ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಹುಳಿಯಾರ್ ರಸ್ತೆಯ ಕಳಪೆ ಕಾಮಗಾರಿಯಿಂದಾಗಿ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಕಳೆದ ವಾರ ಬಿಡುವಿಲ್ಲದೆ ಸುರಿದ ಮಳೆಯಿಂದಾಗಿ ಹಿರಿಯೂರು ನಗರಸಭೆ ನಿರ್ಮಾಣದ ರಸ್ತೆಯ ಕಾಮಗಾರಿಯ ನಿಜ ಬಣ್ಣ ಇದೀಗ ಬಯಲಾಗಿದೆ.
ಮಹಾಮಾರಿ ಕೊರೋನಾದಿಂದ ವ್ಯಾಪಾರ ವಹಿವಾಟು ಸ್ಥಗಿತಗೊಂಡು ಸರ್ಕಾರದ ಬೊಕ್ಕಸ ಖಾಲಿಯಾಗಿದೆ. ಆದರೆ ಹಿರಿಯೂರು ತಾಲ್ಲೂಕಿನ ನಗರಸಭೆಯಿಂದ ನಿರ್ಮಾಣ ಮಾಡಿರುವ ರಸ್ತೆ ಕಾಮಗಾರಿ ಕಳಪೆ ಮಾಡಿ, ಹಿರಿಯೂರು ನಗರಸಭೆಯ ಸಾಮಾನ್ಯ ನಿಧಿ ಯೋಜನೆ ಅಡಿಯಲ್ಲಿ ಬಿಡುಗಡೆಯಾದ ರೂ. 25,00000 ಹಣ ಇದೀಗ ನೀರಿನಲ್ಲಿ ಹೋಮ ಮಾಡಿದಂತಾಗಿದೆ.
ಅಂದ ಹಾಗೆ ಗುತ್ತಿಗೆದಾರರು ನಿರ್ಮಿಸಿದ ಆ ಅಂದದ ರಸ್ತೆ ಬಗ್ಗೆ ನಿಮಗೆ ಹೇಳ್ತೀವಿ ನೋಡಿ. ಕಣ್ಣು ಹಾಯಿಸಿದಷ್ಟು ದೂರ ಬಿರುಕು, ಅಲ್ಲಲ್ಲಿ ಮಂಡಿ ಆಳದ ಗುಂಡಿ, ಹೊಳೆಯಂತೆ ಹರಿಯುವ ನೀರು. ನಡೆದುಕೊಂಡು ಹೋಗಲು ಪ್ರಯಾಸಪಡಬೇಕಾದ ಪರಿಸ್ಥಿತಿ. ಇದೆಲ್ಲಾ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನಲ್ಲಿ ಹಿರಿಯೂರು ನಗರದ ವೇದಾವತಿ ನಗರದಿಂದ ಹಿಡಿದು ಮೈಸೂರು ರಸ್ತೆ, ಚರ್ಚ್ ರಸ್ತೆ , ಗಾಂಧಿ ಸರ್ಕಲ್ , ವಿಶ್ವೇಶ್ವರಯ್ಯ ಬಡಾವಣೆ , ಹಾಗೂ ಹಿರಿಯೂರು ತಾಲ್ಲೂಕಿನ ಸುತ್ತಮುತ್ತ ರಸ್ತೆಯ ನಿರ್ಮಾಣವಾದ ರಸ್ತೆ ಸಂಪೂರ್ಣ ಕಳಪೆ ಕಾಮಗಾರಿಯಾಗಿದೆ.
ಅದರಲ್ಲೂ ಸಹ ಹಿರಿಯೂರು ನಗರದ ಹುಳಿಯಾರ್ ರಸ್ತೆಯ ಚಾನಲ್ ಬಳಿ ಇರುವ ರಸ್ತೆಯ ಗುಂಡಿ ಜನರ ಬಳಿಗಾಗಿ ಕಾಯುತ್ತ ಕುಳಿತಿದೆ. ನಾಗೇಂದ್ರ ನಾಯ್ಕ ಲೇಔಟ್ ಗೆ ಹೋಗುವ ರಸ್ತೆಯಂತೂ ತೀರ ಹದಗೆಟ್ಟಿದೆ ಎಂಬುದಾಗಿ ಸ್ಥಳೀಯ ಸಾರ್ವಜನಿಕರು ನಮ್ಮ ತುಮಕೂರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಹಿರಿಯೂರು ತಾಲ್ಲೂಕಿನ ಮೈಸೂರುಗೆ ತೆರಳುವ ಹುಳಿಯಾರ್ ರಸ್ತೆ ಡಾಂಬರೀಕರಣ ಕಾಮಗಾರಿ ಆಗಿ ಮೂರು ತಿಂಗಳು ಕಳೆಯುವ ಮುನ್ನವೇ ಕಿತ್ತು ಹೋಗಿದೆ. ರಸ್ತೆಗೆ ಬೇಕಾದ ಸೂಕ್ತ ರೀತಿಯ ಮಣ್ಣು ಬಳಸಿಲ್ಲ. ಸಮಪ್ರಮಾಣದಲ್ಲಿ ಜಲ್ಲಿಕಲ್ಲು ಹಾಕಿಲ್ಲ. ಸರಿಯಾಗಿ ಕ್ಯೂರಿಂಗ್ ಮಾಡಿಲ್ಲ. ರೋಲರ್ ಹೊಡೆದಿಲ್ಲ, ಡಾಂಬರನ್ನೂ ಕೂಡ ಸರಿಯಾಗಿ ಹಾಕಿಲ್ಲ. ಹಾಗಾಗಿ ರಸ್ತೆ ಕೇವಲ 3 ತಿಂಗಳಲ್ಲಿ ತನ್ನ ಅಸಲಿಯತ್ತು ತೋರಿಸಿದೆ.
ವರದಿ: ಮುರುಳಿಧರನ್ ಆರ್ ಹಿರಿಯೂರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5


