ವರದಿ: ಹಾದನೂರು ಚಂದ್ರ
ಎಚ್.ಡಿ.ಕೋಟೆ: ಸಾಮಾಜಿಕ ಜಾಲತಾಣ, ಎಲೆಕ್ಟ್ರಿಕ್ ಮಾಧ್ಯಮಗಳ ನಡುವೆಯೂ ಇಂದಿಗೂ ಮುದ್ರಣ ಮಾಧ್ಯಮಗಳು ಜನರ ನಂಬಿಕೆ ಮತ್ತು ವಿಶ್ವಾಸರ್ಹತೆಯನ್ನು ಉಳಿಸಿಕೊಂಡಿವೆ ಎಂದು ಕನ್ನಡಪ್ರಭ ದಿನ ಪತ್ರಿಕೆ ಸ್ಥಾನಿಕ ಸಂಪಾದಕ ಅಂಶಿ ಪ್ರಸನ್ನ ಕುಮಾರ್ ತಿಳಿಸಿದರು.
ಎಚ್.ಡಿ.ಕೋಟೆ ತಾಲೂಕಿನ ಅಂತರಸಂತೆ ವನ್ಯಜೀವಿ ವಲಯದ ಕಾಕನಕೋಟೆ ಸಫಾರಿ ಕೇಂದ್ರದಲ್ಲಿ ಆಯೋಜಿಸಿದ್ದ ಎಚ್.ಡಿ.ಕೋಟೆ ಮತ್ತು ಸರಗೂರು ತಾಲೂಕು ಪತ್ರಕರ್ತರ ಸಂಘದ ಹೊರ ತಂದಿರುವ ನೂತನ ವರ್ಷದ ದಿನದರ್ಶಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಉಪಸ್ಥಿತಿವಹಿಸಿ ಮಾತನಾಡಿದ ಅವರು, ಮಾಧ್ಯಮಗಳು ಜನರು ಮತ್ತು ಸರ್ಕಾರದ ನಡುವೆ ಸೇತುವೆಯಂತೆ ಕೆಲಸ ಮಾಡಬೇಕು. ಆ ಮೂಲಕ ಜನರ ನಂಬಿಕೆ ಸಂಪಾದಿಸಬೇಕು. ಸಮಸಮಾಜದ ನಿರ್ಮಾಣದ ಕನಸ್ಸಿಗೆ ಮಾಧ್ಯಮಗಳು ಶ್ರಮಿಸಬೇಕು ಎಂದರು.
ಈ ತಾಲೂಕಿನಲ್ಲಿ ಪತ್ರಕರ್ತರು ಮತ್ತು ಶಾಸಕ ಸಂಬಂಧ ಉತ್ತಮವಾಗಿದೆ. ಅನಿಲ್ ಚಿಕ್ಕಮಾದು ಅವರು, ಪತ್ರಕರ್ತರಿಗೆ ಬೆಂಬಲವಾಗಿ ನಿಂತಿದ್ದಾರೆ. ಅವರ ತಂದೆ ಕೂಡ ಪತ್ರಕರ್ತರ ಪರ, ಸಮಾಜ ಪರವಾಗಿದ್ದರು. ಪತ್ರಕರ್ತರಲ್ಲಿ ನೈತಿಕತೆ ಇರಬೇಕು. ಯಾವುದೇ ಆಸೆಗಳಿಗೆ ಬಲಿಯಾಗದೆ, ಸಮಾಜಮುಖಿಯಾಗಿ ಕೆಲಸ ಮಾಡಿದಾಗ ಮಾತ್ರ ಸಮಾಜಕ್ಕೆ ಉತ್ತಮ ಕೊಡುಗೆ ನೀಡಲು ಸಾಧ್ಯ ಎಂದರು.
ಪತ್ರಕರ್ತರು ದಾಖಲೆಗಳನ್ನು ಇಟ್ಟುಕೊಂಡು ಸುದ್ದಿ ಮಾಡಬೇಕು. ದಾಖಲೆಗಳಿಲ್ಲದೇ ಯಾವುದೇ ವ್ಯಕ್ತಿಯ, ಸಂಸ್ಥೆಯ ತೇಜೋವಧೆ ಮಾಡಲು ಸಾಧ್ಯವಿಲ್ಲ. ಆದರೆ, ಕೆಲ ಎಲೆಕ್ಟ್ರಾನಿಕ್ ಮಾಧ್ಯಮಗಳು ದುರುಪಯೋಗಪಡಿಸಿಕೊಂಡು ಯಾವುದೇ ದಾಖಲೆಗಳಿಲ್ಲದೇ ಸುದ್ದಿ ಮಾಡುತ್ತಿವೆ ಎಂದು ಬೇಸರಿಸಿದರು. ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ನಮ್ಮಲ್ಲಿನ ತಾಲೂಕು ಪತ್ರಕರ್ತರ ಸಂಘದಲ್ಲಿ ಬಹಳಷ್ಟು ಒಗ್ಗಟ್ಟಿದೆ. ನಾನು ಇಂದು ಸರ್ಕಾರದಲ್ಲಿ ಉತ್ತಮ ಸ್ಥಾನಮಾನ ಗಳಿಸಿದ್ದೇನೆ. ಕ್ಷೇತ್ರದಲ್ಲಿ ಎರಡು ಬಾರಿ ಶಾಸಕನಾಗಿದ್ದೇನೆ ಎಂದರೆ ಅದಕ್ಕೆ ಪತ್ರಕರ್ತರ ಕೊಡುಗೆ ಅಪಾರ. ಪತ್ರಕರ್ತರು ನನಗೆ ಮಾರ್ಗದರ್ಶಕರಾಗಿದ್ದಾರೆ. ನನ್ನ ಕೆಲಸಗಳ ಬಗ್ಗೆ ನನಗೆ ಎಚ್ಚರಿಸುತ್ತಾರೆ. ನಿತ್ಯ ಪತ್ರಿಕೆಗಳನ್ನು ಓದುವ ಮೂಲಕ ನಾನು ಕ್ಷೇತ್ರದ ಬಗ್ಗೆ ತಿಳಿದುಕೊಂಡು ಆ ಮೂಲಕ ಕಾರ್ಯಪ್ರೌವೃತ್ತನಾಗುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿದ್ದ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಆರ್. ನಾಗರಾಮ ಮಾತನಾಡಿದರು.
ಈ ಸಂದರ್ಭ ಉಪಾಧ್ಯಕ್ಷರಾದ ದೊಡ್ಡಸಿದ್ದು ಹಾದನೂರು, ಪ್ರಧಾನ ಕಾರ್ಯದರ್ಶಿ ಬಿ.ನಿಂಗಣ್ಣ ಕೋಟೆ, ಕಾರ್ಯದರ್ಶಿ ಗಳಾದ ಪುಟ್ಟರಾಜು, ದಾಸೇಗೌಡ, ಖಂಜಾಂಚಿ ಜಿ.ರವಿಕುಮಾರ್, ನಿರ್ದೇಶಕರಾದ ಚಂದ್ರು ಹಾದನೂರು, ರಂಗರಾಜು, ವಾಸೂಕಿ ನಾಗೇಶ್, ಸುರೇಶ್, ಶರವಣ, ಹಂಪಾಪುರ ನಾಗೇಶ್, ಸಂಘದ ಹಿರಿಯ ಸದಸ್ಯರಾದ ಬಸವರಾಜು,ಎಂ,ಎಲ್ ರವಿಕುಮಾರ್, ರಘು, ಜಶೀಲ, ರಾಜ್ಯ ವನ್ಯಜೀವಿ ಮಂಡಳಿ ನಿರ್ದೇಶಕ ವಡ್ಡರಗುಡಿ ಚಿಕ್ಕಣ್ಣ, ನೂರಲಕುಪ್ಪೆ ಗ್ರಾ.ಪಂ.ಅಧ್ಯಕ್ಷೆ ಸುನೀತಾ ಮಹಾದೇವಸ್ವಾಮಿ, ಸಿಸಿಎಫ್ ರಮೇಶ್ ಕುಮಾರ್, ಅಂತರಸಂತೆ ವನ್ಯಜೀವಿ ವಲಯದ ಆರ್ ಎಫ್ ಒ ಎಸ್.ಸಿದ್ದರಾಜು, ತಾ.ಪಂ. ಮಾಜಿ ಸದಸ್ಯ ಸ್ಟ್ಯಾನಿ ಬಿಟ್ಟೋ, ಕಬಿನಿ ಹೇಮಂತ್ ಸೇರಿದಂತೆ ಮುಂತಾದವರು ಹಾಜರಿದ್ದರು.
ಕ್ಷೇತ್ರದಲ್ಲಿ ಜೋಡಿ ರಸ್ತೆ ನಿರ್ಮಾಣದ ಬಗ್ಗೆ ಮುಖ್ಯಮಂತ್ರಿಗಳ ಬಳಿ ಚರ್ಚಿಸಿದ್ದೇನೆ. ಈಗಾಗಲೇ ಸರ್ವೆಗಳು ಆರಂಭವಾಗಿವೆ. ಮುಂದಿನ ದಿನಗಳಲ್ಲಿ ಡಿಪಿಆರ್ ಸಿದ್ಧಪಡಿಸುವ ಬಗ್ಗೆ ಸಂಬಂಧಪಟ್ಟ ಸಚಿವರೊಂದಿಗೆ ಸಭೆ ನಡೆಸಲಿದ್ದೇನೆ. ಇದರ ಜತೆಗೆ ಕ್ಷೇತ್ರದ ಮೂಲ ಸೌಕರ್ಯಗಳ ಅಭಿವೃದ್ಧಿ ಹಾಗೂ ರೈತರಿಗೆ ಜಮೀನು ಮಂಜೂರಾತಿ ಬಗ್ಗೆಯೂ ಚರ್ಚಿಸಲಾಗುವುದು.
–ಅನಿಲ್ ಚಿಕ್ಕಮಾದು, ಶಾಸಕರು, ಎಚ್.ಡಿ.ಕೋಟೆ ವಿಧಾನ ಸಭಾ ಕ್ಷೇತ್ರ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


