ಸರಗೂರು: ತಾಲ್ಲೂಕಿನ ಆಡಹಳ್ಳಿ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರು ತರಗತಿ ನಡೆಸುತ್ತಿರುವಾಗಲೇ ಕಟ್ಟಡದ ಮೇಲ್ಛಾವಣಿಯ ಸಿಮೆಂಟ್ ಕುಸಿದು ಬಿದ್ದಿದ್ದು ಶಿಕ್ಷಕರು ಮತ್ತು ಮಕ್ಕಳು ಪ್ರಾಣಯದಿಂದ ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದ್ದಾರೆ.
ಸರಗೂರು ತಾಲ್ಲೂಕಿನ ಆಡಹಳ್ಳಿ ಗ್ರಾಮದಲ್ಲಿ 20 ವರ್ಷಗಳ ಹಿಂದೆ ಈ ಕಟ್ಟಡವನ್ನು ನಿರ್ಮಾಣ ಮಾಡಿದ್ದು, ಕಟ್ಟಡ ಇದೀಗ ಶಿಥಿಲ ಸ್ಥಿತಿಯಲ್ಲಿದೆ. ಇದರ ಬಗ್ಗೆ ಸುಮಾರು ಬಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಉದಯಕುಮಾರ್ ಅವರಿಗೆ ಅರ್ಜಿ ಸಲ್ಲಿಸಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ. ಇದೀಗ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಪೋಷಕರು ಮಕ್ಕಳ ಪ್ರಾಣವನ್ನು ಬಲಿ ನೀಡುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಲೆಯ ಮುಖ್ಯ ಶಿಕ್ಷಕರು ನಾರಾಯಣಮೂರ್ತಿ ಮಾತನಾಡಿ, ನಮ್ಮ ಶಾಲೆಯಲ್ಲಿ ಒಟ್ಟು 70 ಮಕ್ಕಳು ಇದ್ದಾರೆ. 1ನೇ ತರಗತಿಯಿಂದ 7ನೇ ತರಗತಿವರೆಗೆ ಶಾಲೆ ನಡೆಯುತ್ತಿದೆ. ಶಾಲೆಯಲ್ಲಿ ನಾಲ್ಕು ಕಟ್ಟಡಗಳಿವೆ. ಈ ಪೈಕಿ ಒಂದು ಕಟ್ಟಡದಲ್ಲಿ ಪಾಠ ಮಾಡುತ್ತಿದ್ದ ಸಂದರ್ಭದಲ್ಲಿಯೇ ಮೇಲ್ಛಾವಣಿಯಿಂದ ಕಾಂಕ್ರೀಟ್ ಕಿತ್ತು ಬಿದ್ದಿದೆ. ಆದರೆ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದೇವೆ. ಘಟನೆಯಿಂದಾಗಿ ಮಕ್ಕಳು ತೀವ್ರ ಭಯಭೀತರಾಗಿದ್ದಾರೆ ಎಂದು ಅಳಲು ತೋಡಿಕೊಂಡರು.
ಶಾಲಾ ಕಟ್ಟಡದಲ್ಲಿ ಇಂತಹದ್ದೊಂದು ಘಟನೆ ನಡೆದಿರುವುದರಿಂದ ಶಾಲೆಗೆ ಮಕ್ಕಳನ್ನು ಕಳುಹಿಸುವುದು ಹೇಗೆ ಎನ್ನುವ ಚಿಂತೆ ಪೋಷಕರದ್ದಾಗಿದೆ. ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೂಕ್ತ ಕ್ರಮವಹಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಶಾಲೆಯಲ್ಲಿ ನಾವು ಓದುತ್ತಿದ್ದ ಸಮಯದಲ್ಲಿ ಈ ಕಟ್ಟಡವನ್ನು ನಿರ್ಮಾಣ ಮಾಡಿದ್ದಾರೆ. ಇವಾಗ ಎರಡು ತಿಂಗಳುದಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಶಾಲೆಯ ಕಟ್ಟಡ ಶಿಥಿಲಗೊಂಡು ಕಟ್ಟಡದ ಮೇಲಿನ ಭಾಗದ ಸಿಮೇಂಟ್ ಕಿತ್ತು ಬರುತ್ತಿದೆ. ಈ ಹಿಂದೆ ಬಿಓ ಅಧಿಕಾರಿ ಉದಯಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಶಾಲೆಯ ಪರಿಶೀಲನೆ ಮಾಡಿಕೊಂಡು ಹೋಗಿದ್ದರು. ಆದರೆ ಈ ಬಗ್ಗೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಆಡಹಳ್ಳಿ ಗ್ರಾಮದ ಮಾಜಿ ಗ್ರಾಪಂ ಸದಸ್ಯ ಹುಚ್ಚಪ್ಪ ಬೇಸರ ವ್ಯಕ್ತಪಡಿಸಿದರು.
ನಮಗೆ ಮಾಹಿತಿ ತಿಳಿಸಿದ ಬಳಿಕ ನಮ್ಮ ಇಲಾಖೆ ಬಿ ಆರ್ ಸಿ ಅಧಿಕಾರಿಗಳನ್ನು ಕಳಿಸಿ ಕಟ್ಟಡದ ಸ್ಥಳ ಪರಿಶೀಲನೆ ಮಾಡಿದ್ದಾರೆ. ಶಾಸಕರು ಜೊತೆ ಮಾತುಕತೆ ನಡೆಸಿದ್ದೇವೆ. ಅ ಕಟ್ಟಡವನ್ನು ರಿಪೇರಿ ಮಾಡಿಸಲು ತಿಳಿಸಿದ್ದೇವೆ. ಶಾಲೆಗೆ ಒಂದು ಕಟ್ಟಡವನ್ನು ಹೊಸದಾಗಿ ನಿರ್ಮಿಸಿಕೊಡಿ ತಿಳಿಸಿದ್ದೇವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಉದಯಕುಮಾರ್ ತಿಳಿಸಿದರು.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz