ತುಮಕೂರು: ತೋಟಗಾರಿಕೆ ಇಲಾಖೆ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿಯೂ ಜನವರಿ ಮಾಹೆಯ ಅಂತ್ಯದಲ್ಲಿ ಫಲ–ಪುಷ್ಪ ಪ್ರದರ್ಶನವನ್ನು ಆಯೋಜಿಸಲಾಗುತ್ತಿದ್ದು, ಫಲ–ಪುಷ್ಪ ಪ್ರದರ್ಶನವನ್ನು ವೈಶಿಷ್ಠ್ಯಪೂರ್ಣವಾಗಿ ಏರ್ಪಡಿಸಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಜರುಗಿದ ಫಲ–ಪುಷ್ಪ ಪ್ರದರ್ಶನ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಫಲ–ಪುಷ್ಪ ಪ್ರದರ್ಶನದ ಅಂಗವಾಗಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಉಪಯೋಗವಾಗುವಂತೆ ಕೃಷಿ, ಮೀನುಗಾರಿಕೆ, ಪಶು ಸಂಗೋಪನೆ, ಅರಣ್ಯ, ರೇಷ್ಮೆ, ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಂದ ಮಾಹಿತಿಯುಕ್ತವಾದ ಮಳಿಗೆಗಳನ್ನು ತೆರೆದು ವಸ್ತುಪ್ರದರ್ಶನವನ್ನು ಏರ್ಪಡಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯಿಂದ ಹಳ್ಳಿಯಲ್ಲಿ ಕಣ್ಮರೆಯಾಗುತ್ತಿರುವ ಆಹಾರ ಪದಾರ್ಥಗಳು ಮತ್ತು ಇಲಾಖೆಗೆ ಸಂಬಂಧಿಸಿದ ವಿಷಯಗಳ ಕುರಿತು ವಿಶೇಷ ವಸ್ತು ಪ್ರದರ್ಶನ ಏರ್ಪಡಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಮಕ್ಕಳಿಗೆ ಸಂಬಂಧಿಸಿದ ಮೌಲ್ಯಯುತ ಪುಸ್ತಕಗಳ ಪ್ರದರ್ಶನ ಏರ್ಪಡಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶಿಸಿದರು.
ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಶಾರದಮ್ಮ ಮಾತನಾಡಿ, ಈ ಬಾರಿಯ ಫಲ–ಪುಷ್ಪ ಪ್ರದರ್ಶನದಲ್ಲಿ ಮಂದಾರಗಿರಿ ದೇವಸ್ಥಾನ, ಕೈದಾಳ ಚನ್ನಕೇಶವ ಸ್ವಾಮಿ ವಿಗ್ರಹ, ಜಾನೂರ್ ಕಲೆಯಿಂದ ರೈತ ಜೀವನ ಶೈಲಿ ಚಿತ್ರಣ, ತೆಂಗಿನಕಾಯಿ ಮತ್ತು ಅಡಿಕೆ ಕರಕುಶಲ ಪ್ರದರ್ಶನ, ವಿವಿಧ ರೀತಿಯ ಅಣಬೆ ಮತ್ತು ಮೈಕ್ರೋ ಗ್ರೇನ್ಸ್ ಪ್ರದರ್ಶನ ಸೇರಿದಂತೆ ವಿವಿಧ ರೀತಿಯ ವಿಶೇಷ ಹಣ್ಣು, ತರಕಾರಿ ಮತ್ತು ಹೂವುಗಳ ಪ್ರದರ್ಶನವನ್ನು ಏರ್ಪಡಿಸಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ರಮೇಶ್, ಪಶು ಪಾಲನಾ ಇಲಾಖೆ ಉಪ ನಿರ್ದೇಶಕ ಡಾ.ಗಿರೀಶ್ ಬಾಬು ರೆಡ್ಡಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx