ರಂಗಮ್ಮ ನಿಂದ ಹಳೆಯ ಪುಸ್ತಕಗಳನ್ನು ಅರ್ಧ ಬೆಲೆಗೆ ಪಡೆದಿದ್ದಳು. ಎಲ್ಲ ಪುಸ್ತಕಗಳ ಬೆಲೆ ಮೂರುವರೆ ರೂಪಾಯಿ ಕೊಡದಿದ್ದಕ್ಕೆ ಪುಸ್ತಕಗಳು ವಾಪಸ್ಸು ತೆಗೆದುಕೊಂಡಿದ್ದರಿಂದ ಓದು ಅರ್ಧಕ್ಕೆ ನಿಲ್ಲಿಸಬೇಕಾಯಿತು. ಹೊಸ ಪುಸ್ತಕಗಳನ್ನು ಕೊಳ್ಳುವಷ್ಟು ತಂದೆಯವರ ಹತ್ತಿರ ಹಣವಿರಲಿಲ್ಲ .
ಗಂಜಿ- ನೀರು ಕುಡಿದು ಕಾಲಕಳೆಯುತ್ತಿದ್ದ ನಮಗೆ ಗಾಯದ ಮೇಲೆ ಬರೆ ಎಳೆದಂತೆ ಸಿಡಿಲು ಬಡಿಯಿತು. ದಿನಕಳೆದಂತೆ ಅಪ್ಪಾಜಿಯವರ ಆರೋಗ್ಯದಲ್ಲಿ ಏರುಪೇರಾಯಿತು. ಮರಕ್ಕೆ ಗೆದ್ದಲು ಹಿಡಿದಂತೆ ಜಾಂಡಿಸ್ ಕಾಯಿಲೆ ತಿಳಿಯದಂತೆ ಲಿವರ್ ತಿಂದಿತ್ತು ಆಸ್ಪತ್ರೆ ಮುಖ ನೋಡಿರದ ಅಂದಿನ ಜನರು ಮೂಢನಂಬಿಕೆಯಲ್ಲಿ ಪ್ರಾಣಕ್ಕೆ ಕುತ್ತು ತಂದುಕೊಂಡರು. ದರ್ಗಾ, ಪಂಡಿತರು, ನಾಟಿ ಔಷಧಿಗಳಲ್ಲಿ ಕಾಲ ಜಾರಿದ್ದು ತಿಳಿಯಲಿಲ್ಲ. ಕೊನೆಯ ಹಂತವೆಂಬಂತೆ ತಿಪಟೂರಿನ ಜನರಲ್ ಆಸ್ಪತ್ರೆಗೆ ಸೇರಿಸಿದರೂ ಚೇತರಿಕೆಯ ಲಕ್ಷಣ ವಿರಲಿಲ್ಲ. 15 ದಿನಗಳವರೆಗೆ ಸಾವು-ನೋವಿನ ಹೋರಾಟದಲ್ಲಿ ಡಾಕ್ಟರ್ ಫೀಸ್ ಕಟ್ಟಲು ಕಾಸಿಲ್ಲದೆ ಪರದಾಡಬೇಕಾಯಿತು. ಅಪ್ಪಾಜಿಯವರ ಆತ್ಮೀಯರು ಆಸ್ಪತ್ರೆಗೆ ಬಂದು ಬೆಂಗಳೂರಿಗೆ ಕರೆದುಕೊಂಡು ಹೋಗಲು ಸಲಹೆ ಕೊಟ್ಟರು. ಆದರೆ ನಾವು ಬೆಂಗಳೂರಿನ ಆಸ್ಪತ್ರೆಗಳಿಗೆ ಕರೆದೊಯ್ಯುವ ಶಕ್ತಿ ನಮ್ಮಲ್ಲಿರಲಿಲ್ಲ .ಡಾಕ್ಟರ್ ನನಗೆ ಕರೆದು “ನೋಡಪ್ಪ ವಾಜಿದ್ ಖಾನ್ , ನಮ್ಮ ಎಲ್ಲಾ ಪ್ರಯತ್ನ ಮಾಡಿದ್ದೇವೆ .ನಿಮ್ಮ ತಂದೆಯವರು ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ. ಡಿಸ್ಚಾರ್ಜ್ ಮಾಡಿಸಿಕೊಂಡು ನಾಲ್ಕು ದಿನ ಮನೆಯಲ್ಲಿಟ್ಟು ಕೊಳ್ಳಿ. ಇನ್ನುಮೇಲೆ ಅಲ್ಲಾಹನ ಇಚ್ಛೆ ಎಂದು ಕೈಚೆಲ್ಲಿದರು.”
ಸ್ವತಂತ್ರ ಪಕ್ಷಿಯಂತೆ ಹಾರಾಡುತ್ತಿದ್ದ ನನ್ನ ಮೇಲೆ ಆಕಾಶವೇ ಕಳಚಿ ಬಿದ್ದಂತಾಯಿತು .ದಿಕ್ಕುತೋಚದ ವನಾಗಿ ತಲೆಯ ಮೇಲೆ ಕೈಹೊತ್ತು ಕುಳಿತೆ. ಅಪ್ಪನ ಕಣ್ಣಲ್ಲಿ ನೀರು ತನ್ನಷ್ಟಕ್ಕೆ ತಾನೇ ಹರಿದುಬರುತ್ತಿತ್ತು. ಅವರು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ .ನನ್ನತಲೆಯಮೇಲೆ ಕೈಯಿಟ್ಟು “ನಡೆ ,ಊರಿಗೆ ಹೋಗೋಣ” ಎಂದರು .ಮನೆಗೆ ವಾಪಸ್ಸಾಗುವಾಗ ದುಃಖ ತಡೆಯಲಾರದೆ ತಂದೆಯವರಿಗೆ ಕೇಳಿದೆ “ಅಬ್ಬಾ ಜಾನ್, ನೀವು ಈ ರೀತಿ ಅನಾಥರನ್ನಾಗಿ ಮಾಡಿ ನಡು ದಾರಿಯಲ್ಲಿ ಬಿಟ್ಟು ಹೋಗುತ್ತಿದ್ದೀರಿ. ಮನೆಮಂದಿಯ ಗತಿಯೇನು? ಬಿಕ್ಷೆ ಬೇಡಿ ತಿನ್ನುವ ಪರಿಸ್ಥಿತಿ ಆಯ್ತಲ್ಲ.” ಅಪ್ಪಾಜಿಯವರ ಬಾಯಿಂದ ಮಾತು ಬರಲೇ ಇಲ್ಲ .ನನ್ನ ಅಂಗೈ ಅದುಮಿ ಹಿಡಿದು ಕಣ್ಣು ಮುಚ್ಚಿಕೊಂಡರು. ಎರಡು ದಿನಗಳ ಸಾವು ಬದುಕಿನ ಜೊತೆ ಹೋರಾಡಿ ಅಲ್ಲಾಹನ ಪಾದ ಸೇರಿಕೊಂಡರು. ಅಮ್ಮಿ ಪ್ರಜ್ಞೆ ತಪ್ಪಿದರು. ಮಕ್ಕಳೆಲ್ಲಾ ಅಪ್ಪನ ಶವದ ಹತ್ತಿರ ಕುಳಿತು ನನ್ನನ್ನು ತಬ್ಬಿ ಮುಗಿಲು ಮುಟ್ಟುವ ಹಾಗೆ ರೋದಿಸುತ್ತಿದ್ದರು. ಸಂತೈಸಲು ನನ್ನ ಹತ್ತಿರ ಶಬ್ದಗಳು ಇರಲಿಲ್ಲ. ನನ್ನ ಭವಿಷ್ಯ ಕಗ್ಗತ್ತಲೆಯ ಕಾಡಾಯಿತು.
ಮುಂದಿನ ಹಾದಿ ಸವಾಲಿಗೆ ಸವಾಲ್ ಆಯಿತು. ಅಕ್ಕಪಕ್ಕದವರು ಶವದ ಹತ್ತಿರ ಉರಿಸಲು ಅಗರಬತ್ತಿ ತನ್ನಿ ಎಂದರು. ಅಗರಬತ್ತಿ ಎಲ್ಲಿಂದ ತರಲಿ ? ಬೆಂಕಿಹಚ್ಚಿ ಗಂಜಿ ಕಾಯಿಸಲು ನಮ್ಮ ಹತ್ತಿರ ಕಾಸಿರಲಿಲ್ಲ. ಶವಕ್ಕೆ ಕಫನ್ (ಶವದ ಬಟ್ಟೆ) ಖರೀದಿ ಮಾಡಲು ಬೇರೆಯವರ ಹತ್ತಿರ ಕೈಚಾಚಬೇಕಾಗಿತ್ತು. ಸಂಬಂಧಿಕರು ಒಬ್ಬೊಬ್ಬರಾಗಿ ಆಗಮಿಸುತ್ತಾ ಅಪ್ಪನ ಮುಖ ನೋಡಿ ಮರುಕದ ಎರಡು ಹನಿ ಉದುರಿಸಿ ಹೊರಟುಹೋಗುತ್ತಿದ್ದರು. ತಾಯಿಯ ಸಂಬಂಧಿಕರೊಬ್ಬರು ಊರ ಪ್ರಮುಖರಾದ ಅಮೀರ್ ಖಾನ್ ರವರಿಗೆ ನನ್ನ ಬಗ್ಗೆ ವಿಚಾರಿಸಿದಾಗ ಅವರ ಮಾತಿನ ಭರಾಟೆಯಲ್ಲಿ ವ್ಯಂಗ್ಯವೋ ಅಥವಾ ಬುದ್ಧಿಮಾತೋ ತಿಳಿಯದು.” ರೀ ನೆಂಟರೆ, ಅವನು ಅಪಾಪೋಲಿ ಮಕ್ಕಳೆಲ್ಲಿ ಸಾಕ್ತಾನೆ? ದೇವರೇ ಕಾಪಾಡಬೇಕು” ಎಂದು ಅವರು ಬೀಡಿ ಸೇದಲಾರಂಭಿಸಿದರು. ಅವರ ಮಾತುಗಳು ಕಲ್ಲು ಹೊಡೆದು ಘಾಸಿಗೊಳಿಸಿದ ಅನುಭವವಾಯಿತು.
ಊರಿನವರೆಲ್ಲ ಸೂರ್ಯಮುಳುಗುವದರಲ್ಲಿ ಖಬರಸ್ಥಾನ ಗೆ ಅಪ್ಪನ ಶವ ತೆಗೆದುಕೊಂಡು ಹೋಗುವ ತರಾತುರಿಯಲ್ಲಿದ್ದರು. ಅಪ್ಪನ ಅಕ್ಕ ರಹೀಂಬೀಯವರು ನಮ್ಮ ಬಗ್ಗೆ ಅನುಕಂಪ ತೋರುತ್ತಿದ್ದರು. ಆ ದಿನದ ಕಫನ್ ಖರ್ಚುಗಳನ್ನೆಲ್ಲ ಅವರೇ ನಿಭಾಯಿಸಿದರು. ಅಪ್ಪನ ಶವಕ್ಕೆ ಹೆಗಲು ಕೊಡುವಷ್ಟು ನನ್ನಲ್ಲಿ ಶಕ್ತಿ ಇರಲಿಲ್ಲ. ದೇಹ ದಫನ್ ಮಾಡಿದ್ದೆ ತಡ ದೂರದ ಊರಿನ ಸಂಬಂಧಿಕರೆಲ್ಲ ಹೊರಟುಹೋದರು. ಊಟ ಮಾಡಲು ಸಹ ಬರಲಿಲ್ಲ .ನಮಗೆ ಹೊಟ್ಟೆ ಹಸಿದಿತ್ತು, ಆದರೆ ತುತ್ತು ಗಂಟಲಲ್ಲಿ ಇಳಿಯಲಿಲ್ಲ. ಅಪ್ಪನ ಆಕೃತಿ ಕಣ್ಮುಂದೆ ತೇಲಿಹೋಯಿತು.
ಮೂರ್ನಾಲ್ಕು ದಿನಗಳಿಂದ ನಿದ್ದೆಯಿಲ್ಲದೆ ಚಡಪಡಿಸಿದ ದೇಹಕ್ಕೆ ವಿಶ್ರಾಂತಿಯ ಅವಶ್ಯಕತೆ ಕಾಡುತ್ತಿತ್ತು. ಒಂದು ಹೊತ್ತಿನಲ್ಲಿ ನಿದ್ದೆ ಬಂದಿದ್ದು ತಿಳಿಯಲೇ ಇಲ್ಲ .ಬೆಳಗ್ಗೆ ಐದು ಗಂಟೆಗೆ ಸರಿಯಾಗಿ ತಲೆಯ ಮೇಲೆ ಹೊಡೆದಂತೆ “ವಾಜಿದ್, ವಾಜಿದ್” ಎಂಬ ಕೂಗು ಕೇಳಿದಾಕ್ಷಣ ಧಡಕ್ಕನೆ ಎದ್ದು ಕುಳಿತೆ. ಕಣ್ಣು ರೆಪ್ಪೆ ಬಿಡುವಷ್ಟರಲ್ಲಿ ನಮ್ಮ ದೊಡ್ಡಪ್ಪ ಹುಸೇನ್ ಖಾನ್ ರವರ ದರ್ಶನವಾಯಿತು.” ಏನೋ, ಇಷ್ಟೊತ್ತು ಮಲಗಿರುವೆ? ಝಿಯಾರತ್ (ಮೂರುದಿನಗಳ ತಿಥಿ) ಮಾಡಬೇಕು.ನಡೆ ಸಾಮಾನು ತರಬೇಕು. ತಿಪಟೂರಿಗೆ ಹೋಗೋಣ ” ಎಂದರು .”ನನ್ನ ಹತ್ತಿರ ದುಡ್ಡಿಲ್ಲ. ದೊಡ್ಡಪ್ಪ ಝಿಯಾರತ್ ಬೇಡ” ಎಂದೆ. ತಂದೆಯವರ ಹಿರಿಯಕ್ಕ ಬೀಬೀಜಾನ್ ಮಧ್ಯೆ ಬಾಯಿ ಹಾಕಿ ಅಯ್ಯೋ ತಮ್ಮನ ರೂಹಾನಿ (ಆತ್ಮ) ಸಂಕಟ ಪಡುತ್ತೆ .ಝಿಯಾರತ್,9 ದಿನದ ಕಾರ್ಯ ಹಾಗೂ ಛೈಲಂ (40 ದಿನದ ಕಾರ್ಯ) ಮಾಡಬೇಕು. ಇಲ್ಲವಾದರೆ ಅತೃಪ್ತ ರುಹಾನಿ ನಮ್ಮನ್ನೆಲ್ಲಾ ಕಾಡುತ್ತೆ” ಎಂದು ತಲೆಯಲ್ಲಿ ಹುಳಬಿಟ್ಟರು. ಮೊದಲೇ ನಿರ್ಗತಿಕರಾದ ನಮಗೆ ತಿಥಿಯ ಅವಶ್ಯಕತೆ ಇತ್ತೇ?”ಅಲ್ಲಾಹ ಇದೆಂತಹ ಪರೀಕ್ಷೆ ಮಾಡುತ್ತಿದ್ದಾನೆ”. ಮೈಯೆಲ್ಲಾ ಪರಿಚಿ ಕೊಳ್ಳಬೇಕು ಎನಿಸಿತು. ದೊಡ್ಡಪ್ಪನ ಮನಕರಗಿತೇನೋ ತಮ್ಮ ಖರ್ಚಿನಲ್ಲಿ 3 ಮತ್ತು ಒಂಬತ್ತು ದಿನದ ಕಾರ್ಯ ಮುಗಿಸಿದರು.
40 ದಿನಗಳ ಛೈಲಂಗೆ ಸಿದ್ಧತೆ ಮಾಡಿಕೊಳ್ಳಬೇಕಾಗಿತ್ತು. ಸಂಬಂಧಿಕರು ಸಹಾಯ ಮಾಡಬಹುದೆಂಬ ನಿರೀಕ್ಷೆಯಲ್ಲಿ 30 ದಿನಗಳು ಕಳೆದುಹೋದವು. ಆದರೆ ನಮ್ಮ ನಿರೀಕ್ಷೆ ಸುಳ್ಳಾಯಿತು. ಅಪ್ಪನ ಆತ್ಮದ ಭಯ ಗಿರಗಿಟ್ಲೆಯಂತೆ ಸುತ್ತುತ್ತಿತ್ತು. ದಾರಿ ತೋಚದೆ ನಾನು ಓದಿದ ಶಾಲೆಯ ಮುಖ್ಯ ಶಿಕ್ಷಕರಾದ ಎಂ ಬಿ ನಿಂಗಪ್ಪ ನವರನ್ನು ಭೇಟಿ ಮಾಡಿ ಕಷ್ಟಗಳನ್ನು ಹಂಚಿಕೊಂಡೆ. ನನ್ನ ಕಥೆಯನ್ನು ಕೇಳಿ ಮಕ್ಕಳಿಂದ ಸಂಗ್ರಹಿಸಿದ 75 ರೂಪಾಯಿ ನನಗೆ ಕೊಟ್ಟರು. ಈ ಹಣ ಕಾರ್ಯಕ್ಕೆ ಸಾಕಾಗುತ್ತಿರಲಿಲ್ಲ. ಅಂದಿನ ದಿನಗಳಲ್ಲಿ ತಿಂದು ಬಿಸಾಕಿದ ಮಾವಿನ ವಾಟೆ ಗಳು ಮಾರಾಟವಾಗುತ್ತಿದ್ದವು. ನನ್ನ ತಮ್ಮ- ತಂಗಿಯರನ್ನು ಚರಂಡಿ ಗಳಲ್ಲಿರುವ ಮಾವಿನ ವಾಟೆ ಗಳನ್ನು ಹಾಯಲು ಕರೆದುಕೊಂಡು ಹೋದೆ. ಒಂದು ಕೆಜಿಗೆ 20 ಪೈಸೆಯಂತೆ ಮಾರಾಟಮಾಡಿ ₹300 ದುಡಿದು ತಂದ ಹಣದಿಂದ ನಲವತ್ತು ದಿನದ ಸಿದ್ಧತೆ ಮಾಡಿ ನೆಂಟರಿಷ್ಟರಿಗೆ ಕರೆದು ಅಪ್ಪನ ಆತ್ಮಕ್ಕಿಂತ ಬಂಧು-ಬಳಗದವರ ಆತ್ಮತೃಪ್ತಿ ಪಡಿಸುವುದರಲ್ಲಿ ಸಾಕುಸಾಕಾಗಿ ಹೋಯಿತು. ಛೈಲಂಗೆ ಖರ್ಚು ಮಾಡಿದ ಹಣ ನಮ್ಮ ಹತ್ತಿರ ಇದ್ದಿದ್ದರೆ 4ತಿಂಗಳ ಗಂಜಿಗೆ ಸಹಾಯವಾಗುತ್ತಿತ್ತು.
ಸಂಸಾರ ನೌಕೆ ನಡೆಸಲು ಯಾವುದಾದರೂ ದಾರಿ ಹುಡುಕಬೇಕಾಯಿತು. ಊರಿನ ಜಮೀನ್ದಾರ್ ಮಂಜುನಾಥ್ ಎಸ್. ಕೆರೆ ಯವರ ತೋಟಕ್ಕೆ ಮಣ್ಣು ಹೊರಲು ಹೋದೆ .ಅಲ್ಲಿ ಹಲವರು ಕೂಲಿ ಕೆಲಸ ಮಾಡುತ್ತಿದ್ದರು. ಅಷ್ಟೇನೂ ವಿದ್ಯಾವಂತರಲ್ಲದವರ ಮಧ್ಯೆ ನಾನು ಮಾತ್ರ 10ನೇ ತರಗತಿ ಪಾಸ್ ಮಾಡಿದ್ದೆ. ನಮ್ಮೂರ ಕುರುಬರ ಬೋಡಿ ನಂಜಪ್ಪ ಅವಿದ್ಯಾವಂತರಾದರೂ ಅವರಿಗೆ ಏಳು ರೂಪಾಯಿ ಕೂಲಿ ಕೊಡುತ್ತಿದ್ದರು. ನನಗೆ ಐದು ರೂಪಾಯಿ ಮಾತ್ರ. ತೋಟದ ಬದಿಯಲ್ಲಿ ತಿಂಡಿ ತಿನ್ನುತ್ತಾ ನಂಜಪ್ಪ ಹೇಳಿದ ಮಾತು” ನಾನು ಹೆಚ್ಚಿಗೆ ಓದದೇ ಇದ್ದರೂ ಕೂಲಿ ಹೆಚ್ಚಾಗಿ ಕೊಡುತ್ತಾರೆ .ನಿನಗೆ ಕಡಿಮೆ. ಎಷ್ಟು ದಿನ ಕೂಲಿ ಮಾಡಿಕೊಂಡು ಇರುತ್ತೀಯ? *ಕೂಲಿ ಮಾಡುವವ* *ಕೊನೆಯವರೆಗೂ ಕೂಲಿ* *ಮಾಡುತ್ತಲೇ ಸಾಯಬೇಕು.* ನೀನು ಏನಾದರೂ ಮಾಡಿ ಓದು ಮುಂದುವರೆಸು.” ಎಂದು ದೇವರಂತೆ ನುಡಿದರು. ಸಾಯಂಕಾಲ ಮನೆಗೆ ತಲುಪಿದೆ ನಂಜಪ್ಪನ ಮಾತುಗಳನ್ನು ಮೆಲುಕು ಹಾಕುತ್ತಲೇ ಒಂದು ನಿರ್ಧಾರಕ್ಕೆ ಬಂದೆ. ತಮ್ಮ- ತಂಗಿಯರನ್ನು ಓದಿಸಬೇಕೆಂದು ನಿಶ್ಚಯಿಸಿದೆ .ಅಕ್ಕಪಕ್ಕದ ಶಾಲೆಗಳಲ್ಲಿ ಶಿಕ್ಷಕರ ಹತ್ತಿರ ಕೋರಿಕೊಂಡೆ. ನನ್ನ ಬೇಡಿಕೆಯನ್ನು ಮನ್ನಿಸಿ ಪುಸ್ತಕ ಹಾಗೂ ಉಚಿತವಾಗಿ ಶಿಕ್ಷಣ ನೀಡಲು ತುಂಬು ಹೃದಯದಿಂದ ಮುಂದಾದರು. ನಮ್ಮ ಮೇಲೆ ಅವರಿಗೂ ಪ್ರೀತಿ
ಹೆಚ್ಚಾಯಿತು .ನಾನು ಕೂಲಿ ಮಾಡುವುದನ್ನು ಬಿಟ್ಟು ಚಿಕ್ಕ ವ್ಯಾಪಾರ ಆರಂಭಿಸಿದೆ. ನಮ್ಮ ಜೀವನ ನಿಧಾನವಾಗಿ ಹಳಿಯಲ್ಲಿ ಸಾಗಲಾರಂಭಿಸಿತು.
ನಮ್ಮ ಜನಾಂಗದಲ್ಲಿ ಹೆಣ್ಣು ಮಕ್ಕಳಿಗೆ ಧಾರ್ಮಿಕ ಶಿಕ್ಷಣ ಹೊರತುಪಡಿಸಿ ಬೇರೆ ಶಿಕ್ಷಣ ನೀಡುವುದು ನಿಷೇಧವೇ ಎಂಬಂತಿತ್ತು. ನಾನು ಅದನ್ನು ಧಿಕ್ಕರಿಸಿ ನನ್ನ ತಂಗಿಯರನ್ನು ಕಾಲೇಜು ಮೆಟ್ಟಿಲು ಹತ್ತಿಸಿದೆ. ಹಲವರ ಕುಹಕ ಮಾತುಗಳಿಗೆ ತಲೆಕೆಡಿಸಿಕೊಳ್ಳಲಿಲ್ಲ ನಮ್ಮ ಊರಲ್ಲಿ ಕಾಲೇಜು ಮುಖ ನೋಡಿದವರಲ್ಲಿ ನಮ್ಮ ಹೆಣ್ಣುಮಕ್ಕಳು ಮೊದಲಿಗರು. *ಬಡತನಕ್ಕೆ ಒಂದು ಸವಾಲು* ಹಾಕಿ ಅರ್ಧಕ್ಕೆ ನಿಲ್ಲಿಸಿದ ನನ್ನ ಶಿಕ್ಷಣ ಮುಂದುವರಿಸುವ ಮನಸ್ಸಾಯಿತು .ನನ್ನ ಹೈಸ್ಕೂಲ್ ಶಿಕ್ಷಕರ ಪ್ರೇರಣೆಯಿಂದ ಖಾಸಗಿ ಅಭ್ಯರ್ಥಿಯಾಗಿ ಮನೆಯಲ್ಲಿ ಕುಳಿತು ಎಂ.ಎ ,ಬಿ ಎಡ್ . ಮಾಡಿದೆ. ಊರಿನಲ್ಲಿ ಉನ್ನತ ಶಿಕ್ಷಣ ಪಡೆದ ಮೊದಲಿಗ ಎಂಬ ಹೆಮ್ಮೆ ನನಗಾಯಿತು. ಇಂದು ಪ್ರತಿಷ್ಠಿತ ಕೇಂದ್ರೀಯ ವಿದ್ಯಾಲಯದಲ್ಲಿ ಶಿಕ್ಷಕನಾಗಿರುವ ಸಾರ್ಥಕಭಾವ ಹಚ್ಚಹಸಿರಾಗಿದೆ. ನನ್ನ ಹಲವಾರು ಸ್ನೇಹಿತರು ಆರ್ಥಿಕ ಸಹಾಯದ ಜೊತೆಯಲ್ಲಿ ಮಾನಸಿಕವಾಗಿ ಶಕ್ತಿ ತುಂಬಿದರು. ಇಂದು ಈ ಶಿಕ್ಷಣ ಬಡತನ ದೂರಮಾಡಿ ಎಲ್ಲರಂತೆ ಬದುಕುವ ದಾರಿತೋರಿತು. “ಮನಸ್ಸಿದ್ದರೆ ಮಾರ್ಗ “ಎಂಬ ನಾಣ್ನುಡಿ ಚರಿತಾರ್ಥ ವಾಯಿತು.
ವಿದ್ಯೆ ಎಂಬ ಅಸ್ತ್ರವೊಂದಿದ್ದರೆ ಪ್ರಪಂಚದಲ್ಲಿ ಎಲ್ಲಿ ಬೇಕಾದರೂ ಬದುಕಬಹುದೆಂಬ ನಂಬಿಕೆ ನನ್ನಲ್ಲಿ ಮನೆಮಾಡಿತು. ಮನುಷ್ಯನಲ್ಲಿ ಛಲವೊಂದಿದ್ದರೆ ಬೆಟ್ಟದಂತಿರುವ ಕಷ್ಟಗಳು ಕರಗಿ ಚೂರಾಗಿ ಬಿಡುತ್ತವೆ ಎಂಬುದನ್ನು ಸಾಬೀತು ಮಾಡಬೇಕಾಗಿತ್ತು. ನಮ್ಮ ಡಾಕ್ಟರ್ ರಾಜಕುಮಾರ್ ರವರ ಗೀತೆಯ ಸಾಲುಗಳು ಇದಕ್ಕೆ ಸಾಕ್ಷಿ ” ಆಗದು ಎಂದು,ಕೈಲಾಗದು ಎಂದು ಕೈಕಟ್ಟಿ ಕುಳಿತರೆ ,ಸಾಗದು ಕೆಲಸವು ಮುಂದೆ “. ಈ ಕಥೆ ಕೇಳಲು ನಂಜಪ್ಪ ನಮ್ಮ ಮಧ್ಯೆ ಇಂದು ಜೀವಂತವಾಗಿಲ್ಲ ,ಆದರೆ ಅವರ ಹಿತನುಡಿಗಳು ನಮ್ಮ ಜೀವನದ ದಿಕ್ಕನ್ನೇ ಬದಲಾಯಿಸಿತು.
ವಾಜಿದ್ ಖಾನ್ ,
ಹಿಂದಿ ಶಿಕ್ಷಕರು ,
ಕೇಂದ್ರೀಯ ವಿದ್ಯಾಲಯ, ಹಾಸನ.
“ಬಡತನಕ್ಕೆ ಒಂದು ಸವಾಲ್” ಎಂಬ ರಿಯಲ್ ಸ್ಟೋರಿಯನ್ನು ಓದುತ್ತಾ ಕಣ್ಣಂಚಿನಲ್ಲಿ ನೀರು ತುಂಬಿ ಭಾವುಕನಾದೆ …. ನಿಮ್ಮ ಮನದಾಳದ ಹಳೆಯ ನೆನಪುಗಳು ಕಥೆಯ ರೂಪದಲ್ಲಿ ಸಮಾಜಕ್ಕೆ ಸಂದೇಶವನ್ನು ನೀಡಿದ ಹಾಸನ ಜಿಲ್ಲೆಯ ಕೇಂದ್ರೀಯ ವಿದ್ಯಾಲಯದ ಹಿಂದಿ ಶಿಕ್ಷಕರಾದ ಗೌರವಾನ್ವಿತರಾದ ಶ್ರೀ ವಾಜಿದ್ ಖಾನ್ ಗುರುಗಳಿಗೆ ಧನ್ಯವಾದಗಳನ್ನು ತಿಳಿಸುತ್ತಿದ್ದೇನೆ….
ಯತೀಶ್ ಕುಮಾರ್. DMC., AM., GD., BFA.
ರಾಜ್ಯ ಶಿಕ್ಷಕ ರತ್ನ ಪ್ರಶಸ್ತಿ ಪುರಸ್ಕೃತರು ಮತ್ತು
ಚಿತ್ರಕಲಾ ಶಿಕ್ಷಕರು ಹಾಗೂ ಪ್ರಧಾನ ಕಾರ್ಯದರ್ಶಿ, ಚಿತ್ರಕಲಾ ಮಹಾವಿದ್ಯಾಲಯ ಹಳೆಯ ವಿದ್ಯಾರ್ಥಿಗಳ ಸಂಘ (ರಿ.,)
ತುಮಕೂರು.