ಬೆಂಗಳೂರು: ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದ ತಕ್ಷಣ ನೂತನ ಶಿಕ್ಷಣ ನೀತಿ (ಎನ್‍ಇಪಿ) ಬದಲಿಸುವ ಮಾತನಾಡಿದ್ದಾರೆ. ಅದರಲ್ಲಿರುವ ಲೋಪ ದೋಷ, ಅವುಗಳನ್ನು ಬದಲಿಸುವ ಮಾತನಾಡಿಲ್ಲ. ಇವತ್ತಿನ ರಾಜ್ಯ ಸರಕಾರದಲ್ಲಿ ಯಾರು ಶಿಕ್ಷಣ ಸಚಿವ ಎಂಬುದೇ ಗೊತ್ತಾಗುತ್ತಿಲ್ಲ ಎಂದು ಆಕ್ಷೇಪಿಸಿದರು ಎಂದು ರಾಜ್ಯದ ಮಾಜಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ತಿಳಿಸಿದರು.
ವಿಧಾನಸೌಧದ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಇಂದು ಮಾತನಾಡಿದ ಅವರು, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಮಧು ಬಂಗಾರಪ್ಪ ಅವರಲ್ಲಿ ಯಾರು ಶಿಕ್ಷಣ ಸಚಿವರು ಎಂದು ಕೇಳಿದರು. ಸರಕಾರದ ಹಿಂದಿರುವ ಬುದ್ಧಿಜೀವಿಗಳು ಶಿಕ್ಷಣ ಸಚಿವರೇ ಎಂದು ಕೇಳಿದರು. ಅವರು ತಂದಿದ್ದನ್ನು ನಾವ್ಯಾಕೆ ಮಾಡಬೇಕ್ರಿ ಎಂಬ ಹಾರಿಕೆಯ ಉತ್ತರ ಸರಿಯಲ್ಲ ಎಂದು ಅವರು ಟೀಕಿಸಿದರು. ಉಡಾಫೆ ವ್ಯವಸ್ಥೆ ಇದೆ ಎಂದು ತಿಳಿಸಿದರು.
ಭಾರತೀಯ ಯೋಚನೆಗೆ ಅನುಗುಣವಾಗಿ ಶಿಕ್ಷಣ ಪದ್ಧತಿ ಇರಬೇಕೆಂದು ಡಾ.ಅಂಬೇಡ್ಕರ್, ನೇತಾಜಿ ಅವರು ಅನೇಕ ಬಾರಿ ಮಾತನಾಡಿದ್ದಾರೆ. ಸ್ವದೇಶಿ ಯೋಚನೆಗಳನ್ನು ತರಬೇಕೆಂದು ಮಹಾತ್ಮ ಗಾಂಧೀಜಿ ನುಡಿದಿದ್ದರು ಎಂದು ಹೇಳಿದರು. ಶಿಕ್ಷಣ ತಜ್ಞರ ಸಮಿತಿ ಮಾಡಿ ಪಠ್ಯಕ್ರಮ, ಪಾಠದಲ್ಲಿ ಬದಲಾವಣೆ ಮಾಡಲಾಗುತ್ತಿತ್ತು. ಇದೀಗ ಕಾಂಗ್ರೆಸ್ ರಿಸರ್ಚ್ ಟೀಮಿನಿಂದ ಬಂದ ಸಲಹೆಗಳನ್ನು ಮತ್ತು ಪಾಠಗಳನ್ನು ಸೇರಿಸಲು ನಿರ್ಧರಿಸಿದ್ದಾರೆ ಎಂದು ಆರೋಪಿಸಿದರು.


