ತುಮಕೂರು: ವಯೋಸಹಜವಾಗಿ ಮೃತಪಟ್ಟ ದಲಿತ ವ್ಯಕ್ತಿಯ ಶವವನ್ನು ಉಪದ್ರವ ನಿವಾರಣಾ ಆದೇಶ ಹೊರಡಿಸಿ ಹೊರತೆಗೆದು ಮತ್ತೊಂದು ಸ್ಥಳದಲ್ಲಿ ಶವಸಂಸ್ಕಾರ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ತುಮಕೂರು ತಾಲೂಕಿನ ಊರ್ಡಿಗೆರೆ ಹೋಬಳಿಯ ದುರ್ಗದಹಳ್ಳಿಯಲ್ಲಿ ನಡೆದಿದೆ. ವೃದ್ಧ ಪೆದ್ದಯ್ಯ ವಯೋಸಹಜವಾಗಿ ಕಳೆದ ತಿಂಗಳು ಡಿಸೆಂಬರ್ನಲ್ಲಿ ಮೃತಪಟ್ಟಿದ್ದರು. ಮೃತರ ಶವ ಸಂಸ್ಕಾರ ಮಾಡಲು ಗ್ರಾಮದಲ್ಲಿ ಸ್ಮಶಾನ ಇಲ್ಲದ ಕಾರಣ ಮೃತ ಪೆದ್ದಯ್ಯನ ಮಗ ತಿಮ್ಮರಾಜು ‘ನಮ್ಮ ತಂದೆ ಮೃತಪಟ್ಟಿದ್ದಾರೆ. ಊಳಲು ಸ್ಮಶಾನ ಇಲ್ಲ. ನಮ್ಮ ತಂದೆಯ ಶವಸಂಸ್ಕಾರವನ್ನು ಎಲ್ಲಿ ಮಾಡಬೇಕು ಎಂದು ತಹಸೀಲ್ದಾರ್ ಹಾಗೂ ಪಿಡಿಒ ಅವರಿಗೆ ಕೇಳಿದ್ದಾರೆ. ಆದರೆ ಅವರಿಂದ ಸಮರ್ಪಕ ಉತ್ತರ ಬಾರದ ಹಿನ್ನೆಲೆಯಲ್ಲಿ ದುರ್ಗದ ಹಳ್ಳಿ ಗ್ರಾಮಕ್ಕೆ ತೆರಳುವ ರಸ್ತೆ ಬದಿಯಲ್ಲೇ ಅಂತ್ಯ ಸಂಸ್ಕಾರ ನೆರವೇರಿಸಿದ್ದರು.
ಘಟನೆಗೆ ಸಂಬಂಧಿಸಿದಂತೆ ಸ್ಮಶಾನಕ್ಕಾಗಿ ಹಲವು ವರ್ಷಗಳಿಂದ ಹೋರಾಟ ಮಾಡಿರುವ ದುರ್ಗದ ಹಳ್ಳಿಯ ತಿಮ್ಮರಾಜು, ನಾವು ದಲಿತ ಕುಟುಂಬಕ್ಕೆ ವರ್ಗಕ್ಕೆ ಸೇರಿದವರಾಗಿದ್ದು ಭೂಮಿ ಇಲ್ಲದ ಕಾರಣ ಅಧಿಕಾರಿಗಳ ಹೇಳಿಕೆಯಂತೆ ರಸ್ತೆ ಬದಿಯಲ್ಲಿ ಅಂತ್ಯ ಸಂಸ್ಕಾರ ಮಾಡಿರುವುದಾಗಿ ಹೇಳಿದ್ದರು.
ಪರಮೇಶ್ವರ್ ಸಹ ಪ್ರತಿಕ್ರಿಯಿಸಿದ್ದರು. ಇಂತಹ ಅಮಾನವೀಯ ಘಟನೆ ನಡೆಯಬಾರದೆಂದು ಮುಂದೆ ಈ ರೀತಿ ಆಗದಂತೆ ಜಾಗೃತಿ ವಹಿಸಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಿ, ಕುಟುಂಬಸ್ಥರು ಒಪ್ಪಿದರೆ ವ್ಯಕ್ತಿಯ ಶವವನ್ನು ಬೇರೆಡೆ ಅಂತ್ಯಸಂಸ್ಕಾರ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು.
ಇದರ ಬೆನ್ನಲ್ಲೇ ತುಮಕೂರು ಉಪ ವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ ಅವರು ಉಪದ್ರವ ನಿವಾರಣಾ ಕಾಯ್ದೆ ಅಡಿಯಲ್ಲಿ ತಹಸೀಲ್ದಾರ್ ಅವರಿಗೆ 48 ಗಂಟೆಗಳ ಒಳಗೆ ಮೃತ ಪೆದ್ದಯ್ಯನ ಶವವನ್ನು ಹೊರ ತೆಗೆದು, ಬೇರೆ ಕಡೆ ಅಂತ್ಯ ಸಂಸ್ಕಾರ ಮಾಡಿ ವರದಿ ನೀಡಲು ಆದೇಶಿಸಿದ್ದರು. ಈ ಹಿನ್ನೆಲೆಯಲ್ಲಿ ಶುಕ್ರವಾರ ಮುಂಜಾನೆ ತಹಸೀಲ್ದಾರ್ ಸಿದ್ದೇಶ್ ಹಾಗೂ ಪೊಲೀಸ್ ಅಧಿಕಾರಿಗಳ ಮುಂದಾಳತ್ವದಲ್ಲಿ ಮೃತ ಪೆದ್ದಯ್ಯನ ಶವ ಹೊರತೆಗೆದಿದ್ದಾರೆ.
ಹೊರ ತೆಗೆದ ಶವವನ್ನು ದುರ್ಗದ ಹಳ್ಳಿಯಿಂದ 2 ಕಿಮೀ ದೂರದಲ್ಲಿರುವ ಗುಡ್ಡದ ಬಳಿ ಗುರುತಿಸಿರುವ ಸ್ಮಶಾನದಲ್ಲಿ ಸಂಸ್ಕಾರ ಮಾಡಲಾಗಿದೆ.
ಜಿಲ್ಲಾಡಳಿತದ ಈ ನಡೆಗೆ ಪ್ರಗತಿಪರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಂದೂ ಸಂಪ್ರದಾಯದಂತೆ ಒಮ್ಮೆ ಅಂತ್ಯ ಸಂಸ್ಕಾರ ಮಾಡಿದರೆ ಆ ಶವವನ್ನು ಹೊರ ತೆಗೆದು ಮತ್ತೊಂದು ಸ್ಥಳದಲ್ಲಿ ಶವ ಸಂಸ್ಕಾರ ಮಾಡಿರುವ ಯಾವುದೇ ಉದಾಹರಣೆಗಳು ಇಲ್ಲ. ಆದರೆ ಸಚಿವರ ಮಾತನ್ನು ಸಹ ಧಿಕ್ಕರಿಸಿ ಜಿಲ್ಲಾಡಳಿತವು ಏಕ ಪಕ್ಷಿಯ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.