ಕೇಂದ್ರ ಸರ್ಕಾರದ ಅೀನದಲ್ಲಿರುವ ರಾಷ್ಟ್ರೀಯ ಮುಕ್ತ ಶಾಲಾ ಸಂಸ್ಥೆ (ಎನ್‍ಐಒಎಸ್) ತನ್ನ ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸಿದ್ದು, 10ನೇ ತರಗತಿಯಲ್ಲಿ ಶೇ.57ರಷ್ಟು, 12ನೇ ತರಗತಿಯಲ್ಲಿ ಶೇ.42ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.
2021ರ ನವೆಂಬರ್ ಮತ್ತು ಡಿಸೆಂಬರ್ ತಿಂಗಳಿನಲ್ಲಿ ಪರೀಕ್ಷೆ ನಡೆಸಲಾಗಿತ್ತು. ಅದರಲ್ಲಿ 10ನೇ ತರಗತಿ (ಎಸ್‍ಎಸ್‍ಎಲ್‍ಸಿ)ಗೆ ಒಟ್ಟು 57,258 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಪರೀಕ್ಷೆಗೆ ಹಾಜರಾಗಿದ್ದವರ ಪೈಕಿ 51154 ಪೈಕಿ 29,157 ಮಂದಿ ತೇರ್ಗಡೆಯಾಗಿದ್ದಾರೆ.ಇದರಲ್ಲಿ ವಿದ್ಯಾರ್ಥಿಗಳು ಶೇ.57.53ರಷ್ಟು, ವಿದ್ಯಾರ್ಥಿನಿಯರು ಶೇ.55.74 ಫಲಿತಾಂಶ ಪಡೆದಿದ್ದಾರೆ. ತೃತೀಯ ಲಿಂಗಿಗಳು 13 ಜನ ಪರೀಕ್ಷೆಗೆ ಹಾಜರಾಗಿ ಎಂಟು ಮಂದಿ ತೇರ್ಗಡೆಯಾಗಿದ್ದಾರೆ.ಹಿರಿಯ ಸೆಕೆಂಡರಿ 12ನೇ ತರಗತಿಗೆ 82,043 ಮಂದಿ ನೋಂದಣಿ ಮಾಡಿಸಿಕೊಂಡಿದ್ದರು.
ಅವರಲ್ಲಿ 80,399 ಮಂದಿ ಪರೀಕ್ಷೆಗೆ ಹಾಜರಾಗಿ, 34278 ಮಂದಿ ತೇರ್ಗಡೆಯಾಗಿದ್ದಾರೆ. ವಿದ್ಯಾರ್ಥಿಗಳು ಶೇ.42.94, ವಿದ್ಯಾರ್ಥಿನಿಯರು ಶೇ.41.97ರಷ್ಟು ಫಲಿತಾಂಶ ಪಡೆದಿದ್ದಾರೆ.ತೃತೀಯ ಲಿಂಗಿಗಳ ಪೈಕಿ ಎಂಟು ನೋಂದಣಿ ಮಾಡಿಕೊಂಡು ಪರೀಕ್ಷೆಗೆ ಹಾಜರಾಗಿದ್ದರು, ಆರು ಮಂದಿ ಉತ್ತೀರ್ಣರಾಗಿದ್ದಾರೆ ಎಂದು ಎನ್‍ಐಒಎಸ್ ಮಂಡಳಿ ತಿಳಿಸಿದೆ.ಫಲಿತಾಂಶವನ್ನು ಸಂಸ್ಥೆಯ ವೆಬ್ ಸೈಟ್ ನಿಂದ ಅಥವಾ ಡಿಜಿ ಲಾಕರ್‍ನಿಂದ ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿದೆ ಎಂದು ತಿಳಿಸಲಾಗಿದೆ. ಶಾಲೆಯಿಂದ ಹೊರಗುಳಿದ ಆಸಕ್ತರಿಗೆ ಎನ್‍ಐಒಎಸ್ ಸಂಸ್ಥೆ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಸಮಾನವಾದ ಅಕಾಡೆಮಿಕ್, ವೃತ್ತಿಪರ ತರಬೇತಿ ಶಿಕ್ಷಣವನ್ನು ನೀಡುತ್ತಿದೆ.
ವಿವಿಧ ವಿಶ್ವವಿದ್ಯಾಲಯಗಳಲ್ಲಿ ಸಹಯೋಗದಲ್ಲಿ ಈ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಮುಂದಿನ ಪರೀಕ್ಷೆಗಳು 2022ರ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ನಡೆಯಲಿವೆ ಎಂದು ಮಂಡಳಿ ತಿಳಿಸಿದೆ.
ವರದಿ ಆಂಟೋನಿ ಬೇಗೂರು