ನಿಯಮಬಾಹೀರ ವಾಹನಗಳ ಪಾರ್ಕಿಂಗ್ ತಡೆಗಟ್ಟಲು ಹೊಸ ಕಾನೂನಿನ ಕುರಿತು ತಾವು ಚಿಂತನೆ ನಡೆಸುತ್ತಿರುವುದಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಹೊಸ ಕಾನೂನಿನ ಅಡಿ ಯಾರಾದರು ತಪ್ಪಾದ ರೀತಿಯಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಿದ್ದರೆ ಮತ್ತು ಬೇರೊಬ್ಬರು ಆ ವಾಹನದ ಫೋಟೋ ಕ್ಲಿಕ್ಕಿಸಿ ವರದಿ ಮಾಡಿದರೆ, ವರದಿ ಮಾಡಿದವರಿಗೆ ಬಹುಮಾನ ನೀಡಲಾಗುವುದು ಎನ್ನಲಾಗಿದೆ.
ಫೋಟೋ ಕಳುಹಿಸುವವರಿಗೆ ಸರ್ಕಾರ 500 ರೂ. ಬಹುಮಾನ ನೀಡಲಿದೆ!
ತಪ್ಪಾದ ವಾಹನ ಪಾರ್ಕಿಂಗ್‌ನಿಂದಾಗಿ ರಸ್ತೆಗಳಲ್ಲಿ ಜಾಮ್ ಸಂಭವಿಸುವುದನ್ನು ನಾವು ಹಲವು ಬಾರಿ ನೋಡಿದ್ದೇವೆ. ಇದನ್ನು ತಡೆಗಟ್ಟಲು ಸರ್ಕಾರ ಈ ಹೊಸ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ. ಈ ರೀತಿ ನಿಯಮ ಬಾಹೀರವಾಗಿ ಪಾರ್ಕಿಂಗ್ ಮಾಡಲಾಗಿರುವ ವಾಹನಗಳ ಛಾಯಾಚಿತ್ರ ತೆಗೆದು ಅಧಿಕಾರಿಗಳಿಗೆ ಕಳುಹಿಸಿದರೆ 500 ರೂ.ವರೆಗೆ ಬಹುಮಾನ ಪಡೆಯಬಹುದು ಎನ್ನಲಾಗಿದೆ.
ಕೇಂದ್ರ ಸಚಿವ ನಿತೀನ್ ಗಡ್ಕರಿ ಹೇಳಿದ್ದೇನು?
ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ (ಪಿಟಿಐ) ಪ್ರಕಟಿಸಿರುವ ವರದಿಯ ಪ್ರಕಾರ, ನವದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಿತಿನ್ ಗಡ್ಕರಿ ಈ ಘೋಷಣೆ ಮಾಡಿದ್ದಾರೆ ಎನ್ನಲಾಗಿದೆ. ಈ ಕುರಿತಾಗಿ ತಾವು ಕಾನೂನು ತರಲು ಬಯಸಿದ್ದು, ಈ ಹೊಸ ಕಾನೂನಿನ ಅಡಿಯಲ್ಲಿ ತಪ್ಪಾಗಿ ನಿಲ್ಲಿಸಿದ ವಾಹನದ ಚಿತ್ರವನ್ನು ಕಳುಹಿಸುವ ವ್ಯಕ್ತಿಗೆ ವಿಧಿಸಲಾಗಿರುವ ದಂಡದ ಅರ್ಧದಷ್ಟು ಹಣ ಬಹುಮಾನದ ರೂಪದಲ್ಲಿ ಸಿಗಲಿದೆ. ಒಟ್ಟು ದಂಡ 1,000 ರೂ.ಗೆ ಬಂದರೆ, ವ್ಯಕ್ತಿಯು 500 ರೂ.ವರೆಗೆ ಬಹುಮಾನ ಪಡೆಯುತ್ತಾನೆ ಎಂದು ಅವರು ಹೇಳಿದ್ದಾರೆ. ಇದರಿಂದ ಪಾರ್ಕಿಂಗ್ ಸಮಸ್ಯೆಯೂ ಬಗೆಹರಿಯಲಿದೆ ಎಂದು ಗಡ್ಕರಿ ಹೇಳಿದ್ದಾರೆ.
ಪಾರ್ಕಿಂಗ್ ಕುರಿತು ಅಸಮಾಧಾನ ಹೊರಹಾಕಿದ ಗಡ್ಕರಿ
ತಪ್ಪಾದ ಪಾರ್ಕಿಂಗ್ ಗಳ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಕೇಂದ್ರ ಸಚಿವ ನಿತೀನ್ ಗಡ್ಕರಿ, ಜನರು ತಮ್ಮ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡುವುದಿಲ್ಲ. ಇದರಿಂದ ವಾಹನಗಳು ರಸ್ತೆಯ ಜಾಗವನ್ನು ಆಕ್ರಮಿಸುತ್ತಿವೆ ಎಂದು ಅವರು ಹೇಳಿದ್ದಾರೆ. ಇದಕ್ಕಾಗಿ ಉದಾಹರಣೆಯೊಂದನ್ನು ನೀಡಿರುವ ಗಡ್ಕರಿ, ನಾಗಪುರದ ತಮ್ಮ ನಿವಾಸದ ಅಡುಗೆಮನೆಯ ಹತ್ತಿರ ಎರಡು ಹಳೆವಾಹನಗಳಿಗಾಗಿ ಪಾರ್ಕಿಂಗ್ ವ್ಯವಸ್ಥೆ ಮಾಡಿದ್ದು, ತಮ್ಮ ಮನೆಯಲ್ಲಿ ಒಟ್ಟು 12 ವಾಹನಗಳಿವೆ ನಿಲ್ಲುವ ವ್ಯವಸ್ಥೆ ಮಾಡಿರುವುದಾಗಿ ಹೇಳಿದ್ದಾರೆ. ಇಂದು ನಾಲ್ಕು ಸದಸ್ಯರಿರುವ ಒಂದು ಕುಟುಂಬದ ಬಳಿ 6 ವಾಹನಗಳಿವೆ. ದೆಹಲಿಯ ಜನರು ಭಾಗ್ಯಶಾಲಿಗಳಾಗಿದ್ದಾರೆ, ಏಕೆಂದರೆ ಅವರಿಗಾಗಿ ರಸ್ತೆಗಳಲ್ಲಿಯೇ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ. ಆದರೆ, ಪಾರ್ಕಿಂಗ್ ಗಾಗಿ ಜಾಗ ಇಲ್ಲದ ಕಾರಣ ಹಲವಾರು ವಾಹನಗಳು ರಸ್ತೆಯಲ್ಲಿಯೇ ಪಾರ್ಕ್ ಆಗಿರುತ್ತವೆ.
ಆದರೆ, ಪ್ರಸ್ತುತ ತಮ್ಮ ಈ ಹೊಸ ಕಾನೂನಿನ ಬಗ್ಗೆ ಕೇಂದ್ರ ಸಚಿವರು ಯಾವುದೇ ರೀತಿಯ ಹೆಚ್ಚಿನ ವಿವರಗಳನ್ನು ಹೇಳಿಕೊಂಡಿಲ್ಲ. ಆದರೆ, ಈ ಕುರಿತು ಚಿಂತನೆ ನಡೆಸುತ್ತಿರುವುದಾಗಿ ಅವರು ಹೇಳಿದ್ದಾರೆ. ಒಂದು ವೇಳೆ ಈ ಕಾನೂನು ಜಾರಿಗೆ ಬಂದರೆ, ಇದರಿಂದ ಭಾರತದಲ್ಲಿ ಪಾರ್ಕಿಂಗ್ ವ್ಯವಸ್ಥೆ ಸುಧಾರಣೆಯಾಗಲಿದೆ ಎಂಬುದು ಮಾತ್ರ ನಿಜ .
ವರದಿ ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB