ಬೆಂಗಳೂರು: ನಗರದ ಹಳೆಯ ವಿಮಾನ ನಿಲ್ದಾಣ (ಓಲ್ಡ್ ಏರ್‌ಪೋರ್ಟ್) ರಸ್ತೆಯಲ್ಲಿ ವಿಐಪಿ ಮೂವ್‌ಮೆಂಟ್ ವೇಳೆ ನಡೆದಿದ್ದ ಹೈಡ್ರಾಮಾ ಮತ್ತು ವ್ಯಕ್ತಿಯೊಬ್ಬರ ಪ್ರತಿಭಟನೆಯ ವೈರಲ್ ವಿಡಿಯೋ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರು ಟ್ರಾಫಿಕ್ ಪೊಲೀಸರು ದೊಡ್ಡ ಟ್ವಿಸ್ಟ್ ನೀಡಿದ್ದಾರೆ. ಕಾರಿನಲ್ಲಿ ಗರ್ಭಿಣಿ ಪತ್ನಿ ಇದ್ದಾರೆ ಎಂದು ರಸ್ತೆ ಮಧ್ಯೆ ಪ್ರತಿಭಟನೆ ನಡೆಸಿದ್ದ ವ್ಯಕ್ತಿ, ಘಟನೆ ನಡೆದ ಸಮಯದಲ್ಲಿ ಕಾರಿನಲ್ಲಿ ಒಬ್ಬರೇ ಇದ್ದರು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಜೂನ್ 1 ರಂದು ಕರ್ನಾಟಕ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರ ಸಂಚಾರದ ಹಿನ್ನೆಲೆಯಲ್ಲಿ ಹಳೆಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಸುಮಾರು 30 ನಿಮಿಷಗಳ ಕಾಲ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿತ್ತು (ಝೀರೋ ಟ್ರಾಫಿಕ್). ಅಂಡರ್‌ಪಾಸ್ ಕಾಮಗಾರಿಯಿಂದಾಗಿ ಈಗಾಗಲೇ ಕಿರಿದಾಗಿದ್ದ ರಸ್ತೆಯಲ್ಲಿ ಏಕಾಏಕಿ ಸಂಚಾರ ನಿರ್ಬಂಧಿಸಿದ್ದರಿಂದ ಕಿಲೋಮೀಟರ್‌ಗಟ್ಟಲೆ ವ್ಯಾಪಕ ಟ್ರಾಫಿಕ್ ಜಾಮ್ ಸೃಷ್ಟಿಯಾಗಿತ್ತು.
ಈ ವೇಳೆ ಕಾರಿನಿಂದ ಇಳಿದ ವ್ಯಕ್ತಿಯೊಬ್ಬರು ರಸ್ತೆ ಮಧ್ಯದಲ್ಲೇ ನಿಂತು ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದರು. “ನನ್ನ ಗರ್ಭಿಣಿ ಪತ್ನಿ ಕಾರಿನಲ್ಲಿದ್ದಾರೆ, ತುರ್ತಾಗಿ ಆಸ್ಪತ್ರೆಗೆ ಕರೆದೊಯ್ಯಬೇಕು. ಸರ್ಕಾರಕ್ಕೆ ನಾವೇನು ಅಲ್ವಾ? ನಮ್ಮ ಪ್ರಾಣಕ್ಕಿಂತ ಝೀರೋ ಟ್ರಾಫಿಕ್ ಮುಖ್ಯನಾ?” ಎಂದು ಆಕ್ರೋಶ ಹೊರಹಾಕಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು.
ಐಟಿ ಕ್ಷೇತ್ರದ ಹಿರಿಯ ತಜ್ಞ ಟಿವಿ ಮೋಹನ್ ದಾಸ್ ಪೈ ಸೇರಿದಂತೆ ಹಲವು ಗಣ್ಯರು ಈ ವಿಡಿಯೋವನ್ನು ಹಂಚಿಕೊಂಡು, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಟ್ಯಾಗ್ ಮಾಡಿ ವಿಐಪಿ ಸಂಸ್ಕೃತಿಯನ್ನು ತೀವ್ರವಾಗಿ ಟೀಕಿಸಿದ್ದರು.
ವಿಡಿಯೋ ವೈರಲ್ ಆಗಿ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಪೊಲೀಸ್ ಇಲಾಖೆ ತನಿಖೆಗೆ ಆದೇಶಿಸಿತ್ತು. ಇದೀಗ ತನಿಖೆಯ ವರದಿ ಉಲ್ಲೇಖಿಸಿ ಪೂರ್ವ ವಲಯ ಸಂಚಾರಿ ಎಸಿಪಿ (ACP East Traffic) ಟ್ವೀಟ್ ಮಾಡಿದ್ದು, ಘಟನೆಯ ಅಸಲೀಯತ್ತನ್ನು ಬಿಚ್ಚಿಟ್ಟಿದ್ದಾರೆ.
“ವೈರಲ್ ಆಗಿರುವ ಘಟನೆಯ ಕುರಿತು ತನಿಖೆ ನಡೆಸಲಾಗಿದ್ದು, ಸಂಬಂಧಿತ ವ್ಯಕ್ತಿ ಕಾರಿನಲ್ಲಿ ಒಬ್ಬರೇ ಪ್ರಯಾಣಿಸುತ್ತಿದ್ದರೆಂದು ತಿಳಿದುಬಂದಿದೆ. ರಸ್ತೆ ಸಂಚಾರದ ವೇಳೆ ಯಾವುದೇ ಪರಿಸ್ಥಿತಿಯಲ್ಲೂ ಆಂಬುಲೆನ್ಸ್ ಗಳು ಹಾಗೂ ವೈದ್ಯಕೀಯ ತುರ್ತು ಸೇವೆಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ ಎಂಬುದನ್ನು ನಾವು ಮತ್ತೊಮ್ಮೆ ಸ್ಪಷ್ಟಪಡಿಸುತ್ತೇವೆ.”
ವಿಷಯ ದೇಶಾದ್ಯಂತ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಎಚ್ಚೆತ್ತ ಪ್ರತಿಭಟನೆ ನಡೆಸಿದ್ದ ವ್ಯಕ್ತಿ ಕೊನೆಗೂ ತನ್ನ ತಪ್ಪೊಪ್ಪಿಕೊಂಡಿದ್ದಾನೆ. ಘಟನೆ ನಡೆದಾಗ ಕಾರಿನಲ್ಲಿ ಗರ್ಭಿಣಿ ಪತ್ನಿ ಇರಲಿಲ್ಲ ಎಂಬ ಸತ್ಯ ಒಪ್ಪಿಕೊಂಡಿರುವ ಆತ, “ನನ್ನ ಪತ್ನಿ ಕಾರಿನಲ್ಲಿ ಇರಲಿಲ್ಲ ನಿಜ, ಆದರೆ ನಾನು ಆಕೆಯನ್ನು ಕರೆತರಲು ಹೋಗುತ್ತಿದ್ದೆ” ಎಂದು ಹಾರಿಕೆಯ ಸ್ಪಷ್ಟನೆ ನೀಡಿದ್ದಾನೆ.
ಯಾವುದೇ ವಿಷಯವನ್ನು ಸಂಚಲನಾತ್ಮಕವಾಗಿ ಬಿಂಬಿಸುವ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮುನ್ನ ಸಾರ್ವಜನಿಕರು ವಾಸ್ತವಾಂಶಗಳನ್ನು ಪರಿಶೀಲಿಸಬೇಕು ಎಂದು ಬೆಂಗಳೂರು ಪೊಲೀಸರು ವಿನಂತಿಸಿದ್ದಾರೆ. ಸುಳ್ಳು ಸುದ್ದಿಗಳನ್ನು ಹಾಗೂ ವದಂತಿಗಳನ್ನು ಹರಡುವವರ ವಿರುದ್ಧ ಕಟ್ಟುನಿಟ್ಟಿನ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


