ನವದೆಹಲಿ: 10ನೇ ಅಖಿಲ ಭಾರತ ವಿದ್ಯಾರ್ಥಿ ಸಮ್ಮೇಳನದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಜಿಲ್ಲಾ ಕಾರ್ಯದರ್ಶಿಯಾದ ಲಕ್ಕಪ್ಪ ಸಿ.ಬಿ. ಸೆಕ್ರಟರಿಯಟ್ ಸದಸ್ಯರಾದ ಪಲ್ಲವಿ ಮತ್ತು ಭರತ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಚಳುವಳಿಯ ಉದ್ದೇಶ:
ನಮ್ಮ ದೇಶದ ನವೋದಯ ಚಳುವಳಿಯ ಮೂಲ ಉದ್ದೇಶ ಎಲ್ಲಾ ಹಳೆಯ ಕಂದಚಾರ, ಮೌಡ್ಯ, ಮತಾಂಧತೆಗಳಿಂದ ಮುಕ್ತಗೊಳಿಸುವುದಾಗಿತ್ತು. ಸ್ವಾತಂತ್ರ್ಯ ಸಂಗ್ರಾಮದ ಮಹಾನ್ ಕ್ರಾಂತಿಕಾರಿಗಳಾದ ಭಗತ್ ಸಿಂಗ್, ನೇತಾಜಿ ಅವರು ರಾಜಕೀಯ, ಆರ್ಥಿಕ, ಸಾಂಸ್ಕೃತಿಕ, ಸಾಮಾಜಿಕವಾಗಿ ಮೂಲಭೂತ ಬದಲಾವಣೆ ತರುವ ಕನಸು ಹೊತ್ತು, ಎಲ್ಲರಿಗೂ ಶಿಕ್ಷಣ, ಆರೋಗ್ಯ, ಉದ್ಯೋಗ ಒದಗಿಸಿ, ಯಾವ ಹೆಣ್ಣು ಮಗುವು ಅಭದ್ರತೆಯಿಂದ ಬಳಲದ ಸಮ ಸಮಾಜವನ್ನು ನಿರ್ಮಿಸುವ ಮಹಾನ್ ಧೈಯದೊಂದಿಗೆ ಹೋರಾಡಿದರು.
ಭಾರತಕ್ಕೆ ಸ್ವಾತಂತ್ರ್ಯ ದೊರೆತು 77 ವರ್ಷಗಳು ಕಳೆದಿವೆ. ಆದರೆ ಇಂದಿಗೂ ಅಸಂಖ್ಯಾತ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಕಿತ್ತು ತಿನ್ನುವ ಬಡತನ, ಹಸಿವೆಯಿಂದ ನರಳುತ್ತಿರುವ ಕಂದಮ್ಮಗಳು ಬೀದಿ ಹೆಣವಾಗುತ್ತಿದ್ದಾರೆ. ಬಹುದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳು ಬಾಲ ಕಾರ್ಮಿಕರಾಗಿದ್ದಾರೆ. ಹೀಗೆ ಹತ್ತು ಹಲವು ಸಾಮಾಜಿಕ ಪಿಡುಗುಗಳಿಂದ ದೇಶ ನಲುಗುತ್ತಿದೆ. ಇದುವೇ ನಮ್ಮ ಸ್ವಾತಂತ್ರ್ಯ ಭಾರತದ ಚಿತ್ರಣ! ಸ್ವಾತಂತ್ರ್ಯಾನಂತರ ಅಧಿಕಾರಕ್ಕೆ ಬಂದ ಎಲ್ಲ ಸರ್ಕಾರಗಳು ಶಿಕ್ಷಣಕ್ಕೆ ಅನುದಾನ ಕಡಿತಗೊಳಿಸುತ್ತಾ ಬಂದಿವೆ. ಅಷ್ಟೇ ಅಲ್ಲದೆ ಹಲವಾರು ವಿದ್ಯಾರ್ಥಿ ವಿರೋಧಿ ನೀತಿಗಳನ್ನು ಅನುಷ್ಠಾನಗೊಳಿಸುತ್ತಿವೆ. ಈ ಮೂಲಕ ಸಾರ್ವಜನಿಕ ಶಿಕ್ಷಣವನ್ನು ಮೊಟಕುಗೊಳಿಸುವ, ಬಡ ಜನರನ್ನು ಶಿಕ್ಷಣದಿಂದ ದೂರ ತಳ್ಳುವ, ಇಡೀ ದೇಶವನ್ನೇ ಅಜ್ಞಾನದ ಕೂಪಕ್ಕೆ ದೂಡುವ, ಹಾಗೂ ಈ ದೇಶದ ಬಂಡವಾಳಿಗರ ಬೊಕ್ಕಸ ತುಂಬಿಸುವ ನೀತಿಗಳನ್ನು ಕಾಂಗ್ರೆಸ್ ಮೊದಲುಗೊಂಡಂತೆ ಎಲ್ಲ ಪಕ್ಷಗಳು ಜಾರಿಗೊಳಿಸಿವೆ. ಶಿಕ್ಷಣದ ಸಂಪೂರ್ಣ ಖಾಸಗಿಕರಣ, ಕಾರ್ಪೊರೇಟಿಕರಣದ ದುರುದ್ದೇಶದೊಂದಿಗೆ ಕರಾಳ NEP-2020ನ್ನು ಕೇಂದ್ರ ಬಿಜೆಪಿ ಸರ್ಕಾರವು ಜಾರಿಗೊಳಿಸಿತು. ಅಪ್ರಜಾತಾಂತ್ರಿಕವಾಗಿ ಜನರ ಅಭಿಪ್ರಾಯ ಪಡೆಯದೆ ಏಕಪಕ್ಷೀಯವಾಗಿ ಈ ನೀತಿಯನ್ನು ದೇಶದ ಮೇಲೆ ಹೇರಲಾಯಿತು.
NEP-2020ನ್ನು ವಿರೋಧಿಸಿ AIDSO ದೇಶವ್ಯಾಪಿ ಹೋರಾಟಕ್ಕೆ ಮುಂದಾಯಿತು. ಕರ್ನಾಟಕ ರಾಜ್ಯದ ಅಂದಿನ ಬಿಜೆಪಿ ಸರ್ಕಾರ ದೇಶದಲ್ಲೇ ಮೊದಲು ಎಂಬಂತೆ ತರಾತುರಿಯಲ್ಲಿ ಯಾವುದೇ ಪೂರ್ವತಯಾರಿ ಇಲ್ಲದೆ ಈ ನೀತಿಯನ್ನು ಅನುಷ್ಠಾನಗೊಳಿಸಿತು. ಈ ಶಿಕ್ಷಣ ನೀತಿಯು ಜಾರಿಯಾದ ಮೊದಲ ಹಂತದಲ್ಲೇ 13,800 ಸರ್ಕಾರಿ ಶಾಲೆಗಳನ್ನು ವಿಲೀನೀಕರಣದ ಹೆಸರಿನಲ್ಲಿ ಮುಚ್ಚಲು ಆದೇಶ ಹೊರಡಿಸಿತು. ನಾಲ್ಕು ವರ್ಷದ ಪದವಿಯು ಜಾರಿಯಾಯಿತು. ಶಿಕ್ಷಣದ ಮೇಲಾಗುತ್ತಿರುವ ದಾಳಿಯನ್ನು ಸಹಿಸದ ವಿದ್ಯಾರ್ಥಿಗಳು ಹೋರಾಟಕ್ಕೆ ಮುಂದಾದರು. ಎಐಡಿಎಸ್‌ಓ ನಾಯಕತ್ವದಡಿಯಲ್ಲಿ 37 ಲಕ್ಷಕ್ಕೂ ಹೆಚ್ಚು ಸಾರ್ವಜನಿಕರು ಜನಸಾಮಾನ್ಯರು ಸಹಿ ಹಾಕುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಈ ಮೂಲಕ NEP ರದ್ಧತಿಯನ್ನು ಆಗ್ರಹಿಸಿ ರಾಜ್ಯವ್ಯಾಪಿ ವಿದ್ಯಾರ್ಥಿಗಳ ಬೃಹತ್ ಹೋರಾಟಗಳು ಭುಗಿಲೆದ್ದಿತು. ವಿದ್ಯಾರ್ಥಿಗಳ ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರ ಎನ್.ಇ.ಪಿ. 2020ನ್ನು ಕರ್ನಾಟಕದಲ್ಲಿ ರದ್ದುಗೊಳಿಸಬೇಕಾಯಿತು. ಈ ಅಭೂತಪೂರ್ವ ವಿಜಯವು, ದೇಶಕ್ಕೆ ಮಾದರಿಯಾಗುವಂತಿದೆ.
ಈಗ ನಮ್ಮ ಮುಂದಿರುವ ದೊಡ್ಡ ಸವಾಲೆಂದರೆ ಎನ್.ಈ.ಪಿಯು ದೇಶದ ಯಾವ ಮೂಲೆಯಲ್ಲೂ ಜಾರಿಯಾಗದಂತೆ ತಡೆಯಲು ವಿದ್ಯಾರ್ಥಿಗಳ ಸಂಘಟಿತ ಹೋರಾಟ ಬೆಳೆಸುವುದಾಗಿದೆ. ಸಮಾಜದಲ್ಲಿ ಕುಸಿಯುತ್ತಿರುವ ಸಾಂಸ್ಕೃತಿಕ ಮಟ್ಟ ಹಾಗೂ ಮಹಿಳೆಯರ ಮೇಲೆ ದಿನೇದಿನೇ ಹೆಚ್ಚುತ್ತಿರುವ ಅಪರಾಧಗಳ ವಿರುದ್ಧ ಸಾಂಸ್ಕೃತಿಕ ಚಳುವಳಿಯನ್ನು ಹರಿ ಬಿಡಬೇಕಿದೆ. ಸಾರ್ವಜನಿಕ ಶಿಕ್ಷಣವನ್ನು ಉಳಿಸುವ, ಮಾನವತೆ ಮತ್ತು ಸಂಸ್ಕೃತಿಯನ್ನು ಉಳಿಸುವ ಘೋಷವಾಕ್ಯಗಳು ಮೊಳಗಿಸಿ, ಉತ್ತಮ ಸಮಾಜ ನಿರ್ಮಿಸುವ ಉದಾತ್ತ ಜವಬ್ದಾರಿ ನಮ್ಮ ಮೇಲಿದೆ.
ಈ ಐತಿಹಾಸಿಕ ಅವಶ್ಯಕತೆಗಾಗಿ ವಿದ್ಯಾರ್ಥಿ ಹೋರಾಟಗಳನ್ನು ಇನ್ನಷ್ಟು ಬಲಿಷ್ಟಗೊಳಿಸಲು AIDSO 10ನೇ ಅಖಿಲ ಭಾರತ ಸಮ್ಮೇಳನವನ್ನು ದೇಶದ ರಾಜಧಾನಿ ದೆಹಲಿಯಲ್ಲಿ 27,28,29 ರಂದು ಹಮ್ಮಿಕೊಳ್ಳಲಾಗಿದೆ. ಶಿಕ್ಷಣ ಪ್ರೇಮಿ ಜನತೆ, ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ದೊಡ್ಡ ಸಂಖ್ಯೆಯಲ್ಲಿ ಈ ಸಮ್ಮೇಳನದ ಕರೆಗೆ ಓಗೊಟ್ಟು, ಅಖಿಲ ಭಾರತ ಸಮ್ಮೇಳನವನ್ನು ಯಶಸ್ವಿಗೊಳಿಸಲು ಎಐಡಿಎಸ್‌ಓ ಜಿಲ್ಲಾ ಸಮಿತಿಯು ಈ ಮೂಲಕ ಮನವಿ ಮಾಡುತ್ತದೆ.
ಬೇಡಿಕೆಗಳು:
- ಶಾಲಾ ಕಾಲೇಜುಗಳಲ್ಲಿ ಎಲ್ಲಾ ಹಂತದ ಶುಲ್ಕ ಏರಿಕೆಯನ್ನು ತಡೆಗಟ್ಟಿ
- ಸಾರ್ವಜನಿಕ ಶಿಕ್ಷಣವನ್ನು ಬಲಪಡಿಸಿ, ಮುಚ್ಚಿದ ಶಾಲೆಗಳನ್ನು ಪುನರಾರಂಭಿಸಿ!
- ಖಾಲಿ ಇರುವ ಎಲ್ಲಾ ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ಕೂಡಲೇ ಖಾಯಂ ಆಧಾರದ ಮೇಲೆ ಭರ್ತಿ ಮಾಡಿ.
- NTA ರದ್ದುಗೊಳಿಸಿ ಮತ್ತು ಎಲ್ಲಾ ಪರೀಕ್ಷಾ ಅಕ್ರಮಗಳ ಕುರಿತು ಪರಿಣಾಮಕಾರಿ ತನಿಖೆ ನಡೆಸಿ!
- ವೈದ್ಯಕೀಯ ಶಿಕ್ಷಣದಲ್ಲಿ ಅವೈಜ್ಞಾನಿಕ CBME ಅನುಷ್ಠಾನಗೊಳಿಸುವುದನ್ನು ನಿಲ್ಲಿಸಿ ಮತ್ತು NEXTನ್ನು ರದ್ದುಗೊಳಿಸಿ.
- ನಾಲ್ಕುಪದವಿ ತಿರಸ್ಕರಿಸಿ. ಶಿಕ್ಷಣದ ವ್ಯಾಪಾರೀಕರಣ, ಖಾಸಗೀಕರಣ, ಕೇಂದ್ರೀಕರಣ, ವೃತ್ತಿಪರೀಕರಣದ ನೀಲಿನಕ್ಷೆಯಾಗಿರುವ ಎನ್ ಈಪಿ-2020ನ್ನು ರದ್ದುಗೊಳಿಸಿ ಮತ್ತು ಶಿಕ್ಷಣದಲ್ಲಿ ಕೋಮುವಾದೀಕರಣವನ್ನು ತಡೆಗಟ್ಟಿ.
- ಎಲ್ಲಾ ಸಂಶೋಧನಾ ವಿದ್ಯಾರ್ಥಿಗಳಿಗೆ ತಾರತಮ್ಯವಿಲ್ಲದೆ ಗೌರವಾನ್ವಿತ ಮತ್ತು ನಿಯಮಿತ ಫೆಲೋಶಿಪ್ ಅನ್ನು ನೀಡಲು ಕ್ರಮಕೈಗೊಳ್ಳಿ,
- ನವೋದಯದ ಹರಿಕಾರರು ಮತ್ತು ಸ್ವಾತಂತ್ರ್ಯ ಹೋರಾಟಗಾರರ ಜೀವನ ಹೋರಾಟಗಳನ್ನು ಪಠ್ಯಕ್ರಮದಲ್ಲಿ ಸೇರಿಸಿ! ಅವೈಜ್ಞಾನಿಕ ವಿಚಾರಗಳನ್ನು ಹರಡುವ ಮತ್ತು ಐತಿಹಾಸಿಕ ಸತ್ಯಗಳನ್ನು ವಿರೂಪಗೊಳಿಸುವುದನ್ನು ನಿಲ್ಲಿಸಿ.
- ಸರ್ಕಾರ ಎಲ್ಲರಿಗೂ ಉದ್ಯೋಗವನ್ನು ಖಾತ್ರಿ ಪಡಿಸಬೇಕು.
- ಶಿಕ್ಷಣಕ್ಕಾಗಿ ಕೇಂದ್ರ ಬಜೆಟ್‌ನಲ್ಲಿ 10% ಮತ್ತು ರಾಜ್ಯ ಬಜೆಟ್‌ನಲ್ಲಿ 30% ಮೀಸಲಿಡಿ. ಒಟ್ಟು ಜಿಡಿಪಿಯ 3% ಮತ್ತು ಬಜೆಟ್‌ನಲ್ಲಿ 3%ನ್ನು ಸಂಶೋಧನೆಗಾಗಿ ನಿಗದಿಪಡಿಸಿ,
- ಕ್ಯಾಂಪಸ್‌ಗಳ ಒಳಗೆ ಮತ್ತು ಹೊರಗೆ ಮಹಿಳೆಯರು, ವಿದ್ಯಾರ್ಥಿನಿಯರು ಮತ್ತು ಅವರ ಘನತೆಯ ರಕ್ಷಣೆಯನ್ನು ಖಾತ್ರಿಪಡಿಸಿ,
- ಲಿಂಗೋ ಆಯೋಗದ ಶಿಫಾರಸ್ಸುಗಳನ್ನು ರದ್ದುಗೊಳಿಸಿ ಮತ್ತು ವಿದ್ಯಾರ್ಥಿ ಸಂಘದ ಚುನಾವಣೆಗಳನ್ನು ಎಲ್ಲ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಮರು-ಪರಿಚಯಿಸಿ. ಎಲ್ಲಾ ಶೈಕ್ಷಣಿಕ ಕ್ಯಾಂಪಸ್ ಗಳಲ್ಲಿ ಪ್ರಜಾಸತ್ತಾತ್ಮಕ ಹಕ್ಕುಗಳು ಮತ್ತು ಮುಕ್ತ ಪ್ರಜಾತಾಂತ್ರಿಕ ವಾತಾವರಣವನ್ನು ಖಚಿತಪಡಿಸಿ!
ಕಾರ್ಯಕ್ರಮದ ವಿವರ:
ಬಹಿರಂಗ ಅಧಿವೇಶನ
1.ಪ್ರೊ. ಇರ್ಫಾನ್ ಅಬೀಬ್ ( ಪ್ರಖ್ಯಾತ ಇತಿಹಾಸಕಾರರು)
2.ಪ್ರೊ. ಚಮನ್ ಲಾಲ್ (ಬರಹಗಾರರು, ಭಗತ್ ಸಿಂಗ್ ದಾಖಲೆಗಳ ಸಲಹೆಗರಾರು)
3.ಅರುಣ್ ಕುಮಾರ್ ಸಿಂಗ್( ಮಾಜಿ ಅಧ್ಯಕ್ಷರು, AIDSO)
4.ವಿ.ಎನ್ ರಾಜಶೇಖರ್( ಅಖಿಲ ಭಾರತ ಅಧ್ಯಕ್ಷರು)
5.ಸೌರವ್ ಘೋಷ್ ( ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ)
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q