ಇಂದು ರಾಜ್ಯಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ನಗರದ ಮೂರು ಕಡೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ. ಇದೀಗ ಪ್ರಧಾನಿ ಮೋದಿ ರಾಜ್ಯ ಪ್ರವಾಸ ಸಂದರ್ಭದಲ್ಲಿ ಪ್ರತಿಭಟನೆ ಭೀತಿ ಎದುರಾಗಿದೆ.
ಅಗ್ನಿಪಥ್ ಯೋಜನೆ ವಿರೋಧಿಸಿ ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಓಡಾಡುವ ರಸ್ತೆಯಲ್ಲಿ ಖಾಕಿ ಕಣ್ಗಾವಲು ಹಾಕಲಾಗಿದೆ. ಇಂದು ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಬೆಳಿಗ್ಗೆ 11:15 ಕ್ಕೆ ಯಲಹಂಕ ವಾಯು ನೆಲೆಗೆ ಮೋದಿ ಬಂದಿಳಿಯಲಿದ್ದಾರೆ. ಮಲ್ಲೇಶ್ವರಂ ಬಳಿಯಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆ ಗೆ ಆಗಮಿಸಲಿದ್ದಾರೆ. ಇದಾದ ನಂತರ ಜ್ಞಾನ ಭಾರತಿ ಡಾ. ಬಿ.ಆರ್ ಅಂಬೇಡ್ಕರ್ ಸ್ಕೂಲ್ ಆಫ್ ಎಕಾನಾಮಿಕ್ ಗೆ ಭೇಟಿ ನೀಡಲಿದ್ದಾರೆ. ಈ ಎಲ್ಲಾ ಕಾರ್ಯಕ್ರಮಗಳ ನಂತರ ಕೆಂಗೇರಿ ಸಮೀಪದ ಕೊಮ್ಮಘಟ್ಟದಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದಾದ ನಂತರ ಪ್ರಧಾನ ಮಂತ್ರಿ ಮೈಸೂರಿಗೆ ತೆರಳಲಿದ್ದಾರೆ.
ಪ್ರತಿಭಟನೆ ಭೀತಿ : ಆದರೆ ಪ್ರಧಾನಿ ನರೇಂದ್ರ ಮೋದಿ ಭೀತಿ ವೇಳೆ ಪ್ರತಿಭಟನೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಅಗ್ನಿಪಥ್ ಯೋಜನೆ ವಿರೋಧಿಸಿ ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರ ವಿರುದ್ಧ ಧ್ವನಿ ಎತ್ತುವ ಸಂಭವ ಕೂಡಾ ಇದೆ. ಈ ಹಿನ್ನೆಲೆಯಲ್ಲಿ ವಿವಿಧ ಸಂಘಟನೆಗಳ ಮೇಲೆ ಪೊಲೀಸರು ಕಣ್ಣಿಟ್ಟಿದ್ದಾರೆ. ಪ್ರಧಾನಿ ವಿಶೇಷ ರಕ್ಷಣಾ ಅಧಿಕಾರಿಗಳು ಇಂಟಲಿಜೆನ್ಸ್ ನಿಂದ ಮಾಹಿತಿ ಪಡೆಯುತ್ತಿದ್ದಾರೆ.
ಯಾವುದೇ ಪ್ರತಿಭಟನೆ ಆಗದಂತೆ ಪೋಲಿಸ್ ಮುನ್ನೆಚ್ಚರಿಕೆ ವಹಿಸಿದ್ದಾರೆ. ನಗರದಲ್ಲಿ ಖಾಕಿ ಪಡೆ ಹೈ ಅಲರ್ಟ್ ನಲ್ಲಿದೆ. ಯಾವುದೇ ಮುಜುಗರ ಆಗದಂತೆ ಪರಿಸ್ಥಿತಿ ನಿಭಾಯಿಸಲು ಪೊಲೀಸರಿಗೆ ಗೃಹ ಇಲಾಖೆ ಖಡಕ್ ಸೂಚನೆ ನೀಡಿದೆ. ಅನುಮಾನಾಸ್ಪದ ವ್ಯಕ್ತಿಗಳಿಗೆ ಕೂಡಲೇ ಬಂಧಿಸಲು ಸೂಚನೆ ನೀಡಲಾಗಿದೆ. 10 ಸಾವಿರದಷ್ಟು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಇಬ್ಬರು ಹೆಚ್ಚುವರಿ ಆಯುಕ್ತರು, ಇಬ್ಬರು ಜಂಟಿ ಪೊಲೀಸ್ ಆಯುಕ್ತರು, 12 ಡಿಸಿಪಿಗಳು, 30 ಎಸಿಪಿಗಳು, 80 ಇನ್ಸ್ ಪೆಕ್ಟರ್ ಗಳು ಸೇರಿದಂತೆ ಕೆಎಸ್ ಆರ್ ಪಿ, ಸಿಎಆರ್ ಪಡೆ, ಗರುಡ ಪಡೆ ಗಳನ್ನ ಸ್ಥಳದಲ್ಲಿ ನಿಯೋಜಿಸಲಾಗಿದೆ.
ಸಂಚಾರಕ್ಕೆ ಪರ್ಯಾಯ ಮಾರ್ಗ :
ಇನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಬೆಂಗಳೂರು ಹಾಗೂ ಮೈಸೂರು ಪ್ರವಾಸದ ಸಂದರ್ಭದಲ್ಲಿ ಭದ್ರತಾ ವಿಚಾರವಾಗಿ ಸರಣಿ ಸಭೆಗಳು ನಡೆದಿವೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗೃಹಸಚಿವ ಆರಗ ಜ್ಞಾನೇಂದ್ರ ಪೊಲೀಸ್ ಅಧಿಕಾರಿಗಳೊಂದಿಗೆ ಸರಣಿ ಸಭೆ ನಡೆಸಿದ್ದಾರೆ. ಇನ್ನು ಮೋದಿ ರಾಜ್ಯ ಪ್ರವಾಸ ಹಿನ್ನೆಲೆಯಲ್ಲಿ ಬೆಳಿಗ್ಗೆ 11 ರಿಂದ 1 ಗಂಟೆಯ ವರೆಗೆ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ತೆರಳುವ ಮಾರ್ಗ ಬದಲಾಗಲಿದೆ.
ನಗರಕ್ಕೆ ಎಂಟ್ರಿ ಕೊಡೋರು ಕಾವೇರಿ ಜಂಕ್ಷನ್-ಮೇಖ್ರಿ ಸರ್ಕಲ್ -ಹೆಬ್ಬಾಳ ಫ್ಲೈ ಓವರ್ ಬಳಸದೇ ಬೇರೆ ಮಾರ್ಗವಾಗಿ ಸಾಗಬೇಕು. ತುಮಕೂರು ರಸ್ತೆ-ಕೆಆರ್ ಪುರ,ಯಶವಂತಪುರ-ಯಲಹಂಕ-ದೇವನಹಳ್ಳಿ ಕಡೆ ಸಾಗುವವರು ರೂಟ್ ಚೇಂಜ್ ಮಾಡಬೇಕಾಗುತ್ತದೆ.
ಎಲ್ಲೆಲ್ಲಿ ಸಂಚಾರ ನಿಷೇಧವಿರುತ್ತೆ..?
ಮೈಸೂರು ರಸ್ತೆ ಮತ್ತು ನೈಸ್ ಬ್ರಿಡ್ಜ್ ಕಡೆಯಿಂದ ಕೆಂಗೇರಿ ಹಾಗೂ ಉತ್ತರಹಳ್ಳಿ ರಸ್ತೆ ಕಡೆಯಿಂದ ಕೆಂಗೇರಿ ಮತ್ತು ಮೈಸೂರು ರಸ್ತೆಗೆ ಸಂಚಾರ ನಿರ್ಬಂಧಿಸಲಾಗಿದೆ. ಬೆಳಿಗ್ಗೆ 9 ರಿಂದ 6 ಗಂಟೆಯವರೆಗೆ ಮೈಸೂರು-ಬೆಂಗಳೂರು ರಸ್ತೆ ಮತ್ತು ವಿಮಾನ ನಿಲ್ದಾಣ ರಸ್ತೆಯಲ್ಲಿ ಭಾರೀ ವಾಹನ ಸಂಚಾರ ನಿಷೇಧಿಸಲಾಗಿದೆ. ಮಧ್ಯಾಹ್ನ 1 ಗಂಟೆಯಿಂದ 3:30 ರವರೆಗೆ ಕೊಮ್ಮಘಟ್ಟ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನ ಭಾರತಿ ಆವರಣಕ್ಕೆ ಸಾರ್ವಜನಿಕರ ಪ್ರವೇಶವನ್ನ ನಿರ್ಬಂಧಿಸಲಾಗಿದೆ.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz