ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ ಅಂಡರ್ 19 ಬ್ಯಾಡ್ಮಿಂಟನ್ ಆಟಗಾರರ ರ್ಯಾಂಕಿಂಗ್ ಪಟ್ಟಿ ಬಿಡುಗಡೆಯಾಗಿದ್ದು ಭಾರತದ ತಸ್ಮಿನ್ ಮಿರ್ ನಂಬರ್ 1 ಸ್ಥಾನವನ್ನು ಅಲಂಕರಿಸುವ ಮೂಲಕ ಈ ಸಾಧನೆ ಮಾಡಿದ ದೇಶದ ಮೊದಲ ಆಟಗಾರ್ತಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
16 ವರ್ಷದ ತಸ್ಮಿನ್ ಮೀರ್ ಒಟ್ಟು 10,810 ಪಾಯಿಂಟ್ಸ್ಗಳನ್ನು ಕಲೆ ಹಾಕುವ ಮೂಲಕ ಈ ಸಾಧನೆ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ತಸ್ಮಿನ್, ನಾನು ಪಂದ್ಯಗಳನ್ನು ಸೋತಾಗ ತುಂಬಾ ಅತ್ತಿದ್ದೇನೆ, ಆದರೆ ಕಠಿಣ ಪರಿಶ್ರಮದಿಂದಾಗಿ ನಾನು ಇಂದು ಈ ಸಾಧನೆ ಮಾಡಿದ್ದೇನೆ, ಬ್ಯಾಡ್ಮಿಂಟನ್ ಲೋಕದ ಮಹಾತಾರೆಗಳಾದ ಸೈನಾ ನೆಹ್ವಾಲ್ ಹಾಗೂ ಒಲಂಪಿಕ್ಸ್ ಪದಕ ವಿಜೇತೆ ಪಿ.ವಿ.ಸಿಂಧು ಅವರು ನನಗೆ ರೋಲ್ ಮಾಡೆಲ್ ಗಳಾಗಿದ್ದಾರೆ, ನನ್ನ ಈ ಪರಿಶ್ರಮಕ್ಕೆ ನನ್ನ ತಂದೆ ಹಾಗೂ ಸಹೋದರ ತ್ಯಾಗಭಾವವೂ ಕಾರಣವಾಗಿದೆ ಎಂದು ಅವರು ತಿಳಿಸಿದರು.
ಹಿರಿಯ ಬ್ಯಾಡ್ಮಿಂಟನ್ ನಲ್ಲಿ ಯಾವ ರೀತಿ ಪ್ರದರ್ಶನ ನೀಡಬೇಕೆಂಬುದು ನನಗೆ ಗೊತ್ತಿಲ್ಲವಾದರೂ, ಮುಂದೊಂದು ದಿನ ಆ ವಿಭಾಗದಲ್ಲೂ ಉತ್ತಮ ಪ್ರದರ್ಶನ ತೋರುವ ಮೂಲಕ ಭಾರತಕ್ಕೆ ಒಲಿಂಪಿಕ್ಸ್ನಲ್ಲಿ ಪದಕವನ್ನು ತಂದುಕೊಡುತ್ತೇನೆ ಎಂಬ ಆತ್ಮವಿಶ್ವಾಸವನ್ನು ತಸ್ಮಿನ್ ವ್ಯಕ್ತಪಡಿಸಿದರು.
ತಸ್ಮಿನ್ ರ ತಂದೆ ಇಫ್ರಾನ್ ಮಾತನಾಡಿ, ನನ್ನ ಮಗಳಿಗೆ 6 ವರ್ಷದ ವಯಸ್ಸಿನಿಂದಲೂ ಬ್ಯಾಡ್ಮಿಂಟನ್ ಬಗ್ಗೆ ಅಪಾರ ಒಲವಿತ್ತು, ಆದರೆ ಪ್ರಾಯೋಜಕರು ಸಿಗದ ಕಾರಣ ಬ್ಯಾಡ್ಮಿಂಟನ್ ಆಡುವುದನ್ನು ಬಿಟ್ಟು ಬಿಡು ಎಂದು ಹೇಳಿದ್ದೇವೆ, ಆದರೆ ಆಕೆಯ ಸತತ ಪರಿಶ್ರಮದ ಫಲದಿಂದಲೇ ಇಂದು ನಂಬರ್ 1 ಆಟಗಾರ್ತಿ ಆಗಿದ್ದಾಳೆ. ತಸ್ಮಿನ್ ಇದುವರೆಗೂ 22 ಸರಣಿಗಳಲ್ಲಿ ಗೆಲುವು ಸಾಧಿಸಿದ್ದು ಮುಂದೊಂದು ದಿನ ಭಾರತಕ್ಕೆ ಒಲಿಂಪಿಕ್ಸ್ ಪದಕ ಗೆದ್ದು ಕೊಡುತ್ತಾಳೆ ಎಂಬ ನಂಬಿಕೆ ನನಗಿದೆ ಎಂದು ಹೇಳಿದರು.
ತಸ್ಮಿನ್ ಏಷ್ಯಾನ್ ಜೂನಿಯರ್ ಚಾಂಪಿಯನ್ಷಿಪ್ನಲ್ಲಿ ಅಂಡರ್ 15, ಅಂಡರ್ 17, 4 ಜೂನಿಯರ್ ಅಂತರರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ ಒಟ್ಟು 22 ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದಾರೆ.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy