ನವದೆಹಲಿ: ತಮಿಳುನಾಡಿನಲ್ಲಿ ನಡೆದ ಹೆಲಿಕಾಫ್ಟರ್ ದುರಂತದಲ್ಲಿ ಬದುಕುಳಿದಿದ್ದ ಅನುಭವಿ ಪೈಲಟ್ ಎನಿಸಿರುವ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರು ಬುಧವಾರ ಬೆಂಗಳೂರಿನ ಕಮಾಂಡೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ.
2020ರಲ್ಲಿ, ಲಘು ಯುದ್ಧವಿಮಾನ (ಎಲ್‌ಸಿಎ) ತೇಜಸ್ ತಾಂತ್ರಿಕ ವೈಫಲ್ಯದಿಂದ ಪತನವಾಗುವ ಅಪಾಯವಿದ್ದಾಗಲೂ, ತಮ್ಮ ಪ್ರಾಣವನ್ನು ಲೆಕ್ಕಿಸದೆ ಅದನ್ನು ರಕ್ಷಿಸಿದ್ದ ವರುಣ್ ಸಿಂಗ್ ಅವರಿಗೆ ಸ್ವಾತಂತ್ರ್ಯೋತ್ಸವದಲ್ಲಿ ಶೌರ್ಯಚಕ್ರ ನೀಡಲಾಗಿತ್ತು.
ವರುಣ್ ಸಿಂಗ್ ಅವರು ಎಲ್ ಸಿಎ ಸ್ಕ್ವಾಡ್ರನ್ ನಲ್ಲಿ ಪೈಲಟ್ ಆಗಿದ್ದರು. ಯುದ್ಧವಿಮಾನದಲ್ಲಿ ಕಾಣಿಸಿದ್ದ ತಾಂತ್ರಿಕ ದೋಷವನ್ನು ಸರಿಪಡಿಸಿದ ಬಳಿಕ, ಅದನ್ನು ಪರೀಕ್ಷಾರ್ಥವಾಗಿ ಹಾರಾಟ ನಡೆಸುವ ಹೊಣೆಯನ್ನು ವರುಣ್ ಹೊತ್ತಿದ್ದರು. ಅತ್ಯಂತ ಎತ್ತರದ ಪ್ರದೇಶದಲ್ಲಿ ವಿಮಾನ ನಿಯಂತ್ರಣ ವ್ಯವಸ್ಥೆ ಮತ್ತು ವಿಮಾನದೊಳಗಿನ ಗಾಳಿಯ ಒತ್ತಡ ವ್ಯವಸ್ಥೆಯನ್ನು ಅವರು ಪರೀಕ್ಷಿಸಬೇಕಿತ್ತು.
ಅತ್ಯಂತ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದ ವೇಳೆ ವಿಮಾನದಲ್ಲಿ ಮತ್ತೆ ತಾಂತ್ರಿಕ ದೋಷ ಇರುವುದನ್ನು ಅವರು ಪತ್ತೆಹಚ್ಚಿದರು. ತಕ್ಷಣ ವಿಮಾನವನ್ನು ಲ್ಯಾಂಡಿಂಗ್ ಮಾಡಲು ಅವರು ಮುಂದಾದರು. ವಿಮಾನವನ್ನು ಇಳಿಸುವಾಗ ವಿಮಾನ ನಿಯಂತ್ರಣ ವ್ಯವಸ್ಥೆ ಕೈಕೊಟ್ಟಿತು. ಪೈಲಟ್ ಗೆ ವಿಮಾನದ ಮೇಲಿದ್ದ ನಿಯಂತ್ರಣ ಸಂಪೂರ್ಣವಾಗಿ ಕೈತಪ್ಪಿತು. ಇದು ದೊಡ್ಡ ದುರಂತ ಉಂಟಾಗುವ ಸೂಚನೆಯಾಗಿತ್ತು. ಲ್ಯಾಂಡಿಂಗ್ ಮಾಡಲು ಯತ್ನಿಸಿದಾಗ, ನಿಯಂತ್ರಣಕ್ಕೆ ಸಿಗದೇ ವಿಮಾನವು ರಭಸದಿಂದ ನೆಲದತ್ತ ಬೀಳಲಾರಂಭಿಸಿತು. ಇದು ಜೀವಕ್ಕೆ ತೀವ್ರ ಅಪಾಯ ತಂದೊಡ್ಡುವ ಪರಿಸ್ಥಿತಿ. ದೈಹಿಕ ಹಾಗೂ ಮಾನಸಿಕ ಬಲವನ್ನು ಕುಗ್ಗಿಸುವ ಈ ಸ್ಥಿತಿಯನ್ನು ಹತೋಟಿಗೆ ತಂದ ವರುಣ್ ಸಿಂಗ್, ತಮ್ಮ ಚಾಲನಾ ಕೌಶಲಗಳನ್ನು ಬಳಸಿ ವಿಮಾನವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾದರು.
ವಿಮಾನವು ಚಾಲಕನ ನಿಯಂತ್ರಣ ತಪ್ಪಿದಾಗ ಅದರಿಂದ ಹೊರ ಬಂದು ಜೀವ ಉಳಿಸಿಕೊಳ್ಳುವ ಆಯ್ಕೆ ಪೈಲೆಟ್ ಗೆ ಇರುತ್ತದೆ ಆದರೆ, ವರುಣ್ ಸಿಂಗ್ ಅವರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ವಿಮಾನವನ್ನು ಉಳಿಸಿಕೊಂಡಿದ್ದರು. ಇಂತಹ ಧೈರ್ಯವಂತ ಅಧಿಕಾರಿಯನ್ನು ಕಳೆದುಕೊಂಡ ದೇಶ ತೀವ್ರ ದುಃಖದಲ್ಲಿದೆ.