ಹುಳಿಯಾರು: ಸಂತೆ ಮೈದಾನದಲ್ಲಿ ಮೂಲ ಸೌಕರ್ಯ ಕಲ್ಪಿಸುವಲ್ಲಿ ಪಟ್ಟಣ ಪಂಚಾಯಿತಿ ನಿರ್ಲಕ್ಷ್ಯವಹಿಸಿರುವ ಬಗ್ಗೆ ರೈತ ಸಂಘದ ಅಧ್ಯಕ್ಷ ಚಂದ್ರಪ್ಪ ನೇತೃತ್ವದಲ್ಲಿ ಪಟ್ಟಣ ಪಂಚಾಯಿತಿ ಕಚೇರಿ ಮುಂದೆ ನಡೆಯುತ್ತಿರುವ ಪ್ರತಿಭಟನೆ ಮಂಗಳವಾರ ಆರನೇ ದಿನಕ್ಕೆ ಕಾಲಿಟ್ಟಿತು.
ಕರ ನಿರಾಕರಣೆ ಚಳುವಳಿ ಹಾಗೂ ಪ್ರತಿಭಟನೆ ಆರಂಭಿಸಿ ಆರು ದಿನಗಳು ಕಳೆದರೂ ಪ್ರತಿಭಟನಾ ಸ್ಥಳಕ್ಕೆ ಬಾರದ ಶಾಸಕರು ಮತ್ತು ಪಟ್ಟಣ ಪಂಚಾಯಿತಿ ಅಧಿಕಾರಿಗಳ ಕಾರ್ಯವೈಖರಿಯನ್ನು ಹೊಸಹಳ್ಳಿ ಚಂದ್ರಪ್ಪ ಟೀಕಿಸಿದರು.
ಪಟ್ಟಣ ಪಂಚಾಯಿತಿ ಜೀವಂತವಾಗಿಲ್ಲ, ಕೇವಲ ಕಲ್ಕಟ್ಟಡ ಮತ್ತು ನಾಮಕಾವಸ್ಥೆ ಕಚೇರಿ ಎಂದು ದೂರಿದರು. ರೈತ ಹೋರಾಟಕ್ಕೆ ಜಿಲ್ಲಾಡಳಿತ, ಶಾಸಕರು ಮತ್ತು ತಹಶೀಲ್ದಾರ್ ತಕ್ಷಣ ಬಂದು ಸಮಸ್ಯೆ ಆಲಿಸಬೇಕಿತ್ತು. ಆದರೆ ತಹಶೀಲ್ದಾರರು ರಾಜಕಾರಣ ಮಾಡುತ್ತಾ ಶಾಸಕರ ಹಿಂದೆ ತಿರುಗಾಡುತ್ತಿದ್ದಾರೆ ಎಂದು ಟೀಕಿಸಿದರು.
ನಾಲ್ಕು ದಿನಗಳಲ್ಲಿ ಪ್ರತಿಭಟನಾಕಾರರ ಹೋರಾಟಕ್ಕೆ ಯಾರೂ ಸ್ಪಂದಿಸದಿದ್ದಲ್ಲಿ, ಪ್ರತಿಭಟನೆಯ 11ನೇ ದಿನದಿಂದ ಉಪವಾಸ ಕೂರುವ ಮೂಲಕ ಚಳವಳಿಯನ್ನು ಉಗ್ರರೂಪಕ್ಕೆ ಕೊಂಡೊಯ್ಯುತ್ತೇವೆ ಎಂದು ಎಚ್ಚರಿಕೆ ನೀಡಿದರು.
ತಾಲ್ಲೂಕು ಅಧ್ಯಕ್ಷ ಕರಿಯಪ್ಪ, ಸೋಮಜ್ಜನ ಪಾಳ್ಯದ ಬೀರಲಿಂಗಯ್ಯ, ಕಲ್ಲಹಳ್ಳಿ ಮಲ್ಲೇಶಯ್ಯ, ನೀರಾ ಈರಣ್ಯ, ಜಗದೀಶ್, ಪ್ರಶಾಂತ್, ಸೀಗೆಬಾಗಿ ಮಂಜುನಾಥ್, ಆಶಾ, ಲಕ್ಷ್ಮಿ ಸೇರಿದಂತೆ ಹಾಗೂ ರೈತರು ಹಾಜರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC