ಭೂಮಿ ವಸತಿ ಕೊಡದೇ ನಮ್ಮ ಓಟು ಕೊಡೆವು ಎಂಬ ಘೋಷಣೆಯೊಂದಿಗೆ ಹೋರಾಟ ನಡೆಸುತ್ತಿದ್ದ ಅಲೆಮಾರಿ ಸಮುದಾಯವು ಮತದಾನದ ದಿನವಾದ ಮೇ 10ರಂದು ತಮ್ಮ ಜವಾಬ್ದಾರಿಯನ್ನು ಅರಿತು ಮತಚಲಾಯಿಸಿದ್ದಾರೆ.
ಭೂಮಿ ವಸತಿ ಕೊಡದೇ ನಮ್ಮ ಓಟು ಕೊಡೆವು ಎಂಬ ಬ್ಯಾನರ್ ನ್ನು ನಮ್ಮ ಗುಡಿಸಲಿಗೆ ಹಾಕಿಕೊಂಡು, ಮತ ಕೇಳಲು ಬಂದ ಪ್ರತಿಯೊಬ್ಬರ ಜನಪ್ರತಿನಿಧಿಗೂ ನಮ್ಮ ಕಷ್ಟಗಳನ್ನು ಹೇಳಿಕೊಂಡಿದ್ದೇವೆ. ಹಣ, ಹೆಂಡ, ಕುಕ್ಕರ್ ಮತ್ತಿತರ ಆಮಿಷಗಳಿಗೆ ಬಲಿಯಾಗದೇ ಮತಗಟ್ಟೆಗೆ ತೆರಳಿ ಮತ ಚಲಾಯಿಸಿದ್ದೇವೆ ಎಂದು ಇಲ್ಲಿನ ಮುಖಂಡರು ಹೇಳಿದರು.
ಪ್ರತಿ ವರ್ಷವೂ ಚುನಾವಣೆ ಬರ್ತಿದೆ ಮತ ಹಾಕಿಸಿಕೊಳ್ಳುತ್ತಲೇ ಇದ್ದಾರೆ. ಆದರೆ ಯಾವುದೇ ಪಕ್ಷದವರು ನಮಗೆ ಯಾವುದೇ ಮೂಲಭೂತ ಸೌಕರ್ಯಗಳನ್ನು ಮಾಡಿಕೊಟ್ಟಿಲ್ಲ. ಈ ಬಾರಿಯೂ ನಾವು ನಮ್ಮ ಜವಾಬ್ದಾರಿಯನ್ನು ಅರಿತು ಮತದಾನ ಮಾಡುತ್ತೇವೆ. ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳು ನಮಗೆ ಮನೆ ಹಕ್ಕು ಪತ್ರ ಹಾಗೂ ಮೂಲಭೂತ ಸೌಕರ್ಯ ಒದಗಿಸುವಂತೆ ಗ್ರಾಮದ ಯುವತಿಯೊಬ್ಬರು ಮನವಿ ಮಾಡಿಕೊಂಡರು.
ಬದಲಾವಣೆ ಜಗದ ನಿಯಮ ಅದರಂತೆ ತುಮಕೂರು ಜಿಲ್ಲೆ ತುಮಕೂರು ತಾಲೂಕು ಹೆಬ್ಬೂರು ಹೋಬಳಿ ಬಳಗೆರೆ ಗ್ರಾಮ ಪಂಚಾಯ್ತಿಯ ಹನುಮಂತನಗರದ ರೇಷ್ಮೆ ಇಲಾಖೆ ಕಟ್ಟಡದಲ್ಲಿ ಇದುವರೆವಿಗೂ ಸ್ವತಂತ್ರ್ಯ ಸಿಗದೆ, ಆಶ್ರಯ ಪಡೆದಿರುವ ಅಲೆಮಾರಿ ಕುಟುಂಬಗಳು ಮತ್ತು ತುಮಕೂರು ನಗರದ ಒಂದನೇ ವಾರ್ಡ್ ಗೆ ಸೇರಿದ ಪ್ರಸ್ತುತ ಅಮಲಾಪುರದ ಬೆಟ್ಟದಲ್ಲಿ ವಾಸವಿರುವ ಅಲೆಮಾರಿ ಕುಟುಂಬಗಳು ಹಾಗೂ ಕೊರಟಗೆರೆ ತಾಲ್ಲೂಕು ಹುಲೀಕುಂಟೆ ಗ್ರಾಮದ ಅಲೆಮಾರಿ ಕುಟುಂಬಗಳು, ತಮ್ಮ ಓಟಿನ ಮೌಲ್ಯದ ಬಗ್ಗೆ ಅರಿತು ಯಾವುದೇ ಪಕ್ಷಗಳಿಂದ ಹಣ, ಹೆಂಡ ಪಡೆಯದೆ ಈ ಪ್ರಜಾ ಪ್ರಭುತ್ವದ ದಿನವನ್ನು ತಮ್ಮ ಓಟು ಹಾಕುವ ಮೂಲಕ ಆಚರಿಸಿರುವ ಈ ನಡೆ ನಮಗೆ ತೃಪ್ತಿ ತಂದಿದೆ ಎಂದು ಸಾಮಾಜಿಕ ಹೋರಾಟಗಾರರಾದ ಹಂದ್ರಾಳ್ ನಾಗಭೂಷಣ್ ಅವರು ತಿಳಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy