ಬೆಂಗಳೂರಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಉಂಟಾಗಿರುವ ಮಳೆಯ ಅವಾಂತರಗಳು ದೇಶದ ಗಮನ ಸೆಳೆದಿರುವ ಹಿನ್ನೆಲೆಯಲ್ಲಿ ತೆಲಂಗಾಣ ಸಚಿವ ಕೆಟಿ ರಾಮರಾವ್ ಅವರು ಹವಾಮಾನ ಬದಲಾವಣೆಯ ವಿನಾಶಕಾರಿ ಪರಿಣಾಮಗಳಿಂದ ಭಾರತದ ಯಾವುದೇ ನಗರವು ಹೊರತಾಗಿಲ್ಲ ಎಂದು ಹೇಳಿದ್ದಾರೆ.
ಕೆಟಿಆರ್ ಎಂದೇ ಜನಪ್ರಿಯವಾಗಿರುವ ಸಚಿವರು, ತುರ್ತು ನಗರೀಕರಣದ ಸವಾಲುಗಳನ್ನು ನಿಭಾಯಿಸಲು ನಗರ ಯೋಜನೆ ಮತ್ತು ಆಡಳಿತದಲ್ಲಿ ದಿಟ್ಟ ಸುಧಾರಣೆಗಳನ್ನು ಯೋಜಿಸುವಂತೆ ಕೇಂದ್ರ ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಕರೆ ನೀಡಿದ್ದಾರೆ. ನೀರಿನಿಂದ ಮುಳುಗಿರುವ ಬೆಂಗಳೂರನ್ನು ಅಪಹಾಸ್ಯ ಮಾಡುವ ಎಲ್ಲರಿಗೂ ನಮ್ಮ ನಗರಗಳು ಈಗ ಮಾತಿಗೆ ಸಿಕ್ಕಿವೆ. ಈ ನಗರಗಳು ನಮ್ಮ ಪ್ರಾಥಮಿಕ ಆರ್ಥಿಕ ಇಂಜಿನ್‌ಗಳು. ರಾಜ್ಯಗಳ, ದೇಶದ ಬೆಳವಣಿಗೆಗೆ ಕೊಡುಗೆ ನೀಡುವ ಇವು ವೇಗದ ನಗರೀಕರಣ ಮತ್ತು ಉಪ-ನಗರೀಕರಣದ ಪರಿಣಾಮ ಸಾಕಷ್ಟು ಬಂಡವಾಳವನ್ನು ತುಂಬದ ಕಾರಣ ಮೂಲಸೌಕರ್ಯಗಳು ಕುಸಿಯುತ್ತವೆ ಎಂದು ಟ್ವೀಟ್ ಮಾಡಿದ್ದಾರೆ.
ಹವಾಮಾನ ಬದಲಾವಣೆಯ ವಿನಾಶಕಾರಿ ಪರಿಣಾಮಗಳಿಂದ ಇಂದು ಯಾವುದೇ ಭಾರತೀಯ ನಗರವು (ನನ್ನ ರಾಜ್ಯದ ರಾಜಧಾನಿ ಸೇರಿದಂತೆ) ಪ್ರತಿರಕ್ಷಿತವಾಗಿಲ್ಲ. ಭಾರತವು ಬೆಳೆಯುವುದನ್ನು ಮುಂದುವರಿಸಬೇಕಾದರೆ ನಮಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೂಲಸೌಕರ್ಯದಲ್ಲಿ ಆಮೂಲಾಗ್ರ ಸುಧಾರಣೆಗೆ ಉತ್ತಮವಾದ, ಸಂಘಟಿತ ಬಂಡವಾಳ ಹಂಚಿಕೆಗಳ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದರು.
ಈ ಸಮಸ್ಯೆಗಳನ್ನು ಪರಿಹರಿಸಲು ಆಮೂಲಾಗ್ರ ಬದಲಾವಣೆಗಳು ಆಗಲೇಬೇಕು. ನಮಗೆ ನಗರ ಯೋಜನೆ ಮತ್ತು ಆಡಳಿತದಲ್ಲಿ ದಿಟ್ಟ ಸುಧಾರಣೆಗಳ ಅಗತ್ಯವಿದೆ. ಇದಕ್ಕೆ ನಾವು ನಮ್ಮ ಸಂಪ್ರಾದಾಯವಾದಿ ಮನಸ್ಥಿತಿಯಿಂದ ಹೊರಗಿರಬೇಕು. ಕೆಲವು ಬೆಂಗಳೂರಿನ ನಾಯಕರು ಈ ಹಿಂದೆ ಇದೇ ರೀತಿಯ ಸನ್ನಿವೇಶಗಳ ಬಗ್ಗೆ ಹೈದರಾಬಾದ್ ನಿವಾಸಿಗಳನ್ನು ಅಪಹಾಸ್ಯ ಮಾಡಿದ್ದಾರೆ. ಆದರೆ ಈಗ ಇಲ್ಲಿ ಪರಸ್ಪರರ ಅನುಭವಗಳಿಂದ ಕಲಿಯುವ ಮತ್ತು ಸಾಮೂಹಿಕ ಇಚ್ಛಾಶಕ್ತಿಯನ್ನು ಪ್ರದರ್ಶಿಸುವ ಅಗತ್ಯವಿದೆ ಎಂದು ಅವರು ಹೇಳಿದರು.
ಹೈದರಾಬಾದ್‌ನಲ್ಲಿರುವ ಕೆಲವು ಸ್ನೇಹಿತರು ನಾನು ಹೇಳುವುದನ್ನು ಇಷ್ಟಪಡುವುದಿಲ್ಲ ಎಂದು ನನಗೆ ತಿಳಿದಿದೆ. ಏಕೆಂದರೆ ಹಿಂದೆ ಬೆಂಗಳೂರಿನ ಕೆಲವು ನಾಯಕರು ಇದೇ ಸಂದರ್ಭಗಳಲ್ಲಿ ನಮ್ಮನ್ನು ನಿಂದಿಸಿದ್ದರು. ಆದರೆ ನಾವು ರಾಷ್ಟ್ರವಾಗಿ ಬೆಳೆಯಬೇಕಾದರೆ ನಾವು ಪರಸ್ಪರ ಕಲಿಯಬೇಕು. ಅನುಭವಗಳು ಮತ್ತು ಸಾಮೂಹಿಕ ಇಚ್ಛೆಯ ಶಕ್ತಿಯು ಇಲ್ಲಿ ಮುಖ್ಯ ಎಂದು ಎಂದು ಅವರು ಟ್ವೀಟ್ ಮಾಡಿದ್ದಾರೆ.
ಕಿಲೋಮೀಟರ್ ಉದ್ದದ ಟ್ರಾಫಿಕ್ ಜಾಮ್
ಭಾರೀ ಮಳೆಯಿಂದಾಗಿ ಬೆಂಗಳೂರಿನ ಹಲವು ಭಾಗಗಳಲ್ಲಿ ಪ್ರವಾಹ ಉಂಟಾಗಿ ಜನಜೀವನ ಅಸ್ತವ್ಯಸ್ತಗೊಂಡ ನಂತರ ಕೆಟಿಆರ್ ಈ ಹೇಳಿಕೆಗಳನ್ನು ನೀಡಿದ್ದಾರೆ. ಬೆಂಗಳೂರಿನಲ್ಲಿ ನಾಲ್ಕನೇ ದಿನವೂ ಮಳೆ ಆರ್ಭಟ ಮುಂದುವರಿದ್ದಿದ್ದು ಕಿಲೋಮೀಟರ್ ಉದ್ದದ ಟ್ರಾಫಿಕ್ ಜಾಮ್ ಆಗುತ್ತಿದೆ. ನಗರದ ಕೆಲವು ಬಡವಾಣೆಯ ನಿವಾಸಿಗಳಿಗೆ ಅಗತ್ಯ ವಸ್ತುಗಳನ್ನು ಪೂರೈಸಲು ದೋಣಿಗಳನ್ನು ಬಳಸಲಾಗುತ್ತಿದೆ. ಸರ್ಕಾರದಿಂದ ಎಸ್‌ಡಿಆರ್‌ಎಫ್ ತಂಡವೂ ಕಾರ್ಯ ನಿರ್ವಹಿಸುತ್ತಿದೆ. ಈ ಮಳೆಗೆ ಮೊದಲ ಬಾರಿಗೆ 23 ವರ್ಷದ ಯುವತಿಯೊಬ್ಬಳು ಸಾವೀಗೀಡಾಗಿದ್ದಾಳೆ.
ಹೊರ ವರ್ತುಲ ರಸ್ತೆಯಲ್ಲಿ ನೀರು ನಿಂತಿದ್ದು, ಅಲ್ಲಿನ ಕಂಪೆನಿಗಳ ನೌಕರರು ಕಚೇರಿಗಳಿಗೆ ತೆರಳಲು ಆಗುತ್ತಿಲ್ಲ. ಮಳೆ ಎಡಬಿಡದೆ ಸುರಿಯುತ್ತಿರವ ಹಿನ್ನೆಲೆ ದುರಸ್ತಿ ಕಾಮಾಗಾರಿಯೂ ನಡೆಸಲು ಸಾಧ್ಯವಾಗುತ್ತಿಲ್ಲ. ಕೆಲವೆಡೆ ಸಾರ್ವಜನಿಕರನ್ನು ಸ್ಥಳಾಂತರಿಸಲು ಟ್ರ್ಯಾಕ್ಟರ್‌ಗಳನ್ನು ಬಳಸಲಾಗುತ್ತಿದೆ. ಅಗತ್ಯ ವಸ್ತುಗಳು, ಕುಡಿಯಲು ನೀರು ಸಿಗದೆ ಜನರು ಪರದಾಟ ನಡೆಸುತ್ತಿದ್ದಾರೆ. ಸರ್ಕಾರ ವಿರುದ್ಧ ಸಾರ್ವಜನಿಕ ಆಕ್ರೋಶಗಳು ಹೆಚ್ಚಾಗುತ್ತಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಹಿಡಿಶಾಪ ಹಾಕಲಾಗುತ್ತಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy