ಕೊರಟಗೆರೆ: ಮುಸ್ಲಿಮರ ಹಬ್ಬಗಳಲ್ಲಿ ಪವಿತ್ರವಾದ ಹಬ್ಬಗಳಲ್ಲಿ ರಂಜಾನ್ ಹಬ್ಬವು ಮೊದಲನೆಯದು. ಈ ಹಬ್ಬವು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಪ್ರವಾದಿ ಮಹಮ್ಮದ್ ಈ ತಿಂಗಳು ಪವಿತ್ರ ಕುರಾನ್ ನ್ನು ಬಹಿರಂಗ ಪಡಿಸಿದರು ಎಂದು ನಂಬಲಾಗಿದೆ. ಪವಿತ್ರ ರಂಜಾನ್ ನಲ್ಲಿ ಒಂದು ತಿಂಗಳ ಉಪವಾಸ ಮಾಡುವ ಮೂಲಕ ನಮ್ಮ ಸಂಬಂಧ ದೇವರ ಜೊತೆ ಮತ್ತಷ್ಟು ಗಟ್ಟಿಯಾಗುತ್ತೆ ದೇವರಿಗೆ ಹತ್ತಿರವಾಗಲು ಸಹಾಯ ಮಾಡುತ್ತೆ ಎಂದು ಮುಸ್ಲಿಮರು ನಂಬುತ್ತಾರೆ.
ಈ ತಿಂಗಳಲ್ಲಿ ಉಪವಾಸ ಮಾಡುದ್ರೆ ಕಷ್ಟ ಸಂಕಷ್ಟಗಳು ಕಡಿಮೆಯಾಗುತ್ತವೆ ಎಂದು ಕೆಲವರು ನಂಬುತ್ತಾರೆ. ಈ ತಿಂಗಳಲ್ಲಿ ಮುಸ್ಲಿಮರು ಬಡವರಿಗೆ ದಾನ-ಧರ್ಮ ಮಾಡುವುದು ಹಾಗೂ ಹಸಿದವರಿಗೆ ಆಹಾರ ನೀಡುವಂತ ಪುಣ್ಯ ಕಾರ್ಯಗಳನ್ನು ಮಾಡುತ್ತಾರೆ.
ರಂಜಾನ್ ತಿಂಗಳಲ್ಲಿ ರೋಜಾ ಅಥವಾ ಉಪವಾಸಕ್ಕೆ ಅದರದೇ ಆದ ಮಹತ್ವವಿದೆ. ಸೂರ್ಯೋದಯಕ್ಕೆ ಮುಂಚಿನ ತಿಂಡಿಯನ್ನು ಸೋಹರ್ ಎಂದು ಕರೆಯಲಾಗುತ್ತದೆ. ಸೂರ್ಯೋಸ್ತದ ನಂತರ ಉಪವಾಸವನ್ನು ಮುಕ್ತಾಯಗೊಳಿಸುವ ಪ್ರಕ್ರಿಯೆಯನ್ನು ಇಫ್ತಾರ್ ಎಂದು ಕರೆಯಲಾಗುತ್ತದೆ.
ಇನ್ನು ರಂಜಾನ್ ಸಮಯದಲ್ಲಿ ಕೇವಲ ದೇಹಕ್ಕೆ ಮಾತ್ರವಲ್ಲ, ಮನಸ್ಸಿಗೂ ಉಪವಾಸ ಮಾಡಿಸಲಾಗುತ್ತದೆ. ಮುಸ್ಲಿಮರು ಉಪವಾಸದ ವೇಳೆ ಸಿಗರೇಟ್, ಮದ್ಯ, ತಂಬಾಕು ಸೇವನೆ, ಲೈಂಗಿಕ ಸಂಬಂಧವನ್ನು ಬೆಳೆಸುವುದನ್ನೂ ಕೂಡ ತಪ್ಪಿಸುತ್ತಾರೆ.
ಏಕೆಂದರೆ, ಉಪವಾಸದ ಸಮಯದಲ್ಲಿ ಇಂಥ ಚಟುವಟಿಕೆಗಳನ್ನು ಪಾಪ ಎಂದು ಪರಿಗಣಿಸಲಾಗುತ್ತದೆ. ರಂಜಾನ್ ತಿಂಗಳಲ್ಲಿ ಮುಸ್ಲಿಮರು ತಮ್ಮನ್ನು ಅಧ್ಯಾತ್ಮ ಪ್ರವೃತ್ತಿಗೆ ಅರ್ಪಿಸಿಕೊಳ್ಳುತ್ತಾರೆ.
ರಂಜಾನ್ ಹಬ್ಬವು ಚಂದ್ರನನ್ನು ನೋಡಿದ ನಂತರವೇ ಪ್ರಾರಂಭವಾಗುತ್ತದೆ. ಉಪವಾಸದ ಅಂತ್ಯವನ್ನು ಸೂಚಿಸುತ್ತದೆ. ಪ್ರವಾದಿ ಮಹಮ್ಮದ್ ಅವರ ಬೋಧನೆಗಳ ದಾಖಲೆಯಾದ ಸುನ್ನತ್ ಅನ್ನು ಅನುಸರಿಸಿ ಹಬ್ಬದಂದು ಮುಸ್ಲಿಮರು ಮುಂಜಾನೆ ಬೇಗನೆ ಎದ್ದು ಸ್ನಾನ ಮಾಡಿ ತಮ್ಮ ದೈನಂದಿನ ಪ್ರಾರ್ಥನೆಗಳು ಸಲ್ಲಿಸಿ, ಹೊಸ ಬಟ್ಟೆ ತೊಟ್ಟು ಸುಗಂಧ ದ್ರವ್ಯ ಧರಿಸುತ್ತಾರೆ. ಬಳಿಕ ಹಬ್ಬದ ಪ್ರಾರ್ಥನೆಗೆ ಹೋಗುವ ಮುನ್ನ ಮನೆಯಲ್ಲಿ ತಯಾರಿಸಿದ ಸಿಹಿ ತಿಂಡಿಯನ್ನು ಸೇವಿಸುತ್ತಾರೆ. ಸಮಾಜದ ಹಿರಿಯರು,ಯುವಕರು,ಚಿಕ್ಕ ಮಕ್ಕಳು ಸೇರಿದಂತೆ ಈದ್ಗಾ ಮಸೀದಿಯ ಬಳಿ ಎಲ್ಲಾ ಮುಸ್ಲಿಮರು ಒಟ್ಟಿಗೆ ಸೇರಿ ಹಬ್ಬದ ವಿಶೇಷ ಪ್ರಾರ್ಥನೆಗಳನ್ನು ಮಾಡುತ್ತಾರೆ. ಆದರೆ ಹೆಣ್ಣು ಮಕ್ಕಳು ಮಹಿಳೆಯರು ಮನೆಯಲ್ಲೇ ಹಬ್ಬದ ನಮಾಜ್ ಮಾಡುತ್ತಾರೆ.
ರಂಜಾನ್ ಎಂದರೆ, ಮುಸಲ್ಮಾನರಿಗೆ ಪವಿತ್ರ ಹಬ್ಬ. ಈ ಹಬ್ಬದಲ್ಲಿ ಉಪವಾಸ ಆಚರಣೆಗೆ ಅತ್ಯಂತ ಮಹತ್ವದ ಸ್ಥಾನವಿದೆ ಎಂದು ಮುಸ್ಲಿಂ ಸಮಾಜದ ಮುಖಂಡ ಕಲೀವುಲ್ಲಾ ತಿಳಿಸಿದರು.
ಪಟ್ಟಣದ ಪ್ರಧಾನರಸ್ತೆಯಲ್ಲಿರುವ ದಿನಸಿ ಅಂಗಡಿ ಮತ್ತು ಬಟ್ಟೆ ಅಂಗಡಿಗಳಲ್ಲಿ ಯುಗಾದಿ ಹಬ್ಬ ಮತ್ತು ರಂಜಾನ್ ಹಬ್ಬದ ಮುನ್ನಾ ದಿನವಾದ ಸೋಮವಾರದಂದು ಅಪಾರ ಪ್ರಮಾಣದ ಜನಸ್ತೋಮ, ಹಬ್ಬಕ್ಕೆ ಬೇಕಾದ ಆಹಾರ ಪದಾರ್ಥಗಳನ್ನು ಹಾಗೂ ಹೊಸ ಬಟ್ಟೆ ಖರೀದಿಯಲ್ಲಿ ಜನ ತೊಡಗಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


