ಬಿಬಿಎಂಪಿ ವಾರ್ಡ್ಗಳ ಸಂಖ್ಯೆಯನ್ನು 243ರಿಂದ 225ಕ್ಕೆ ಇಳಿಸಿ ಸರ್ಕಾರ ಶುಕ್ರವಾರ ಅಧಿಸೂಚನೆ ಹೊರಡಿಸಿದೆ. 2021ರ ಜ.29ರಂದು ಬಿಬಿಎಂಪಿಯ ಕೌನ್ಸಿಲರ್ಸ್ಗಳ ಸಂಖ್ಯೆಯನ್ನು 243ಕ್ಕೆ ನಿಗದಿಪಡಿಸಿ ಅಧಿಸೂಚನೆ ಹೊರಡಿಸಲಾಗಿತ್ತು. ಇದನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಾಪಸ್ ಪಡೆದುಕೊಳ್ಳಲಾಗಿದೆ.
ಬಿಬಿಎಂಪಿ ಅಧಿನಿಯಮ- 2020ರ 7ನೇ ಪ್ರಕರಣದಂತೆ ಅಧಿಕಾರ ಚಲಾಯಿಸಿ, ತತ್ಕ್ಷಣದಿಂದ ಜಾರಿಗೆ ಬರುವಂತೆ ಕಾರ್ಪೊರೇಟರ್ ಗಳ ಸಂಖ್ಯೆಯನ್ನು 225ಕ್ಕೆ ನಿಗದಿಪಡಿಸಲಾಗಿದೆ.
ಬಿಬಿಎಂಪಿ ವಾರ್ಡ್ಗಳ ಪುನರ್ ವಿಂಗಡಿಸಲು ಮುಖ್ಯ ಆಯುಕ್ತರ ನೇತೃತ್ವದ ಆಯೋಗವನ್ನು ಸರ್ಕಾರ ಜೂನ್ 23ರಂದು ಪುನರ್ ರಚಿಸಿತ್ತು. ಹೈಕೋರ್ಟ್ ಆದೇಶದಂತೆ 12 ವಾರಗಳಲ್ಲಿ ವರದಿ ಸಲ್ಲಿಸುವಂತೆ ಸೂಚಿಸಲಾಗಿತ್ತು. ಈ ಸಮಿತಿ ಜೂನ್ 25ರಂದು ಮೊದಲ ಸಭೆ ನಡೆಸಿತ್ತು. ನಂತರ ಪ್ರಕ್ರಿಯೆಗಳು ಆಗಿರಲಿಲ್ಲ. ವಾರ್ಡ್ಗಳ ಸಂಖ್ಯೆ ಕಡಿಮೆ ಮಾಡಬೇಕೇ? ಹೆಚ್ಚು ಮಾಡಬೇಕೇ ಎಂಬ ಬಗ್ಗೆ ಚರ್ಚೆಗಳಾಗುತ್ತಿದ್ದವು. ಈ ಮಧ್ಯೆ ಸಚಿವ ರಾಮಲಿಂಗಾರೆಡ್ಡಿ ಅವರು, ‘ಬಿಜೆಪಿಯವರು ಕಾಂಗ್ರೆಸ್ಗೆ ಅನ್ಯಾಯ ಮಾಡಿ ವಾರ್ಡ್ ವಿಂಗಡಣೆ ಮಾಡಿದೆ. ಕೆಲವು ಅನಗತ್ಯ ವಾರ್ಡ್ಗಳಿವೆ. ವಾರ್ಡ್ಗಳ ಸಂಖ್ಯೆ 225 ಆಗಬಹುದು’ ಎಂದು ಹೇಳಿದ್ದರು. ಇದೀಗ ಅದರಂತೆಯೇ ವಾರ್ಡ್ಗಳ ಪುನರ್ ವಿಂಗಡಣೆ ಆಯೋಗದ ಶಿಫಾರಸು ಇಲ್ಲದೆಯೇ ವಾರ್ಡ್ಗಳ ಸಂಖ್ಯೆಯನ್ನು ಕಡಿಮೆ ಮಾಡಲಾಗಿದೆ.
ಬಿಬಿಎಂಪಿ ಕಾಯ್ದೆಯ ಪ್ರಕಾರ 250 ವಾರ್ಡ್ಗಳನ್ನು ರಚಿಸಬಹುದು. ಬಿಜೆಪಿ ಸರ್ಕಾರ 243 ವಾರ್ಡ್ಗಳನ್ನು ರಚಿಸಿ ಅಧಿಸೂಚಿಸಿತ್ತು. ಮೀಸಲಾತಿಯನ್ನೂ ನಿಗದಿಮಾಡಿ ಅಧಿಸೂಚಿಸಲಾಗಿತ್ತು. ಆದರೆ, ವಾರ್ಡ್ ಪುನರ್ ವಿಂಗಣೆ ಅಧಿಸೂಚನೆಯನ್ನು ಪ್ರಶ್ನಿಸಿದ್ದ ಅರ್ಜಿಯನ್ನು ಹೈಕೋರ್ಟ್ 2022ರ ಸೆ. 16ರಂದು ವಜಾಗೊಳಿಸಿತ್ತು. ಹೈಕೋರ್ಟ್ ನೀಡಿದ್ದ ಆದೇಶದ ವಿರುದ್ಧ ಬಿ. ಎನ್. ಮಂಜುನಾಥ ರೆಡ್ಡಿ ಮತ್ತು ಇತರರು ಹೈಕೋರ್ಟ್ ವಿಭಾಗೀಯ ಪೀಠದ ಮುಂದೆ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ಸಂದರ್ಭದಲ್ಲಿ 2023ರ ಜೂನ್ 19ರಂದು ಹೈಕೋರ್ಟ್ ವಾರ್ಡ್ಗಳ ಪುನರ್ ವಿಂಗಡಣೆಗೆ 12 ವಾರಗಳ ಕಾಲಾವಕಾಶ ನೀಡಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


