ವಿಜಯಪುರ: ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಕೊಳವೆ ಬಾವಿಗೆ ಬಿದ್ದಿದ್ದ 2 ವರ್ಷದ ಮಗು ಸಾತ್ವಿಕ್ನನ್ನು ಜೀವಂತವಾಗಿ ಹೊರ ತೆಗೆಯುವಲ್ಲಿ ರಕ್ಷಣಾ ಸಿಬ್ಬಂದಿ ಕೊನೆಗೂ ಯಶಸ್ವಿಯಾಗಿದ್ದಾರೆ. ಲಕ್ಷಾಂತರ ಜನರ ಕೊನೆಗೂ ಫಲಿಸಿದೆ. ಸತತ 20 ಗಂಟೆಗಳಿಗೂ ಹೆಚ್ಚು ಕಾಲ ನಡೆದ ಕಾರ್ಯಾಚರಣೆಯ ಬಳಿಕ ಮಗುವನ್ನು ರಕ್ಷಣೆ ಮಾಡಲಾಗಿದೆ.
ಎನ್ಡಿಆರ್ಎಫ್ ತಂಡ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಇವರಿಗೆ ಬೆಳಗಾವಿಯಿಂದ ಬಂದಿದ್ದ ಶ್ರೀಶೈಲ್ ಚೌಗಲಾ ನೇತೃತ್ವದ ರಾಜ್ಯ ವಿಪತ್ತು ನಿರ್ವಹಣಾ ತಂಡ (ಎಸ್ಡಿಆರ್ಎಫ್), ಸ್ಥಳೀಯ ಪೊಲೀಸರು, ಅಗ್ನಿ ಶಾಮಕ ದಳ ಸಿಬ್ಬಂದಿ ಸಾಥ್ ನೀಡಿದರು.
ನಿರಂತರ ಕಾರ್ಯಾಚರಣೆ ನಡೆಸಿ ಮಗು ಸಾತ್ವಿಕ್ ನನ್ನು ರಕ್ಷಿಸಿದ ಸಿಬ್ಬಂದಿಯ ಬಗ್ಗೆ ಇದೀಗ ಎಲ್ಲೆಡೆ ಮೆಚ್ಚುಗೆಯ ಮಹಾಪೂರವೇ ವ್ಯಕ್ತವಾಗುತ್ತಿದೆ.
ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತ ತಲುಪುತ್ತಿದ್ದಂತೆಯೇ ಆಂಬುಲೆನ್ಸ್ ಸಿದ್ಧವಾಗಿ ಇರಿಸಲಾಗಿತ್ತು. ಮಗುವನ್ನು ಕೊಳವೆ ಬಾವಿಯಿಂದ ಹೊರ ತೆಗೆಯುತ್ತಿದ್ದಂತೆಯೇ ಪ್ರಾಥಮಿಕ ಚಿಕಿತ್ಸೆ ನೀಡಿ ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಘಟನೆಯ ಹಿನ್ನಲೆ: ಶಂಕರಪ್ಪ ಮುಜಗೊಂಡ ಎಂಬವರು ಮಂಗಳವಾರ ಲಚ್ಯಾಣ ಗ್ರಾಮದ ಜಮೀನಿನಲ್ಲಿ ಕೊಳವೆ ಬಾವಿ ಕೊರೆಯಿಸಿದ್ದರು. ಸುಮಾರು 500 ಅಡಿ ಆಳ ಕೊರೆಸಲಾಗಿತ್ತು. ಆದರೆ, ನೀರು ಬಾರದ ಕಾರಣ ಮುಚ್ಚದೆ ಹಾಗೆಯೇ ಬಿಟ್ಟಿದ್ದರು. ಶಂಕರಪ್ಪ ಮುಜಗೊಂಡ ಅವರ ಮೊಮ್ಮಗ ಸಾತ್ವಿಕ್ ಬುಧವಾರ ಕೊಳವೆ ಬಾವಿಗೆ ಬಿದ್ದಿದ್ದಾನೆ. ಆತ ಸುಮಾರು 15ರಿಂದ 20 ಅಡಿ ಆಳದಲ್ಲಿ ಸಿಲುಕಿದ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಆ್ಯಕ್ಸಿಜನ್ ವ್ಯವಸ್ಥೆ ಮಾಡಲಾಗಿತ್ತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


