ತಿಪಟೂರು: ತಿಪಟೂರು ಕನ್ನಡ ರಕ್ಷಣಾ ವೇದಿಕೆ ಕಾರ್ಯಾಲಯದಲ್ಲಿ ಪ್ರಾರಂಭೋತ್ಸವ ನಡೆಯಿತು. ಬಳಿಕ ನೂರಾರು ಯುವ ಕಾರ್ಯಕರ್ತರನ್ನೊಳಗೊಂಡ ಕನ್ನಡ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಬೈಕ್ ರ್ಯಾಲಿ ನಡೆಸಿ, ತಾಲೂಕು ಕಚೇರಿ ಆವರಣದಲ್ಲಿ ಸೇರಿ ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿದ ಪುಂಡರ ವಿರುದ್ಧ ಪ್ರತಿಭಟನೆ ನಡೆಸಿದರು.
ಶಿವಸೇನೆಯ ಪುಂಡರು ಕನ್ನಡ ಧ್ವಜವನ್ನು ಬೆಂಕಿ ಹಚ್ಚಿ ಸುಟ್ಟು ಹಾಕಿರುವ ಘಟನೆಯನ್ನು ಖಂಡಿಸಿ ಗ್ರೇಡ್ 2 ತಹಸೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಇದೇ ವೇಳೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಾಧ್ಯಕ್ಷ ಆರ್.ವಿಜಯ್ ಕುಮಾರ್, ಬೆಳಗಾವಿಯ ವಿಷಯದಲ್ಲಿ ಪದೇ ಪದೇ ಜಗಳ ತೆಗೆದು ಕನ್ನಡಿಗರ ಮತ್ತು ಮರಾಠಿಗರ ನಡುವೆ ಸಾಮರಸ್ಯ ಕದಡಿಸುವ ಕಿಡಿಗೇಡಿಗಳು ಶಿವಸೇನೆ, ಮಹಾರಾಷ್ಟ್ರ ಏಕೀಕರಣ ಸಮಿತಿ, ಮತ್ತು ಮಹಾರಾಷ್ಟ್ರ ನವನಿರ್ಮಾಣ ಸೇನೆ ಎಂಬ ಸಂಘಟನೆಗಳ ಹೆಸರಿನಲ್ಲಿ ಕನ್ನಡ, ಕನ್ನಡಿಗ, ಕರ್ನಾಟಕ ಇವುಗಳ ವಿರುದ್ಧ ಕಿಡಿಗೇಡಿ ಕೃತ್ಯ ನಿರಂತರವಾಗಿ ನಡೆಸುತ್ತಿದ್ದರೂ, ಸಹ ನಮ್ಮ ಕರ್ನಾಟಕದ ರಾಜ್ಯಾಡಳಿತ ಬೆಳಗಾವಿ ಜಿಲ್ಲಾಡಳಿತಗಳು ಅವರ ಮೇಲೆ ಯಾವುದೇ ಕಠಿಣ ಕ್ರಮ ಕೈಗೊಳ್ಳದಿರುವುದೇ ಈ ರೀತಿಯ ಘಟನೆಗಳು ಮರುಕಳಿಸಲು ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು.
ಭಗವಾಧ್ವಜವನ್ನು ಹಿಡಿದು ಕೊಂಡು ಕನ್ನಡದ ಧ್ವಜಕ್ಕೆ ಸಾರ್ವಜನಿಕವಾಗಿ ಬೆಂಕಿ ಹಚ್ಚಿ ವಿಕೃತಿ ಮೆರೆದ ದುಷ್ಕರ್ಮಿಗಳ ಮೇಲೆ ಕಠಿಣ ಕ್ರಮ ಕೈಗೊಂಡು, ಪುನಃ ಈ ರೀತಿಯ ಕೃತ್ಯಗಳಾಗದಂತೆ ತಡೆಯಬೇಕು ಇಲ್ಲವಾದರೆ ಕನ್ನಡ ನಾಡಿನ ಜನರ ಆಕ್ರೋಶಕ್ಕೆ ಒಳಗಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಕಿರಣ್, ಯುವಘಟಕದ ಅಧ್ಯಕ್ಷ ಸ್ವರೂಪ್, ಗೌರವಾಧ್ಯಕ್ಷ ಶಿವಪ್ಪ, ಮುಖಂಡರಾದ ದೇವರಾಜ್, ಶರತ್, ಹರೀಶ್, ಶ್ರೀನಿವಾಸ್ ಇತರರು ಹಾಜರಿದ್ದರು.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700