ರಷ್ಯಾ-ಉಕ್ರೇನ್ ನಡುವಿನ ಕದನ ಮತ್ತಷ್ಟು ತೀವ್ರ ಸ್ವರೂಪಕ್ಕೆ ತಿರುಗುತ್ತಿರುವ ನಡುವೆಯೇ ಇದೀಗ ಮತ್ತೊಂದು ಪ್ರಮುಖ ಬೆಳವಣಿಗೆ ನಡೆದಿದೆ. ಇದೇ ತಿಂಗಳು ಸ್ಪೇನ್‌ನ ಮ್ಯಾಡ್ರಿಡ್‌ನಲ್ಲಿ ನಡೆಯಲಿರುವ ನ್ಯಾಟೋ ಶೃಂಗಸಭೆಯಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಭಾಗವಹಿಸುವುದು ಖಚಿತವಾಗಿದೆ. ಅದೂ ಅಲ್ಲದೆ ಮೈತ್ರಿಗಳ ರಾಷ್ಟ್ರಗಳ ಪಾಲುದಾರ ರಾಷ್ಟ್ರಗಳ ಪೈಕಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನಾಲ್ಕು ಹೊಸ ದೇಶಗಳು ಕೂಡ ಭಾಗಿಯಾಗಲಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನ್ಯಾಟೋ (ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಸ್ಥೆ) ಕಾರ್ಯದರ್ಶಿ ಜನರಲ್ ಮಿರ್ಸಿಯಾ ಜೊಆನ್, ಖಂಡಿತವಾಗಿಯೂ ಇದು ನ್ಯಾಟೋದ ವಿಸ್ತರಣೆ ಹಾಗೂ ತೆರೆದ ಬಾಗಿಲು ನೀತಿಯ ಬಗ್ಗೆ ಪ್ರಮುಖ ಚರ್ಚೆ ನಡೆಯಲಿದೆ. ಫಿನ್ಲೆಂಡ್ ಹಾಗೂ ಸ್ವೀಡನ್ ನಮ್ಮ ಗುಂಪಿಗೆ ಸೇರಲಿದೆ ಎಂಬ ಭಾವನೆಯಿದೆ. ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಕೂಡ ಭಾಗಿಯಾಗಲಿದ್ದು, ಹಾಗಾಗಿ ಉಕ್ರೇನ್ ಸೇರ್ಪಡೆ ಬಗ್ಗೆ ಕೂಡ ಪ್ರಮುಖವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಝೆಲೆನ್ಸ್ಕಿ ಅಲ್ಲದೆ ಪೆಸಿಫಿಕ್ ಮಹಾಸಾಗರದ ಪ್ರಮುಖ ರಾಷ್ಟ್ರಗಳಾದ ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಜಪಾನ್ ಹಾಗೂ ದಕ್ಷಿಣ ಕೊರಿಯಾ ಕೂಡ ಇದೇ ಮೊದಲ ಬಾರಿಗೆ ಸಮಾವೇಶದಲ್ಲಿ ಭಾಗಿಯಾಗಲಿದ್ದು, ಸಹಜವಾಗಿಯೇ ಇದು ಚೀನಾಗೆ ದೊಡ್ಡ ಹಿನ್ನಡೆ ತರಲಿದೆ. ಇನ್ನು ಶೃಂಗಸಭೆಯಲ್ಲಿ ನ್ಯಾಟೋದ ೩೦ ಸದಸ್ಯ ರಾಷ್ಟ್ರಗಳ ಪ್ರಮುಖ ನಾಯಕರು ಭಾಗಿಯಾಗಲಿದ್ದಾರೆ. ಅಲ್ಲದೆ ಮೈತ್ರಿಕೂಟದ ಶೃಂಗಸಭೆಯಲ್ಲಿ ಭಾಗವಹಿಸುವ ನಾಯಕರ ಪೈಕಿ ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿದಾ ದೇಶದ ಪರ ಮೊದಲ ನಾಯಕರಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅತ್ತ ಉಕ್ರೇನ್-ರಷ್ಯಾ ನಡುವಿನ ಯುದ್ದ ಶತದಿನ ದಾಟಿರುವ ನಡುವೆಯೇ ಇದೀಗ ನ್ಯಾಟೋ ಶೃಂಗಸಭೆ ನಡೆಯಲಿರುವುದು ಪ್ರಮುಖ ಬೆಳವಣಿಗೆಯಾಗಿದೆ. ಉಕ್ರೇನ್ ನ್ಯಾಟೋ ಭಾಗವಾಗುವ ಸಾಧ್ಯತೆಯನ್ನು ಕೂಡ ಸದ್ಯದ ಬೆಳವಣಿಗೆ ಪುಷ್ಠೀಕರಿಸುತ್ತದೆ.
ವರದಿ ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB