ತುಮಕೂರು: ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ನಡೆಸಿದ ಅಪರಾಧಿಗೆ ಅಧಿಕ ಜಿಲ್ಲಾ ಸತ್ರ ನ್ಯಾಯಾಲಯ ಎಫ್.ಟಿ.ಎಸ್.ಸಿ.(ಪೋಕ್ಸೋ)ವು 10 ವರ್ಷ ಶಿಕ್ಷೆ ಮತ್ತು 2 ಲಕ್ಷ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.
ತಿಪಟೂರು ನಗರ ಸರಹದ್ದಿನ ಭೋವಿ ಕಾಲೋನಿ ನಿವಾಸಿ ಸೈಯಸ್ ಗೌಸ್ ಅಲಿಯಾಸ್ ಗೌಸ್ ಪಾಷ(40) ಎಂಬಾತ ವಿವಾಹಿತನಾಗಿದ್ದು 1 ಮಗುವಿನ ತಂದೆಯಾಗಿದ್ದರೂ ಸಹ, ಅಪ್ರಾಪ್ತ ಬಾಲಕಿಯನ್ನು ಪರಿಚಯ ಮಾಡಿಕೊಂಡು 06—05—2017ರಂದು ತನ್ನ ಕಾರಿನಲ್ಲಿ ಅಪಹರಿಸಿ ರಾಜಸ್ಥಾನದ ಅಜ್ಮೀರ್ ಗೆ ತೆರಳಿದ್ದು, ಅಲ್ಲಿ 26—05—2017ರವರೆಗೆ ಬಾಲಕಿಯನ್ನು ಅಕ್ರಮ ಬಂಧನದಲ್ಲಿಟ್ಟುಕೊಂಡು ಪ್ರತಿ ದಿನ ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದನು.
ಈ ಪ್ರಕರಣದ ತನಿಖೆ ನಡೆಸಿದ ತಿಪಟೂರು ನಗರದ ತನಿಖಾಧಿಕಾರಿ ದೀಪಕ್ ಎಂ. ಅವರು ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯಲ್ಲಿ ಸಲ್ಲಿಸಿದರು.
ಪ್ರಕರಣದ ವಿಚಾರಣೆಯಲ್ಲಿ ಸೈಯದ್ ಪಾಷ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಧಿಕ ಜಿಲ್ಲಾ ಸತ್ರ ನ್ಯಾಯಾಲಯ ಎಫ್.ಟಿ.ಎಸ್.ಸಿ.(ಪೋಕ್ಸೋ)ಯ ನ್ಯಾಯಾಧೀಶರು ಅಪರಾಧಿಗೆ 10 ವರ್ಷ ಜೈಲು ಶಿಕ್ಷೆ 2 ಲಕ್ಷ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.
ನೊಂದ ಬಾಲಕಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ 2 ಲಕ್ಷ ಪರಿಹಾರ ಸೇರಿದಂತೆ ಒಟ್ಟು 4 ಲಕ್ಷ ಪರಿಹಾರವನ್ನು ನೀಡುವಂತೆ ಕೋರ್ಟ್ ಆದೇಶ ನೀಡಿದೆ.
ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಆಶಾ ಕೆ.ಎಸ್. ವಾದ ಮಂಡಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296