ಬೆಂಗಳೂರು ಸೆಪ್ಟಂಬರ್ 21: ಹೆಚ್ಚುತ್ತಿರುವ ಪರಿಸರ ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ 15 ವರ್ಷಕ್ಕಿಂತಲೂ ಹಳೆಯದಾದ 80 ಲಕ್ಷ ಹಳೆಯ ವಾಹನಗಳನ್ನು ಸಂಚಾರಕ್ಕೆ ಅನರ್ಹಗೊಳಿಸಲು ಮುಂದಾಗಿದೆ. ಈ ಸಂಬಂಧ ‘ವಾಹನ ಗುಜರಿ ನೀತಿ- 2021’ ಅಳವಡಿಸಿಕೊಳ್ಳಲು ಮುಂದಾಗಿದೆ.
ಇದು ಜಾರಿಯಾದರೆ ವಾಹನಗಳ ಮಾಲೀಕರು ವಾಹನಗಳನ್ನು ಗುಜರಿಗೆ ನೀಡಿ ಪ್ರಮಾಣ ಪತ್ರ ಪಡೆಯಬೇಕು. ಅದನ್ನು ಹೊಸ ವಾಹನಗಳಿಗೆ ಖರೀದಿ ವೇಳೆ ಸಲ್ಲಿಸಿದರೆ ಮೋಟಾರು ವಾಹನ ತೆರಿಗೆಯಲ್ಲಿ ರಿಯಾಯಿತಿ ಪಡೆಯಬಹುದಾಗಿದೆ.
ರಾಜ್ಯದಲ್ಲಿ ನೋಂದಾಯಿತ 2.8 ಕೋಟಿ ವಾಹನಗಳಲ್ಲಿ 15 ವರ್ಷಕ್ಕಿಂತಲೂ ಹೆಚ್ಚು ಹಳೆಯದಾದ 80 ಲಕ್ಷಕ್ಕೂ ಅಧಿಕ ವಾಹನಗಳು ಇವೆ ಎಂದು ಅಂದಾಜಿಸಲಾಗಿದೆ. ಸಾರಿಗೆ ಇಲಾಖೆಯ ಪ್ರಕಾರ, ರಾಜಧಾನಿ ಬೆಂಗಳೂರಿನಲ್ಲೇ ಒಂದು ಕೋಟಿ ವಾಹನಗಳಿವೆ. ಈ ವರ್ಷದ ಮಾರ್ಚ್ ಮಾಸಾಂತ್ಯಕ್ಕೆ 29 ಲಕ್ಷ ವಾಹನಗಳು 15 ವರ್ಷಗಳ ಮಿತಿಯನ್ನು ದಾಟಿರುವುದು ಪತ್ತೆ ಆಗಿದೆ. ಹೆಚ್ಚಿನ ಮಾಲಿನ್ಯಕಾರಕವಾಗಿರುವ ಎರಡು ಸ್ಟ್ರೋಕ್ ಆಟೋರಿಕ್ಷಾಗಳು ಬೆಂಗಳೂರಲ್ಲಿ ಸಂಚಾರ ಸೇವೆ ನೀಡುತ್ತಿವೆ ಎಂದು ಇಲಾಖೆ ತಿಳಿಸಿದೆ.
ಕೇಂದ್ರ ಗುಜರಿ ನೀತಿಯು ಹಳೆಯದಾದ ಹಾಗೂ ಸಂಚಾರಕ್ಕೆ ಯೋಗ್ಯವಲ್ಲದ ವಾಹನಗಳನ್ನು ಹಂತ ಹಂತವಾಗಿ ಅನರ್ಹಗೊಳಿಸಲು ಮತ್ತು ಹಳೆಯ ವಾಹನಗಳನ್ನು ಪರಿಸರ ಸ್ನೇಹಿ ರೀತಿಯಲ್ಲಿ ಮರುಬಳಕೆ ಮಾಡಲು ಉತ್ತೇಜಿಸುತ್ತದೆ. ಹೀಗಾಗಿ ಈ ನೀತಿಯನ್ನು ರಾಜ್ಯ ಸಾರಿಗೆ ಇಲಾಖೆಯು ಸಚಿವ ಸಂಪುಟದ ಮುಂದೆ ಅನುಮೋದನೆಗಾಗಿ ಪ್ರಸ್ತಾಪಿಸಲು ನಿರ್ಧರಿಸಿದೆ. ಈಗಾಗಲೇ ದೇಶದ ಗುಜರಾತ್, ಬಿಹಾರ ಮತ್ತು ಅಸ್ಸಾಂಗಳಲ್ಲಿ ಈ ನೀತಿ ಜಾರಿಯಾಗಿದೆ.
“ಕೇಂದ್ರ ಇದೇ ನೀತಿಯಡಿ 20 ವರ್ಷಕ್ಕಿಂತ ಹಳೆಯದಾದ ಖಾಸಗಿ ವಾಹನಗಳು ಹಾಗೂ 15 ವರ್ಷಕ್ಕಿಂತ ಹಳೆಯದಾದ ವಾಣಿಜ್ಯ ಬಳಕೆಯ ವಾಹನಗಳ ನೋಂದಣಿ ರದ್ದುಪಡಿಸಬೇಕೆಂದು ಸೂಚಿಸುತ್ತದೆ. ಅದೇ ರೀತಿ ಕರ್ನಾಟಕದ ಗುಜರಿ ನೀತಿಯು 15 ವರ್ಷಕ್ಕಿಂತ ಮೇಲ್ಪಟ್ಟ ಖಾಸಗಿ ವಾಹನಕ್ಕೆ ಸಂಬಂಧಿಸಿದೆ. ನಿಯಮಗಳ ಅನ್ವಯ, ನೀತಿ ಜಾರಿ ಆಯಾ ರಾಜ್ಯಗಳಿಗೆ ಸಂಬಂಧಿಸಿದೆ. ವಾಣಿಜ್ಯ ವಾಹನಗಳು ಇದೇ ವ್ಯಾಪ್ತಿಗೆ ಬರುತ್ತವೆ,” ಎಂದು ಸಾರಿಗೆ ಆಯುಕ್ತ ಟಿಎಚ್‌ಎಂ ಕುಮಾರ್ ಮಾಹಿತಿ ನೀಡಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


