ತುಮಕೂರು: ಜಿಲ್ಲೆಯ ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಸೇರಿದಂತೆ 32 ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ ಮಂಜೇಶ ಎಂಬಾತನನ್ನು ಬೆಂಗಳೂರಿನಲ್ಲಿ ಪತ್ತೆ ಹಚ್ಚಿ ಆತನನ್ನು ಬಂಧಿಸುವ ಸಂದರ್ಭದಲ್ಲಿ ಸಾಹಸಮಯವಾಗಿ ಪೊಲೀಸ್ ಪೇದೆ ದೊಡ್ಡಲಿಂಗಯ್ಯ ತೆಗೆದುಕೊಂಡ ಕ್ರಮದ ಬಗ್ಗೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ.
ಕೊರಟಗೆರೆ ಠಾಣಾ ವ್ಯಾಪ್ತಿಯಲ್ಲಿನ ಕೊರಟಗೆರೆ ಟೌನ್ ಡಿಸಿಸಿ ಬ್ಯಾಂಕ್ ಹತ್ತಿರ ಮನೆಯೊಂದರಲ್ಲಿ ಆರೋಪಿ ಮಂಜೇಶ ಕಳ್ಳತನ ಮಾಡಿದ್ದನು. ಆರೋಪಿ ಪತ್ತೆಯ ಬಗ್ಗೆ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಲಾಗಿತ್ತು ಹಾಗೂ ತುಮಕೂರು ಸ್ಮಾರ್ಟ್ ಸಿಟಿ ಕಮ್ಯಾಂಡ್ ಸೆಂಟರ್ ನಲ್ಲಿ ವಾಹನಗಳನ್ನು ಪರಿಶೀಲನೆ ಮಾಡಿದಾಗ ಆರೋಪಿಯು ತುಮಕೂರು ನಗರದಲ್ಲಿ ಸಂಚರಿಸಿ ನಂತರ ದಾಬಸ್ ಪೇಟೆ, ನೆಲಮಂಗಲ ಮೂಲಕ ಬೆಂಗಳೂರು ತಲುಪಿದ್ದು ಆರೋಪಿ ಪತ್ತೆಗಾಗಿ ಅರೋಪಿತನ ವಾಹನ ನಂಬರ್ ನ್ನು ಬೆಂಗಳೂರು ನಗರದ ಟಿ.ಎಂ.ಸಿ. ಯ ಅಲರ್ಟ್ ವಾರ್ನಿಂಗ್ ಸೆಂಟರ್ ಗೆ ತಿಳಿಸಲಾಗಿತ್ತು.
ಆಗಸ್ಟ್ 6ರಂದು ಟಿ.ಎಂ.ಸಿ.ಯ ಇಂಜಿನಿಯರ್ ಅಶೋಕ್ ರವರು, ಕೊರಟಗೆರೆ ಪೊಲೀಸ್ ಠಾಣಾ ದೊಡ್ಡಲಿಂಗಯ್ಯ ರವರಿಗೆ ಸದಾಶಿವನಗರ ಟ್ರಾಫಿಕ್ ಜಂಕ್ಷನ್ ಬಳಿ ಆರೋಪಿ ಮಂಜೇಶ ದ್ವಿಚಕ್ರ ವಾಹನದಲ್ಲಿ ಬರುತ್ತಿರುವ ಬಗ್ಗೆ ನೀಡಿದ ಮಾಹಿತಿಯ ಮೇರೆಗೆ ಮಂಜೇಶ ನನ್ನ ದ್ವಿ ಚಕ್ರ ವಾಹನ ಸಮೇತ ಅಡ್ಡಗಟ್ಟಿದ್ದರು.
ಆದರೆ ಆರೋಪಿ ಮಂಜೇಶ ವಾಹನವನ್ನು ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದನು. ಈ ವೇಳೆ ಆತನ ಕಾಲನ್ನು ಹಿಡಿದು ಜಗ್ಗಿದ್ದು, ಸುಮಾರು 20 ಮೀಟರ್ ದೂರ ಎಳೆದು ಕೊಂಡು ಹೋಗಿರುತ್ತಾನೆ. ನಂತರ ಅಲ್ಲೆ ಇದ್ದ ಸದಾಶಿವನಗರ ಟ್ರಾಫಿಕ್ ಠಾಣಾ ಮಹಿಳಾ ಎಎಸ್ ಐ ನಾಗಮ್ಮ ಮತ್ತು ಗೃಹ ರಕ್ಷಕ ದಳದ ಸಿಬ್ಬಂದಿ ಶ್ರೀಧರ್ ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಆರೋಪಿಯನ್ನು ಬಂಧಿಸಲಾಗಿದೆ.
ಆರೋಪಿಯಿಂದ ಒಟ್ಟು 10,000/- ರೂ ನಗದು ಹಣ, ಹಾಗೂ 6,75,000/- ರೂ ಬೆಲೆ ಬಾಳುವ 135 ಗ್ರಾಂ ತೂಕದ ಚಿನ್ನದ ಒಡವೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಂಜೇಶ್ ಒಬ್ಬನೆ ದ್ವಿಚಕ್ರ ವಾಹನದಲ್ಲಿ ಬಂದು ವಯಸ್ಸಾದ ಹೆಂಗಸರಿಗೆ ಪೋಸ್ಟ್ ಆಫೀಸ್ ಮತ್ತು ಬ್ಯಾಂಕ್ ಗಳ ಹತ್ತಿರ ವೃದ್ಧಾಪ್ಯ ವೇತನ ಮತ್ತು ಪೆನ್ಶನ್ ಕೊಡಿಸುವುದಾಗಿ ನಂಬಿಸಿ ಅವರ ಆಧಾರ್ ಕಾರ್ಡ, ರೇಷನ್ ಕಾರ್ಡ್ ಇತ್ಯಾದಿ ದಾಖಲಾತಿಗಳನ್ನು ಕೇಳಿ ಅವನ್ನು ಜೆರಾಕ್ಸ್ ಮಾಡಿಕೊಂಡು ಬರಲು ಆಸಾಮಿಯ ದ್ವಿಚಕ್ರ ವಾಹನದಲ್ಲಿ ಕೂರಿಸಿಕೊಂಡು ಹೋಗಿ ಬ್ಯಾಂಕ್ ಮತ್ತು ಪೋಸ್ಟ್ ಆಫೀಸ್ ಗಳಲ್ಲಿ ಮೈಮೇಲಿನ ಒಡವೆಗಳನ್ನು ನೋಡಿದರೆ ವೃದ್ಧಾಪ್ಯ ವೇತನ ಮತ್ತು ಪೆನ್ಶನ್ ಕೊಡುವುದಿಲ್ಲ ಎಂದು ಅವರ ಮೈ ಮೇಲೆ ಇದ್ದ ಆಭರಣಗಳನ್ನು ಬಿಚ್ಚಿಸಿಕೊಂಡು ಅಥವ ಬಲವಂತವಾಗಿ ಕಿತ್ತುಕೊಂಡು ಹೋಗುವ ಪ್ರವೃತ್ತಿ ಉಳ್ಳವನಾಗಿದ್ದಾನೆ.
ಈ ಆಭರಣಗಳನ್ನು ಮಾರಾಟ ಮಾಡಿ ಬಂದ ಹಣದಿಂದ ಗೋವಾ/ಮಂಗಳೂರು ಕಡೆಗಳಿಗೆ ಹೋಗಿ ಮೋಜು ಮಸ್ತಿ ಮಾಡುತ್ತಿದ್ದನು.
ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಆರೋಪಿ ಮಂಜೇಶ್ ನ ಮೇಲೆ ಪ್ರಕರಣ ದಾಖಲಾಗಿದೆ:
1) ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಮೊನಂ:56/2024 ಕಲಂ:420 ಐಪಿಸಿ
2) ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಮೊನಂ:75/2024 ಕಲಂ:420 ಐಪಿಸಿ
3) ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಮೊನಂ:135/2024 ಕಲಂ:379 ಐಪಿಸಿ
4) ಕೊರಟಗೆರೆ ಪೊಲೀಸ್ ಠಾಣೆ ಮೊನಂ:182/2024 ಕಲಂ:420 ಐಪಿಸಿ
5) ಹೆಬ್ಬರು ಠಾಣೆಯಲ್ಲಿ 229/2023 ಕಲಂ:420 ಐಪಿಸಿ
6) ಮಧುಗಿರಿ ಪೊಲೀಸ್ ಠಾಣೆಯಲ್ಲಿ ಮೊನಂ:21/2024 ಕಲಂ:420 ಐಪಿಸಿ
7) ಕೋಳಾಲ ಪೊಲೀಸ್ ಠಾಣೆಯಲ್ಲಿ ಮೊನಂ:25/2024 ಕಲಂ:379 ಐಪಿಸಿ
ಇವುಗಳಲ್ಲದೆ ಆರೋಪಿಯು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ಮೈಸೂರು ಸಿಟಿ ಪೊಲೀಸ್ ಠಾಣೆಗಳ ವ್ಯಾಪ್ತಿಗಳ ಸುಮಾರು 32 ಪ್ರಕರಣಗಳಲ್ಲಿ ಆರೋಪಿಯಾಗಿರುತ್ತಾನೆ.
32 ಪ್ರಕರಣಗಳಲ್ಲಿ ಬೇಕಾಗಿದ್ದ ಕಳ್ಳನನ್ನು ಸಾಹಸಮಯವಾಗಿ ಹಿಡಿದ ಪೊಲೀಸ್ ಪೇದೆ! pic.twitter.com/tiLjVgZgiN
— Namma Tumakuru (@namma_tumakuru) August 8, 2024
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296