ಬೀದರ್: ಬೀದರ್ ಜಿಲ್ಲೆಯ ಔರಾದ ತಾಲೂಕಿನ ಬೆಳಕುಣಿ ಚೌದ್ರಿ ಗ್ರಾಮ ಪಂಚಾಯತ್ ನಲ್ಲಿ ಮೂಲಭೂತ ಸೌಕರ್ಯ ಒದಗಿಸಬೇಕೆಂದು ಪ್ರತಿಭಟನೆ ನಡೆಸಲಾಯಿತು.
ಸುಮಾರು ಎರಡು ವರ್ಷಗಳಿಂದ ಗ್ರಾಮ ಪಂಚಾಯಿತಿಗೆ ಅರ್ಜಿ ನೀಡಿದರೂ ಏನು ಪ್ರಯೋಜನ ಆಗಿಲ್ಲ, ತಕ್ಷಣವೇ ಮೂಲಭೂತ ಸೌಕರ್ಯ ಕಲ್ಪಿಸ ಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ನೀರು, ಚರಂಡಿ ಸ್ವಚ್ಛತೆ ಸೇರಿದಂತೆ ಹಲವು ಸಮಸ್ಯೆಗಳನ್ನು ಪರಿಹರಿಸುವಂತೆ ಪ್ರತಿಭಟನಾಕಾರರು ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು ಒತ್ತಾಯಿಸಿದರು.
ಗ್ರಾಮದ ಸಮಸ್ಯೆ ಬಗ್ಗೆ ಹೇಳಿದರೆ ಪಿಡಿಓ ಉದ್ಧಟತನದಿಂದ ಮಾತನಾಡುತ್ತಾರೆ, ನಾನು ಬೆಳಕುಣಿ ಗ್ರಾಮ ಪಂಚಾಯತ್ ಗೆ ಬಂದು ಒಂದು ತಿಂಗಳಾಯಿತು, ನನಗೆ ಏನೂ ಗೊತ್ತಿಲ್ಲ ಎಂದು ಉಡಾಫೆಯ ಉತ್ತರ ನೀಡುತ್ತಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಇದೇ ವೇಳೆ ಔರಾದ ತಾಲೂಕು ಪಂಚಾಯತ್ ಅಧಿಕಾರಿಗಳು, ಸುದೀಸ್ ಕುಮಾರ್ ಸಹಾಯಕ ನಿರ್ದೇಶಕರು ಭೇಟಿ ನೀಡಿ ಸುಮಾರು ಒಂದು ತಾಸು ಗ್ರಾಮಸ್ಥರ ಜೊತೆಗೆ ಮಾತಕತೆ ನಡೆಸಿದರು.
ನಮಗೆ ಯಾವುದೇ ಸೌಲಭ್ಯ ಸಿಗ್ತಾ ಇಲ್ಲ, ಪಂಚಾಯತ್ ನಲ್ಲಿ ಭೋಗಸ್ ಕಾಮಗಾರಿ ನಡೆದಿದೆ. ವಸತಿ ಯೋಜನೆಯಡಿ ಬಂದಿರುವ ಮನೆಗಳನ್ನು ಪಡೆಯ ಬೇಕಾದರೆ ಅಧಿಕಾರಿಗಳು 20 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆಯಿಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಇನ್ನೂ ಈ ಬಗ್ಗೆ ಪ್ರತಿಕ್ರಿಯಿಸಿದ ಸಹಾಯಕ ನಿರ್ದೇಶಕ, ಗ್ರಾಮಸ್ಥರ ಸಮಸ್ಯೆಗಳಿಗೆ 15 ದಿನಗಳಲ್ಲಿ ಪರಿಹಾರ ಒದಗಿಸುವ ಭರವಸೆ ನೀಡಿದರು, ಆದರೆ ಈ ಭರವಸೆಯಿಂದ ತೃಪ್ತರಾಗದ ಪ್ರತಿಭಟನಾಕಾರರು, 15 ದಿನಗಳೊಳಗೆ ಕೆಲಸ ಮಾಡದಿದ್ದರೆ, ಪಂಚಾಯತ್ ಗೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


