ಹಾಸನ: ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ ಡಿಸೆಂಬರ್ 12ರಂದು ನಡೆಯಲಿದ್ದು, ಈ ಸಂದರ್ಭದಲ್ಲಿ ಹಣ, ಹೆಂಡದ ಆಮಿಷ ಒಡ್ಡಿ ಮತಯಾಚಿಸುವವರನ್ನು ಬೆಂಬಲಿಸದೇ, ಒಕ್ಕಲಿಗ ಸಮುದಾಯದ ಧ್ಯೇಯ, ಗೌರವ ಹಾಗೂ ಅಭಿವೃದ್ಧಿಗೆ ಶ್ರಮಿಸುವ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಂತೆ ಹಾಸನದ ಯುವ ಮುಖಂಡ ಸಚಿನ್ ಸರಗೂರು ಮನವಿ ಮಾಡಿದ್ದಾರೆ.
ಕೃಷಿಯನ್ನೇ ಅವಲಂಬಿಸಿರುವ ಶ್ರಮಿಕ ವರ್ಗವಾಗಿರುವ ಒಕ್ಕಲಿಗ ಸಮಾಜವು ಇಂದು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಆದರೆ, ಒಕ್ಕಲಿಗರ ಸಂಘಕ್ಕೆ ಚುನಾವಣೆಗೆ ನಿಲ್ಲುವ ಅಭ್ಯರ್ಥಿಗಳು ಚುನಾವಣೆಯ ಸಂದರ್ಭ ಪ್ರಣಾಳಿಕೆಯಲ್ಲಿ ಅಭಿವೃದ್ಧಿ ಮಂತ್ರ ಜಪಿಸಿದರೂ, ಗೆದ್ದ ಬಳಿಕ ಸಮುದಾಯದ ಅಭಿವೃದ್ಧಿಗೆ ಪ್ರಾಮಾಣಿಕೆ ಕೆಲಸ ಮಾಡುವಲ್ಲಿ ವಿಫಲರಾಗುತ್ತಿದ್ದಾರೆ ಎಂದು ಸಚಿನ್ ಬೇಸರ ವ್ಯಕ್ತಪಡಿಸಿದರು.
ಇನ್ನೊಂದೆಡೆಯಲ್ಲಿ ಒಕ್ಕಲಿಗರ ಸಂಘದ ಚುನಾವಣೆ ಬರುವ ಸಮಯದಲ್ಲಿ, ಹಣ, ಹೆಂಡದ ಆಮಿಷವೊಡ್ಡಿ ಮತ ಹಾಕಿಸಿಕೊಂಡು ಕೆಲವರು ಗೆಲುವು ಸಾಧಿಸುತ್ತಿದ್ದಾರೆ. ಈ ರೀತಿಯಾಗಿ ಗೆದ್ದವರು, ಗೆದ್ದ ಬಳಿಕ ತಮ್ಮ ವೈಯಕ್ತಿಕ ಅಭಿವೃದ್ಧಿ ಮಾಡಿಕೊಳ್ಳುತ್ತಾರೆಯೇ ಹೊರತು, ಸಮುದಾಯದ ಅಭಿವೃದ್ಧಿ ಇವರಿಂದ ಸಾಧ್ಯವಿಲ್ಲ. ಹಾಗಾಗಿ ಮತದಾರರು ಯಾವುದೇ ಆಮಿಷಗಳಿಗೊಳಗಾಗದೇ ಸಮುದಾಯದ ಅಭಿವೃದ್ಧಿ ಮಾಡುವಂತಹ ಸೂಕ್ತ ಅಭ್ಯರ್ಥಿಗಳನ್ನು ವಿಜಯಶಾಲಿಯಾಗಿಸಬೇಕು ಎಂದು ಸಚಿನ್ ಮನವಿ ಮಾಡಿದರು.
ಒಕ್ಕಲಿಗರ ಸಂಘದಿಂದ ಗೆದ್ದವರು, ರೈತರ ದಿನಾಚರಣೆ ಮಾಡುತ್ತಿಲ್ಲ, ಒಕ್ಕಲಿಗರ ದಿನಾಚರಣೆ ಮಾಡುತ್ತಿಲ್ಲ, ಕೆಂಪೇಗೌಡ ದಿನಾಚರಣೆ ಕಾಟಾಚಾರಕ್ಕೆ ಅಥವಾ ತಮ್ಮ ಸ್ವಂತ ಪ್ರಚಾರಕ್ಕೆ ಎಂಬಂತೆ ಮಾಡುತ್ತಿದ್ದಾರೆ. ಒಕ್ಕಲಿಗರ ಪರವಾಗಿ, ರೈತರ ಪರವಾಗಿ ಯಾವುದೇ ಹೋರಾಟ ಮಾಡುತ್ತಿಲ್ಲ. ಪ್ರತಿ ಜಿಲ್ಲೆಯಲ್ಲಿಯೂ ಕೆಂಪೇಗೌಡರ ಪ್ರತಿಮೆ ಸ್ಥಾಪಿಸಿ ಗೌರವಿಸುವ ಕೆಲಸ ಕೂಡ ಮಾಡುತ್ತಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಕೆಂಪೇಗೌಡರ ಬಗ್ಗೆ ಅವಹೇಳನ ಮಾಡುತ್ತಿರುವುದನ್ನು ಪ್ರಶ್ನಿಸಲು ಕೂಡ ಮುಂದಾಗಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಇಂದು ಹಾಸನದಲ್ಲಿ ಒಕ್ಕಲಿಗರ ಮಕ್ಕಳ ವಿದ್ಯಾಭ್ಯಾಸಕ್ಕೆ ಸರಿಯಾದ ಹಾಸ್ಟೆಲ್ ಸೌಲಭ್ಯಗಳು ಕೂಡ ಇಲ್ಲವಾಗಿದೆ. ಇದರಿಂದಾಗಿ ಒಕ್ಕಲಿಗ ಸಮುದಾಯದ ವಿದ್ಯಾರ್ಥಿಗಳು 40ರಿಂದ 45 ಕಿ.ಮೀ. ದೂರದಿಂದ ದಿನ ನಿತ್ಯ ಪ್ರಯಾಣಿಸುತ್ತಿದ್ದಾರೆ. ಸರಿಯಾದ ಬಸ್ ವ್ಯವಸ್ಥೆ ಇಲ್ಲದೇ ವಿದ್ಯಾರ್ಥಿಗಳು ಸಂಕಷ್ಟಕ್ಕೀಡಾಗುತ್ತಿದ್ದರೂ, ಬಸ್ ವ್ಯವಸ್ಥೆ ಮಾಡಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿಲ್ಲ. ಸಮುದಾಯದ ಸಂಘಟನೆಯ ಮುಖಂಡರುಗಳಾಗಿ, ಮಕ್ಕಳ ಶಿಕ್ಷಣದ ಅಭಿವೃದ್ಧಿಯ ಬಗ್ಗೆ ಕಾಳಜಿವಹಿಸುತ್ತಿಲ್ಲ. ಅವರ ಶೈಕ್ಷಣಿಕ ಏಳಿಗೆಗಾಗಿ ಪ್ರೋತ್ಸಾಹಿಸುತ್ತಿಲ್ಲ ಎಂದು ಅವರು ಆರೋಪಿಸಿದರು.
ರಾಜ್ಯ ಒಕ್ಕಲಿಗರ ನಿರ್ದೇಶನ ಅಭ್ಯರ್ಥಿಗಳು ಹಣ ಬೆಂಬಲದಿಂದ ಗೆಲುವು ಸಾಧಿಸಿದರೆ ಇದರಿಂದ ಸಮುದಾಯಕ್ಕೆ ಯಾವುದೇ ರೀತಿಯ ಉಪಯೋಗವಿಲ್ಲ. ಕೊವಿಡ್ ಸಂಕಷ್ಟದಂತಹ ಸಂದರ್ಭದಲ್ಲಿ ಒಕ್ಕಲಿಗ ಸಮುದಾಯ ಕಷ್ಟದಲ್ಲಿದ್ದಾಗ ಯಾರು ಕೂಡ ಸಮುದಾಯದ ಕಡೆಗೆ ತಿರುಗಿ ನೋಡಿಲ್ಲ. ಇಂದಿಗೂ ಸಮುದಾಯದ ಯುವಕರು ಅತ್ಯುತ್ತಮ ವಿದ್ಯಾಭ್ಯಾಸ ಪಡೆದಿದ್ದರೂ, ಕೂಲಿ ಕೆಲಸ ಮಾಡುವುದು ಅನಿವಾರ್ಯ ಎನ್ನುವಂತಹ ಸ್ಥಿತಿಗೆ ತಲುಪಿದ್ದಾರೆ. ಸಮುದಾಯದ ಯುವಕರಿಗೆ ಉದ್ಯೋಗ ಒದಗಿಸುವುದಕ್ಕೆ ಸಂಘದಲ್ಲಿ ಗೆಲುವು ಸಾಧಿಸುತ್ತಿರುವ ಅಭ್ಯರ್ಥಿಗಳು ಯಾಕೆ ಮುಂದಾಗುತ್ತಿಲ್ಲ? ಎಂದು ಅವರು ಪ್ರಶ್ನಿಸಿದರು.
ರಾಜ್ಯ ಒಕ್ಕಲಿಗರ ಸಂಘ ಒಕ್ಕಲಿಗರ ಅಭಿವೃದ್ಧಿಗಾಗಿ ಕೆಲಸ ಮಾಡಬೇಕಾದರೆ, ಮತದಾರರು ಹಣ, ಹೆಂಡದ ಆಮಿಷಗೊಳಗಾಗದೇ, ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು. ಆಮಿಷ ಒಡ್ಡಿ ಮತಪಡೆಯುವವರಿಂದ ಸಮಾಜದ ಅಭಿವೃದ್ಧಿ ಸಾಧ್ಯವಿಲ್ಲ. ಹೀಗಾಗಿ ರಾಜ್ಯ ಒಕ್ಕಲಿಗರ ಸಂಘಕ್ಕೆ ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೂಲಕ ನಮ್ಮ ಸಮುದಾಯದ ಸಂಘಕ್ಕೆ ಬಲತುಂಬೋಣ, ಸಮುದಾಯದ ಅಭಿವೃದ್ಧಿಗೆ ಶ್ರಮಿಸೋಣ ಎಂದು ಸಚಿನ್ ಸರಗೂರು ಮನವಿ ಮಾಡಿದರು.