ತುಮಕೂರು: ಜಿಲ್ಲಾಧಿಕಾರಿಗಳ ಕಚೇರಿ ಸಮೀಪವಿರುವ ಶತಮಾನ ಕಂಡಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸರಿಯಾದ ಮೂಲಭೂತ ಸೌಕರ್ಯ ಕಲ್ಪಿಸಲು ಆಗ್ರಹಿಸಿ AIDSO ಜಿಲ್ಲಾ ಸಮಿತಿ ನಿಯೋಗವು ಎನ್.ಎಸ್.ಎ.ಪಿ. ವಿಭಾಗದ ಸಹ ನಿರ್ಧೇಶಕರು ಸವಿತಾರವರ ಮೂಲಕ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.
ಶಾಲೆಗೆ ಸರಿಯಾದ ಕಾಂಪೌಂಡ್ ಇಲ್ಲದೆ ಅನೈತಿಕ ಕೃತ್ಯಗಳ ತಾಣವಾಗಿದೆ, ಸರಿಯಾದ ಕಟ್ಟಡ ಹಾಗೂ ಮೇಲ್ಛಾವಣಿ ವ್ಯವಸ್ಥೆ ಇಲ್ಲ, ಶೌಚಾಲಯಗಳು ಒಡೆದು ಹೋಗಿವೆ. ಶಾಲಾ ಆವರಣದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಕಲ್ಲುಗಳು ಮತ್ತು ಕಸದ ಗುಂಡಿಗಳಿರುವುದು ಪತ್ರಿಕೆಗಳಲ್ಲಿ ವರದಿ ಆಗಿರುತ್ತದೆ.
ಶೈಕ್ಷಣಿಕ ನಗರಿ ತುಮಕೂರು ನಗರದ ಹೃದಯ ಭಾಗದ ಡಿಸಿ ಕಚೇರಿ ಹತ್ತಿರದಲ್ಲೇ ಇರುವ ಶತಮಾನದ ಇತಿಹಾಸ ಬರೆದಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇಂದು ಕನಿಷ್ಟ ಮೂಲಭೂತ ಸೌಕರ್ಯಗಳ ಕೊರತೆಯಿಂದ ನಲುಗುತ್ತಿದೆ ಮತ್ತು ನಗರದಲ್ಲೇ ಇಂತಹ ದುಸ್ಥಿತಿಯಲ್ಲಿರುವ ಶಾಲೆಗಳು ಬಹಳಷ್ಟಿರುವುದು ಶೋಚನೀಯ ಸಂಗತಿ. ಇನ್ನು ಪತ್ರಿಕೆಯಲ್ಲಿ ವರದಿಯಾದ ಹಿನ್ನೆಲೆಯಲ್ಲಿ ಈಗಾಗಲೇ ತುಮಕೂರು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಗೆ ಬೇಟಿ ಮಾಡಿರುತ್ತಾರೆ ಆದರೆ ಇದು ಕೇವಲ ಬೇಟಿಗೆ ಸೀಮಿತವಾಗದೆ ಈ ಕೂಡಲೆ ಶಾಲೆಗೆ ಮೂಲಭೂತ ಸೌಕರ್ಯ ಕಲ್ಪಿಸಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಪೂರಕವಾದ ವಾತಾವರಣ ನಿರ್ಮಿಸಬೇಕೆಂದು ಎಐಡಿಎಸ್ ಓ ತುಮಕೂರು ಜಿಲ್ಲಾ ಸಮಿತಿ ಆಗ್ರಹಿಸಿದೆ.
AIDSO ಜಿಲ್ಲಾ ಕಾರ್ಯದರ್ಶಿ ಲಕ್ಕಪ್ಪ ಸಿ.ಬಿ. , ಜಿಲ್ಲಾ ಸೆಕ್ರಟೆರಿಯಟ್ ಸದಸ್ಯರಾದ ಭರತ್. ಎಸ್, ಸಚಿನ್, ಹಾಗೂ ಕೌನ್ಸಿಲ್ ಸದಸ್ಯರಾದ ದಂಡಪ್ಪ ಉಪಸ್ಥಿತರಿದ್ದರು.
ವರದಿ: ಲಕ್ಕಪ್ಪ ಸಿ.ಬಿ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296