ಬುದ್ಧಗುರುವಿನ ಪಂಚಶೀಲ ತತ್ವಗಳು ಬಸವಾದಿ ಪ್ರಮಥ ಶರಣರಲ್ಲೂ ರೂಪಧಾರಣೆ ಮಾಡಿಕೊಂಡಿರುವುದನ್ನು ಗಮನಿಸಬಹುದು. ಬಸವಣ್ಣನವರು ರೂಪಿಸಿದ ಶರಣ ಚಳವಳಿ ಧಮ್ಮ ತತ್ವಾಧಾರಿತವಾದದ್ದು. ‘ಬಹುಜನ ಹಿತಾಯ, ಬಹುಜನ ಸುಖಾಯ’ ಎಂದ ಬುಧ್ಧ ಗುರುವು ಸಮಾಜದ ಎಲ್ಲಾ ವರ್ಗಗಗಳ ಜನರನ್ನು ಧಮ್ಮ ರಕ್ಷಕರನ್ನಾಗಿ- ಸಂಘರಕ್ಷಕರನ್ನಾಗಿ ಪ್ರಜ್ಞೆ- ಶೀಲ- ಸಮಾಧಿಗಳ ವಿಗ್ಗ ಪಜ್ಞಾ ತತ್ವದಲ್ಲಿ ನಿಯಮಿಸುವಂತೆ, ಬಸವಣ್ಣನವರೂ ಸಹ ‘ಅನ್ನ ದಾಸೋಹ ಕಾಯಕ ದಾಸೋಹ- ಜ್ಞಾನ ದಾಸೋಹ’ ಎಂಬ ತ್ರಿವಿಧ ದಾಸೋಹ ಪರಿಕಲ್ಪನೆಯಲ್ಲಿ ಸಮಾಜದ ಎಲ್ಲಾ ವರ್ಗಗಳ ಜನರನ್ನು ಸಮಾನತೆ ಭಾವದಲ್ಲಿ ಲಿಂಗ ದೀಕ್ಷೆ ತತ್ವಾನುಸಾರ ಲಿಂಗಾಯತರನ್ನಾಗಿಸುತ್ತಾರೆ. ಬುದ್ಧ ಮತ್ತು ಬಸವಣ್ಣ ಇಬ್ಬರೂ ತಮ್ಮ ಜನರನ್ನು ದೈವಾರಾಧನೆ ಧಾರ್ಮಿಕ ಶ್ರದ್ದೆಯಿಂದ ನಿಸರ್ಗಾರಾಧನೆಯ ಜೀವ ಪ್ರೀತಿಯ ಮಾನವನ ಶ್ರದ್ಧೆಗೆ ಒಲಿಸಿ ದಯಾದರ್ಶನ ಮೌಲ್ಯಗಳನ್ನು ತಿಳಿಸಿಕೊಡುತ್ತಾರೆ.
ಬುದ್ಧ ಗುರುವಿನ ಪ್ರಕಾರ ಯಾವುದು ಜೀವೋತ್ಪತ್ತಿಯೋ ಅದಕ್ಕೆ ಹುಟ್ಟು ಇರುವಂತೆ ಸಾವು ಇದೆಯೋ ಹಾಗೆ, ಬಸವಣ್ಣನವರ ಪ್ರಕಾರ ಯಾವುದು ಸ್ಥಾವರವೋ ಅದು ಅಳಿಯುತ್ತದೆ. ಅದರ ಉಬಯ ಭೇದಗಳನ್ನು ಅರಿಯಲೆಂದೇ ಸ್ಥಾವರ ಲಿಂಗ ಮತ್ತು ಚರ ಲಿಂಗಗಳ ಕಲ್ಪನೆಯನ್ನು ಮುಂದಿರಿಸುತ್ತಾರೆ ಬಸವಣ್ಣ.
ಸಕಲಜೀವಿಗಳಿಗೂ ಲೇಸು ಬಯಸುವ ದಯಾದರ್ಶನ ಶೀಲಗಳನ್ನು ಬೋಧಿಸುತ್ತಾರೆ, “ಕಳ ಬೇಡ ಕೊಲ ಬೇಡ, ಹುಸಿಯ ನುಡಿಯಲು ಬೇಡ , ತನ್ನ ಬಣ್ಣಿಸಬೇಡ, ಇದಿರ ಅಳಿಯಲು ಬೇಡ, ಮುನಿಯ ಬೇಡ, ಅನ್ಯರಿಗೆ ಅಸಹ್ಯ ಪಡಬೇಡ, ಇದೇ ಅಂತರಂಗ ಶುದ್ಧಿ ಇದೇ ಬಹಿರಂಗ ಶುದ್ದಿ” ಎಂಬ ವಚನ ವಾಕ್ಯಗಳಲ್ಲಿರುವ ಶುದ್ಧ ಶೀಲಚಾರಿತ್ರ್ಯದ ತತ್ವಗಳು ಮೂಲದಲ್ಲಿ ಬುದ್ಧ ಗುರುವು ಬೋಧಿಸಿದ ಪಂಚಶೀಲ ತತ್ವಗಳು ಆಗಿವೆ. ಮೂಲ ಪಾಲಿ ಭಾಷೆಯ ಪಂಚಶೀಲ ತತ್ವಗಳು ಹೀಗಿವೆ…
ಪಾಣಾತಿ ಪಾತ ವೇರಮಣಿ ಸಿಕ್ಕಾ ಪದಂ ಸಮಾಧಿಯಾಮಿ
ಆದಿನ್ನದಾನಾ ವೇರಮಣಿ ಸಿಕ್ಕಾಪದಂ ಸಮಾಧಿಯಾಮಿ
ಕಾಮೇಷು ಮಿಚ್ಛಾಚಾರಾ ವೇರಮಣಿ ಸಿಕ್ಕಾಪದಂ ಸಮಾಧಿಯಾಮಿ
ಮುಸಾವಾದಾ ವೇರಮಣಿ ಸಿಕ್ಕಾ ಪದಂ ಸಮಾಧಿಯಾಮಿ
ಸುರಾ~ ಮೇರಯ- ಮಜ್ಜಾ ಪಮದಟ್ಟಾನ ವೇರಮಣಿ ಸಿಕ್ಕಾಪದಂ ಸಮಾಧಿಯಾಮಿ
ಇದರ ಕನ್ನಡ ಅನುವಾದ
ನಾನು ಪ್ರಾಣಿ ಹತ್ಯೆ ಮಾಡುವುದರಿಂದ
ದೂರವಾಗುವ ಶಿಕ್ಷಾಪದವನ್ನು ಕೈಗೊಳ್ಳುತ್ತೇನೆ.
ನಾನು ಕಳವು ಮಾಡುವುದರಿಂದ
ದೂರವಾಗುವ ಶಿಕ್ಷಾ ಪದವನ್ನು ಕೈಗೊಳ್ಳುತ್ತೇನೆ.
ನಾನು ವ್ಯಭಿಚಾರ ಮಾಡುವುದರಿಂದ
ದೂರವಾಗುವ ಶಿಕ್ಷಾ ಪದವನ್ನು ಕೈಗೊಳ್ಳುತ್ತೇನೆ.
ನಾನು ಸುಳ್ಳು ಹೇಳುವುದರಿಂದ ದೂರವಾಗುವ ಶಿಕ್ಷಾ ಪದವನ್ನು ಕೈಗೊಳ್ಳುತ್ತೇನೆ.
ನಾನು ಸದಾ ಹೆಂಡ, ಸರಾಯಿ ಮುಂತಾದ ಮತ್ತನ್ನುಂಟುಮಾಡಿ ಎಚ್ಚರ ತಪ್ಪಿಸುವ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ದೂರವಾಗುವ ಶಿಕ್ಷಾ ಪದವನ್ನು ಕೈಗೊಳ್ಳುತ್ತೇನೆ.
ಇವು ಬುದ್ಧಗುರುವು ಬೋಧಿಸಿದ ಪಂಚಶೀಲ ತತ್ವಗಳು. ಇದೇ ತತ್ವಗಳು ಬಸವಣ್ಣನವರ ವಚನದಲ್ಲಿ ವ್ಯಕ್ತವಾಗಿರುವುದನ್ನು ನೋಡಿದರೆ ಬುದ್ಧನ ಕಾಲದ ಜೀವನಾದರ್ಶ ತತ್ವಗಳು ಬಸವಣ್ಣನವರ ಜೀವನಾದರ್ಶ ತತ್ವಗಳಲ್ಲಿ ಅರ್ಥಪೂರ್ಣವಾಗಿ ಅನುಸಂಧಾನ ಗೊಂಡಿರುವುದು ವ್ಯಕ್ತವಾಗುತ್ತದೆ.
ಧಮ್ಮ ಚಳವಳಿಯ ಚಿಂತನೆಗಳು
ನೇರವಾದ ಪಡಿನೆಳಲಿನಂತೆ ಬಸವಾದಿ ಶರಣರ ವಚನ ಚಳವಳಿಯ ಸಾಂಸ್ಕೃತಿಕ ಚಹರೆಗಳಾಗಿ ಪ್ರತಿಫಲನಗೊಂಡಿವೆ. ಇಷ್ಟು ಮಾತ್ರವಲ್ಲದೆ ಬುದ್ದ ಗುರುವಿನ ‘ಶರಣ’ ಮೂಲದಿಂದಲೇ ‘ಶರಣ’ ಚಳವಳಿಯ ಜೀವಧಾತುಗಳು ಸಾಗಿ ಬಂದಿವೆ ಎಂಬುದನ್ನು ಕನ್ನಡ ಮತ್ತು ಪಾಳಿ ಭಾಷೆಗಳು ಪರಸ್ಪರ ಅನುಸಂಧಾನ ಗೊಂಡಿರುವ ಬಗೆಯನ್ನು ಸಂಸ್ಕೃತಭೂಯಿಷ್ಠ ಪಾಳಿಗನ್ನಡ ಭಾಷಿಕ ಬಿಂಬಗಳ ಶೋಧನೆಯಿಂದ ತಿಳಿಯಲು ಸಾಧ್ಯವಿದೆ. ಧಮ್ಮ ಮತ್ತು ಶರಣ ಚಳವಳಿಗಳು ತಮ್ಮ ನುಡಿಗಟ್ಟುಗಳಲ್ಲಿ ಹೇಗೆ ಸಾರೂಪ್ಯ ಸಾಮ್ಯ ಸಂಬಂಧಗಳನ್ನು ಕಲ್ಪಿಸಬಹುದೆಂಬುದನ್ನು ಇಲ್ಲಿ ಪರಿಶೀಲಿಸಿ ನೋಡಬಹುದು.
ಈಗಾಗಲೇ ನುಡಿದಂತೆ ‘ಶರಣ’ ಶಬ್ದವು ‘ಶರಣ’ ಆಗಿರುವಂತೆ, ವಜ್ಜನ-
ವಚನ, ಸಚ್ಚಾ- ಸತ್ಯ, ಸಚ್ಚವಜ್ಜೇನ- ಸತ್ಯ ವಚನ, ಅನತ್ತ- ಅನಾತ್ಮ, ಭಿಕ್ಕೆ-ಭಿಕ್ಷೆ.
ಭಿಕ್ಕು- ಭಿಕ್ಷು, ಸೀಲ- ಶೀಲ, ಕಮಾಪನ- ಕ್ಷಮಾಪಣೆ, ತಮಧಂ- ತಮಂಧ
ಹೀಗೆ ಧಮ್ಮ ಮೂಲದ ಅನೇಕ ನುಡಿಗಟ್ಟುಗಳು ಶರಣ ಚಳವಳಿಯಲ್ಲಿ
ಹಾಸುಹೊಕ್ಕಾಗಿವೆ. ಇದು ಬುದ್ಧನ ಕಾಲದಿಂದಲೂ ಬಸವಣ್ಣನವರೆಗೆ ಹರಿದುಬಂದಿವೆ.
ಡಾ.ವಡ್ಡಗೆರೆ ನಾಗರಾಜಯ್ಯ
8722724174