ನವದೆಹಲಿ: ಎಲ್ಲಾ ರಾಜಕೀಯ ಪಕ್ಷಗಳು ಕ್ರಿಮಿನಲ್ ಹಿನ್ನೆಲೆಯಿರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದಕ್ಕೆ ಸಕಾರಣಗಳನ್ನು ಸಾರ್ವಜನಿಕವಾಗಿ ತಮ್ಮ ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಿಸಲು ಕಟ್ಟುನಿಟ್ಟಿನ ಸೂಚನೆ ನೀಡುವಂತೆ ಸುಪ್ರೀಂಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.
ಮುಂಬರುವ ವಿಧಾನಸಭಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಹಿರಿಯ ವಕೀಲ ಅಶ್ವಿನ್ ಕುಮಾರ್ ದುಬೆ ಅವರ ಮೂಲಕ ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿಯ ಪ್ರಕಾರ, ಪ್ರತಿ ರಾಜಕೀಯ ಪಕ್ಷವು ಕ್ರಿಮಿನಲ್ ಪ್ರಕರಣಗಳನ್ನು ಹೊಂದಿರುವ ವ್ಯಕ್ತಿಗೆ ಏಕೆ ಆದ್ಯತೆ ನೀಡಿದೆ ಮತ್ತು ಕ್ರಿಮಿನಲ್ ಪೂರ್ವಾಪರಗಳಿಲ್ಲದ ಅಭ್ಯರ್ಥಿಯನ್ನು ಏಕೆ ಆಯ್ಕೆ ಮಾಡಲಿಲ್ಲ ಎಂಬುದನ್ನು ವಿವರಿಸಬೇಕು. ಈ ವಿಚಾರವನ್ನು ಚುನಾವಣಾ ಆಯೋಗ ಗಮನಿಸಬೇಕು. ಪ್ರತಿಯೊಬ್ಬ ರಾಜಕಾರಣಿಯೂ ಎಲೆಕ್ಟ್ರಾನಿಕ್, ಮುದ್ರಣ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ವಿವರಗಳನ್ನು ಪ್ರಕಟಿಸಬೇಕು. ಈ ನಿಯಮಗಳನ್ನು ಉಲ್ಲಂಘಿಸುವ ಪಕ್ಷದ ಅಧ್ಯಕ್ಷರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣವನ್ನು ದಾಖಲಿಸಲು ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿಐ) ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಸುಪ್ರೀಂ ಕೋರ್ಟ್‍ನ ನಿರ್ದೇಶನಗಳನ್ನು ಉಲ್ಲಂಘಿಸುವ ರಾಜಕೀಯ ಪಕ್ಷದ ನೋಂದಣಿ ರದ್ದುಗೊಳಿಸುವಂತೆ ಭಾರತೀಯ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆಯೂ ಅರ್ಜಿದಾರರು ಕೋರಿದ್ದಾರೆ. ನೋಂದಾಯಿತ ಮತ್ತು ಮಾನ್ಯತೆ ಪಡೆದ ರಾಜಕೀಯ ಪಕ್ಷವಾಗಿರುವ ಸಮಾಜವಾದಿ ಪಕ್ಷವು ಕೈರಾನಾದಿಂದ ದರೋಡೆ ಆರೋಪಕ್ಕೆ ಗುರಿಯಾಗಿರುವ ನಹಿದ್ ಹಸನ್ ಅವರನ್ನು ಕಣಕ್ಕಿಳಿಸಿದೆ. ಸುಪ್ರೀಂಕೋರ್ಟ್ ಈ ಮೊದಲು ನೀಡಿರುವ ನಿರ್ದೇಶನದ ಪ್ರಕಾರ 48 ಗಂಟೆಗಳ ಒಳಗೆ ಅವರ ರಾಜಕೀಯ ಪಕ್ಷ ಅಪರಾಧ ಹಿನ್ನೆಲೆ ಹೊಂದಿರುವ ತನ್ನ ಅಭ್ಯರ್ಥಿಯ ಎಲ್ಲಾ ದಾಖಲೆಗಳನ್ನು ಎಲೆಕ್ಟ್ರಾನಿಕ್, ಮುದ್ರಣ ಅಥವಾ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸಬೇಕು. ಆದರೆ ಸಮಾಜವಾದಿ ಪಕ್ಷ ಅದನ್ನು ಪಾಲಿಸಿಲ್ಲ ಎಂದು ಅರ್ಜಿದಾರರು ದೂರಿದ್ದಾರೆ.
ರಾಜಕೀಯ ಪಕ್ಷಗಳು ಭಯಾನಕ ಅಪರಾಧಿಗಳಿಗೆ ಟಿಕೆಟ್ ನೀಡುತ್ತಿವೆ. ಇದರಿಂದ, ಮತದಾರರು ತಮ್ಮ ಮತವನ್ನು ಮುಕ್ತವಾಗಿ ಮತ್ತು ನ್ಯಾಯಯುತವಾಗಿ ಚಲಾಯಿಸಲು ಕಷ್ಟವಾಗುತ್ತಿದೆ. ಇದು ಸಂವಿಧಾನದ ಕಲಂ 19 ರ ಮೂಲಭೂತ ಹಕ್ಕು ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಚುನಾವಣಾ ಪ್ರಕ್ರಿಯೆಯಲ್ಲಿಯೇ ಅವರು ಅಕ್ರಮವಾಗಿ ಹಣ ಖರ್ಚು ಮಾಡಿ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತಾರೆ. ಮತದಾರರು ಅಥವಾ ಪ್ರತಿಸ್ಪರ್ಧಿ ಅಭ್ಯರ್ಥಿಗಳನ್ನು ಬೆದರಿಸುತ್ತಾರೆ.
ಶಾಸಕರಾದ ನಂತರ ನಮ್ಮ ದುರ್ಬಲ ನಿಯಮಾವಳಿಯಲ್ಲಿ ಸರ್ಕಾರಿ ಅಧಿಕಾರಿಗಳನ್ನು ಭ್ರಷ್ಟಗೊಳಿಸುವ ಹಾಗೂ ತಮ್ಮ ಮತ್ತು ಅವರ ಸಂಸ್ಥೆಯ ಪರವಾಗಿ ಕೆಲಸ ಮಾಡಿಸಿಕೊಳ್ಳಲು ಪ್ರಭಾವ ಬೀರುವಲ್ಲಿ ಯಶಸ್ವಿಯಾಗುತ್ತಾರೆ. ಕೆಲವರು ಮಂತ್ರಿಗಳಾಗಿ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತಾರೆ ಎಂದು ಅರ್ಜಿದಾರರು ಆತಂಕ ವ್ಯಕ್ತ ಪಡಿಸಿದ್ದಾರೆ.
ಕ್ರಿಮಿನಲ್ ಪೂರ್ವಾಪರಗಳನ್ನು ಹೊಂದಿರುವ ಶಾಸಕರು ನ್ಯಾಯದ ಆಡಳಿತವನ್ನು ಬುಡಮೇಲು ಮಾಡಲು ಪ್ರಯತ್ನಿಸುತ್ತಾರೆ ಮತ್ತು ತಮ್ಮ ವಿರುದ್ಧದ ಪ್ರಕರಣಗಳನ್ನು ಮುಕ್ತಾಯಗೊಳಿಸಿಕೊಳ್ಳುತ್ತಾರೆ ಅಥವಾ ಪ್ರಕರಣಗಳ ವಿಲೇವಾರಿಯಲ್ಲಿ ದೀರ್ಘ ವಿಳಂಬ ಮತ್ತು ಕಡಿಮೆ ಶಿಕ್ಷೆಯ ಪ್ರಮಾಣವು ಅವರ ಪ್ರಭಾವಕ್ಕೆ ಸಾಕ್ಷಿಯಾಗಿದೆ ಎಂದು ವಿವರಿಸಿದ್ದಾರೆ.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy