ತುರುವೇಕೆರೆ: ತಾಲ್ಲೂಕಿನ ಚೌದ್ರಿ ಸೇವಾ ಟ್ರಸ್ಟ್, ಲಯನ್ಸ್ ಕ್ಲಬ್, ರೋಟರಿ ಕ್ಲಬ್ ಮತ್ತು ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದ ಆಶ್ರಯದಲ್ಲಿ ನ. 15ರಂದು ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ ಎಂದು ಚೌದ್ರಿ ಸೇವಾ ಟ್ರಸ್ಟ್ ಅಧ್ಯಕ್ಷ ಡಾ.ಚೌದ್ರಿ ನಾಗೇಶ್ ತಿಳಿಸಿದರು.
ಪಟ್ಟಣದ ಚೌದ್ರಿ ಸೇವಾ ಟ್ರಸ್ಟ್ ಕಚೇರಿಯಲ್ಲಿ ನಡೆದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಜನರಲ್ಲಿ ತಮ್ಮ ಆರೋಗ್ಯದ ಕಾಳಜಿ ಹೆಚ್ಚಿಸುವ ಸಲುವಾಗಿ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ಹೃದ್ರೋಗ, ನರರೋಗ, ಮೂತ್ರಪಿಂಡ, ಮಧುಮೇಹ, ಚರ್ಮರೋಗ, ಶ್ವಾಸಕೋಶ, ದಂತ ರೋಗ, ಸ್ತ್ರೀಯರ ರೋಗಗಳು, ಕಿವಿ, ಮೂಗು, ಮಕ್ಕಳ, ನೇತ್ರ, ಕೀಲು ಮತ್ತು ಮೂಳೆ, ಮಾನಸಿಕ ರೋಗ ಹಾಗೂ ಕ್ಷಯ ರೋಗಕ್ಕೆ ಸಂಬಂಧಿಸಿದ ವೈದ್ಯರು ಆರೋಗ್ಯ ತಪಾಸಣೆ ನಡೆಸಲಿದ್ದಾರೆ ಎಂದು ತಿಳಿಸಿದರು.
ಪಟ್ಟಣದ ಉಡುಸಲಮ್ಮ ದೇವಾಲಯದ ಹಿಂಭಾಗದ ಚೌದ್ರಿ ಕನ್ವೆಂಷನ್ ಹಾಲ್‌ನಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆವರೆಗೆ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ. ಈ ಶಿಬಿರಕ್ಕೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಿರ್ಮಲಾನಂದ ಮಹಾಸ್ವಾಮೀಜಿ ಆಗಮಿಸಲಿದ್ದಾರೆ ಎಂದರು.
ಸಭೆಯಲ್ಲಿ ಕೇಂದ್ರ ತೆಂಗು ಮತ್ತು ನಾರು ಅಭಿವೃದ್ಧಿ ಮಂಡಳಿ ಸದಸ್ಯ ಮಂಚೇನಹಳ್ಳಿ ಕೃಷ್ಣಮೂರ್ತಿ, ಲಯನ್ಸ್ ಕ್ಲಬ್ ಅಧ್ಯಕ್ಷ ಮಿಹಿರ್ ಕುಮಾರ್, ಕಸಾಪ ನಿಕಟಪೂರ್ವ ಅಧ್ಯಕ್ಷ ಸಾ.ಶಿ. ದೇವರಾಜು, ಪಿ.ಎಚ್. ಧನಪಾಲ್, ರೋಟರಿ ಜಯರಾಮ್, ಕೊಂಡಜ್ಜಿ ವಿಶ್ವನಾಥ್, ಬಸವರಾಜು, ಪಟೇಲ್ ಚಂದ್ರು, ಪ್ರಭಣ್ಣ, ಶಿವರಾಜು, ಚೆಂಡೂರು ರಾಮೇಗೌಡ ಉಪಸ್ಥಿತರಿದ್ದರು.