ಗುಬ್ಬಿ: ತಾಲ್ಲೂಕಿನ ಜಿ.ಹೊಸಹಳ್ಳಿ ಗ್ರಾಮದ ದಲಿತ ಕಾಲೋನಿಯಲ್ಲಿ ಕೇಂದ್ರ ಸರ್ಕಾರದ ವತಿಯಿಂದ ಕೈಗೊಂಡಿರುವ ಸಿ.ಸಿ.ರಸ್ತೆ ಅಭಿವೃದ್ಧಿ ಕಾಮಗಾರಿಯಲ್ಲಿ ದಲಿತ ಕಾಲೋನಿಯ ಸಂಪರ್ಕದ ರಸ್ತೆಯಲ್ಲಿ ಕಾಮಗಾರಿ ಮಾಡದೇ ತಾರತಮ್ಯ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಇಂದು ಜಿ. ಹೊಸಹಳ್ಳಿಯಲ್ಲಿ ಪ್ರತಿಭಟನೆ ನಡೆಸಿದರು.
ಈ ಕುರಿತು ಪ್ರತಿಕ್ರಿಯೆ ನೀಡಿದ ಗ್ರಾಮಸ್ಥ ಮುರುಳಿ, ಒಟ್ಟು 900 ಮೀಟರ್ ನಷ್ಟು ಗ್ರಾಮದಲ್ಲಿ ರಸ್ತೆ ಕಾಮಗಾರಿ ನಡೆಸಲಾಗುತ್ತಿದ್ದು, ದಲಿತ ಕಾಲೋನಿ ಸಂಪರ್ಕ ದ 200 ಮೀಟರ್ ರಸ್ತೆ ಕಾಮಗಾರಿ ನಡಸದೆ ಉದ್ದೇಶ ಪೂರ್ವಕವಾಗಿ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ಮುಂದುವರಿದ ಸಮುದಾಯದವರ ಮನೆಯ ಸಂಪರ್ಕಕ್ಕೆ ರಸ್ತೆ ಕಾಮಗಾರಿ ಮಾಡಿರುವ ಗುತ್ತಿಗೆದಾರರು ಮತ್ತು ಅಧಿಕಾರಿಗಳು ಕಾಲೋನಿ ರಸ್ತೆಯ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದರು.
ಅರ್ಚಕ ಸೋಮಶೇಖರ್ ಮಾತನಾಡಿ, ಜಿ.ಹೊಸಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ದಲಿತ ಕಾಲೋನಿ ಅಭಿವೃದ್ಧಿಗೆ ಸಮರ್ಪಕವಾಗಿ ಅನುದಾನ ನೀಡುತ್ತಿಲ್ಲ. ಗ್ರಾಮದ ಸಮಸ್ಯೆ ಬಗ್ಗೆ ಗ್ರಾಮ ಪಂಚಾಯ್ತಿ ಅಧಿಕಾರಿಗಳಿಗೆ ದೂರು ನೀಡಿದರೆ ಪ್ರಯೋಜನವಾಗುತ್ತಿಲ್ಲ. ಈಗ ನಡೆಯುತ್ತಿರುವ ರಸ್ತೆ ಕಾಮಗಾರಿಯಲ್ಲೂ ಸಹ ತಾರತಮ್ಯ ಮಾಡುತ್ತಿರುವ ಅಧಿಕಾರಿಗಳು ಉದ್ದೇಶ ಪೂರ್‍ವಕವಾಗಿ ಸಿ.ಸಿ.ರಸ್ತೆ ಕಾಮಗಾರಿ ನಡೆಸದೆ ಬಿಟ್ಟಿದ್ದು, ಗುತ್ತಿಗೆದಾರರು ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಬೇಕು ಎಂದು ಅವರು ಒತ್ತಾಯಿಸಿದರು.
ರಸ್ತೆ ಕಾಮಗಾರಿ ನಡೆಸದೆ ನಿರ್ಲಕ್ಷ್ಯ ಮುಂದುವರಿಸಿದರೆ, ಈಗ ನಡೆಸಿರುವ ಕಾಮಗಾರಿ ಸ್ಥಳದಲ್ಲಿ ಗುಂಡಿಯನ್ನು ತೆಗೆದು ರಸ್ತೆ ತಡೆ ನಡೆಸ ಬೇಕಾಗುತ್ತದೆ ಎಂದು ಇಲ್ಲಿನ ಗ್ರಾಮಸ್ಥರು ಒಕ್ಕೊರಳಿನಿಂದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ವರದಿ: ಡಿ.ಮಂಜುನಾಥ್, ಗುಬ್ಬಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy