ಬೆಂಗಳೂರು: ರಾಜ್ಯದ ಗಡಿಗಳನ್ನು ಸಂಪೂರ್ಣವಾಗಿ ತಪಾಸಣೆಗೆ ಒಳಪಡಿಸುವುದು, 16 ದಿನಗಳ ಹಿಂದೆ ಕೇರಳದಿಂದ ಬಂದ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಆರ್ ಟಿ ಸಿಪಿಆರ್ ಪರೀಕ್ಷೆ ಮಾಡಿಸುವುದು ಹಾಗೂ ಹಾಸ್ಟೆಲ್ ಗಳಲ್ಲಿ ವಾಸಿಸುತ್ತಿರುವ ವಿದ್ಯಾರ್ಥಿಗಳಿಗೆ ನೆಗಟಿವ್ ರಿಪೋರ್ಟ್ ಬಂದ ನಂತರದ 7 ನೇ ದಿನಕ್ಕೆ ಮತ್ತೊಮ್ಮೆ ಆರ್ ಟಿಸಿಪಿಆರ್ ಪರೀಕ್ಷೆ ಮಾಡಿಸಲು ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇಂದು ತಮ್ಮ ಆರ್.ಟಿ.ನಗರದ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇರಳ ರಾಜ್ಯದಿಂದ ಬರುವವರಲ್ಲಿ ಸೋಂಕು ಹರಡುತ್ತಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿದೆ. ಕೇರಳದಿಂದ ಬಂದಿರುವ ಅರೆವೈದ್ಯಕೀಯ ಸಿಬ್ಬಂದಿಗಳಲ್ಲಿ ಸೋಂಕು ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಕೇರಳ ಗಡಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಮಡಿಕೇರಿ, ಚಾಮರಾಜನಗರ, ಮೈಸೂರು ಗಡಿಗಳಲ್ಲಿ ಕಟ್ಟುನಿಟ್ಟಿನ ಕ್ರಮ ವಹಿಸಲಾಗುವುದು ಎಂದರು.
ಆರ್ ಟಿಸಿಪಿಆರ್ ಪರೀಕ್ಷೆ ನಡೆಸಿ ನೆಗೆಟಿವ್ ರಿಪೋರ್ಟ್ ಬಂದರೆ ಮಾತ್ರ ರಾಜ್ಯದೊಳಗೆ ಪ್ರವೇಶಕ್ಕೆ ಅನುಮತಿ ನೀಡಲಾಗುವುದು. ಕೇರಳ ರಾಜ್ಯದಿಂದ ಬರುವವರು ಎರಡೂ ಡೋಸನ್ನು ಪಡೆದಿರಬೇಕು.. ಆರ್ ಟಿ ಸಿಪಿಅರ್ ಪರೀಕ್ಷೆಗಳನ್ನು ಹೆಚ್ಚಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಸೌತ್ ಆಫ್ರಿಕಾ, ಹಾಂಕಾಂಗ್, ಬೊಟ್ಸ್ವಾನಾ ದೇಶಗಳಲ್ಲಿ ಕೋವಿಡ್ ನ ಹೊಸ ಪ್ರಬೇಧ ಕಾಣಿಸಿಕೊಂಡಿದೆ. ಈ ಮೂರು ದೇಶಗಳಲ್ಲಿ ಹರಡುತ್ತಿರುವ ಸೋಂಕಿನ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. ಪ್ರಧಾನಿಯವರು ಕೋವಿಡ್ ರೂಪಾಂತರಿ ನಿಯಂತ್ರಣಕ್ಕೆ ಹಲವಾರು ನಿರ್ದೇಶನಗಳನ್ನು ನೀಡಿದ್ದಾರೆ ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ಇದುವರೆಗೂ ಹೊಸ ಪ್ರಬೇಧದ ಸೋಂಕಿನ ಪ್ರಕರಣ ಕಂಡುಬಂದಿಲ್ಲ. ಧಾರವಾಡ , ಮೈಸೂರು, ಬೆಂಗಳೂರಿನ ವಿದ್ಯಾರ್ಥಿ ಹಾಸ್ಟೆಲ್ ಗಳಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದ್ದು, ಹಾಸ್ಟೆಲ್ ಗಳನ್ನು ಕಂಟೈನ್ಮೆಂಟ್ ಮಾಡಿ ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700