ತಿಪಟೂರು: ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ನಿವಾಸದ ಎದುರು ಪ್ರತಿಭಟನೆ ನಡೆಸಿದ ಎನ್.ಎಸ್.ಯು.ಐ. ಕಾರ್ಯಕರ್ತರ ಬಂಧನಕ್ಕೆ ವಿವಿಧ ಸಂಘಟನೆಗಳು, ತಿಪಟೂರು ತಾಲ್ಲೂಕು ನಾಗರಿಕ ಬಳಗ ಹಾಗೂ ಕಾಂಗ್ರೆಸ್ ತೀವ್ರ ಖಂಡನೆ ವ್ಯಕ್ತಪಡಿಸಿದ್ದು, ಬಿ.ಸಿ.ನಾಗೇಶ್ ರಾಜೀನಾಮೆಗೆ ಆಗ್ರಹಿಸಿದೆ.
ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ಲೋಕೇಶ್ವರ್ ಮಾತನಾಡಿ, ಬಿ.ಸಿ.ನಾಗೇಶ್ ವಿರುದ್ಧ ಹರಿಹಾಯ್ದಿದ್ದಾರೆ. ಶಿಕ್ಷಣ ಸಚಿವರ ವರ್ತನೆಯಿಂದ ವಿದ್ಯಾರ್ಥಿಗಳು ತೊಂದರೆಗೆ ಒಳಪಟ್ಟಿದ್ದಾರೆ. ಕುವೆಂಪು, ಬಸವಣ್ಣ, ನಾರಾಯಣಗುರು, ಅಂಬೇಡ್ಕರ್, ಭಗತ್ ಸಿಂಗ್, ಅವರ ಮೂಲ ಇತಿಹಾಸವನ್ನು ತಿರುಚಲು ಹೊರಟಿದ್ದಾರೆ. 10 ಮಂದಿ ಕಮಿಟಿಯಲ್ಲಿ 9 ಮಂದಿ ಬ್ರಾಹ್ಮಣರೇ ಕೂತು ಮನು ತತ್ವಗಳನ್ನು ತುರುಕಬೇಕೆಂದು ಹೊರಟಿದ್ದಾರೆ. ರಾಜ್ಯದಲ್ಲಿ ಅಶಾಂತಿ ಉಂಟು ಮಾಡಿದ್ದಾರೆ. ಇದರ ವಿರುದ್ಧ ಪ್ರತಿಭಟನೆಗೆ ಬಂದ ವಿದ್ಯಾರ್ಥಿಗಳ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಿದ್ದಾರೆ ರಾಜ್ಯದಲ್ಲಿ ಶಾಂತಿ ಕದಡುವ ಕಾರ್ಯ ಮಾಡಿದ್ದಾರೆ ಎಂದು ಆರೋಪಿಸಿದರು.
ಇಂತಹ ಮಂತ್ರಿಯನ್ನು ಬೊಮ್ಮಾಯಿ ಅವರ ಮಂತ್ರಿಮಂಡಲದಲ್ಲಿ ಮುಂದುವರಿದರೆ, ಇನ್ನಷ್ಟು ಅನಾಹುತ ಉಂಟಾಗಿ ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆ. ಹಾಗಾಗಿ ಬಿ.ಸಿ.ನಾಗೇಶ್ ಅವರನ್ನು ಸಂಪುಟದಿಂದ ವಜಾ ಮಾಡಬೇಕೆಂದು ಆಗ್ರಹಿಸಿದರು.
ಇದೇ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡ ಸಿ.ಬಿ.ಶಶಿಧರ್, ಪಠ್ಯಪುಸ್ತಕ ಪರಿಷ್ಕರಣ ಸಮಿತಿಯನ್ನು ಹಾಗೂ ಸಮಿತಿಯ ಅಧ್ಯಕ್ಷರಾದ ರೋಹಿತ್ ಚಕ್ರತೀರ್ಥ ಅವರನ್ನು ಕೂಡಲೇ ವಜಾ ಮಾಡಬೇಕೆಂದು ಆಗ್ರಹಿಸಿದರು.
ಇಡೀ ನಾಡು ಕುವೆಂಪು ಅವರನ್ನು ರಾಷ್ಟ್ರಕವಿ ವಿಶ್ವಮಾನವ ಸಂದೇಶ ಇಡೀ ಪ್ರಪಂಚವನ್ನೇ ಗೌರವಿಸುತ್ತಿರುವ ಸಂದರ್ಭದಲ್ಲಿ ರೋಹಿತ್ ಚಕ್ರತೀರ್ಥ ಎಂಬ ವ್ಯಕ್ತಿ ಕುವೆಂಪು ಬರೆದ ನಾಡಗೀತೆಯನ್ನು ತಿರುಚಿ ಕೆಟ್ಟ ಅರ್ಥ ಬರುವಂತೆ ಬಿಂಬಿಸಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.
ಅದೇ ರೀತಿ ಬಸವಣ್ಣನವರ ಬಗ್ಗೆಯೂ ಸಹ ದಾರಿ ತಪ್ಪಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಗೊಂದಲವನ್ನು ಉಂಟು ಮಾಡುತ್ತಿದ್ದಾರೆ. ಹಾಗಾಗಿ ಸಮಿತಿಯನ್ನು ವಜಾ ಮಾಡಬೇಕೆಂದು ಆಗ್ರಹಿಸಿದರು. ಒಂದು ವೇಳೆ ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳದಿದ್ದರೆ ಬುಧವಾರ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಾಂತರಾಜು, ಪ್ರಕಾಶ್, ಯೋಗೀಶ್, ಮಹೇಶ್, ಜಯಣ್ಣ, ಪರಮಶಿವಯ್ಯ, ನ್ಯಾಕೇನಹಳ್ಳಿ ಸುರೇಶ್, ಸೊಪ್ಪು ಗಣೇಶ್, ಬೋರ್ ವೆಲ್ ಮಧುಸೂಧನ್, ದಲಿತ ಮುಖಂಡರಾದ ಬಜಗೂರು ಮಂಜುನಾಥ್, ಶಾಂತಪ್ಪ, ನರಸಿಂಹಯ್ಯ, ಗುರುಮೂರ್ತಿ, ನದೀಮ್,ಮುಂತಾದವರು ಭಾಗವಹಿಸಿದ್ದರು.
ವರದಿ: ಆನಂದ ತಿಪಟೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5