ಶಿರಾ : ಗ್ರಾಮಗಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿ ಎಂದು ನಂಬಿದ್ದ ಮಹಾತ್ಮ ಗಾಂಧೀಜಿಯವರು ಗ್ರಾಮ ಸ್ವರಾಜ್ಯದ ಕಲ್ಪನೆಗೆ ಹೆಚ್ಚು ಮಹತ್ವವನ್ನು ನೀಡಿದ್ದರು. ಗ್ರಾಮಗಳಲ್ಲಿ ನಡೆಯುವ ಗ್ರಾಮ ಸಭೆಗಳು ಇಂದಿಗೂ ಗ್ರಾಮ ಸ್ವರಾಜ್ಯದ ಜೀವಾಳವಾಗಿ ಹೊರಹೊಮ್ಮಿವೆ. ಗ್ರಾಮ ನೈರ್ಮಲ್ಯ, ಆರೋಗ್ಯ, ಶಿಕ್ಷಣ, ನೀರು ಸರಬರಾಜು, ವಿದ್ಯುತ್, ರಸ್ತೆಗಳು ಮೊದಲಾದ ಮೂಲಭೂತ ಸೌಕರ್ಯಗಳನ್ನು ಪ್ರತಿಯೊಂದು ಗ್ರಾಮಗಳು ಸಮರ್ಪಕವಾಗಿ ಬಳಸಿಕೊಂಡಾಗ ಮಾತ್ರ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸು ನನಸಾಗುತ್ತದೆ. ಈ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಕಾಲ ಕಾಲಕ್ಕೆ ಜನರಿಗೆ ತಲುಪಿಸಲು ಸುಸಜ್ಜಿತ ಗ್ರಾಮ ಪಂಚಾಯಿತಿ ಕಟ್ಟಡದ ಅವಶ್ಯಕತೆ ಇದ್ದೂ, ಆ ನಿಟ್ಟಿನಲ್ಲಿ ಸಾರ್ವಜನಿಕರನ್ನ ಕೈ ಬೀಸಿ ಕರೆದು ಸಕಲ ಸಮಸ್ಯೆಗಳಿಗೆ ಸ್ಥಳೀಯವಾಗಿ ಪರಿಹಾರ ಸಿಗುವಂತೆ ಆತ್ಮವಿಶ್ವಾಸ ಹುಟ್ಟಿಸುವ ರೀತಿಯಲ್ಲಿ ಇಡೀ ಜಿಲ್ಲೆಗೆ ಮಾದರಿಯೆಂಬಂತೆ ರತ್ನಸಂದ್ರ ಗ್ರಾಮ ಪಂಚಾಯಿತಿ ಕಟ್ಟಡ ಹೈ-ಟೆಕ್ ವಿನ್ಯಾಸದಲ್ಲಿ ನಿರ್ಮಾಣಗೊಂಡಿದ್ದು, ಇದೇ ಏ.16 ರಂದು ಉದ್ಘಾಟನೆಗೆ ಸಜ್ಜುಗೊಂಡಿದೆ.
ಕಿರಿದಾದ ಕಟ್ಟಡದಲ್ಲಿ ಈ ಹಿಂದೆ ಕೆಲಸ ನಿರ್ವಹಿಸುತ್ತಿದ್ದ ಕಾರಣ ಗ್ರಾಮ ಪಂಚಾಯಿತಿ ಹಂತದ ಜನಪ್ರತಿನಿಧಿಗಳು, ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಸಿಬ್ಬಂದಿ ನೂತನ ಗ್ರಾಮ ಪಂಚಾಯಿತಿ ಕಟ್ಟಡದ ನಿರ್ಮಾಣಕ್ಕೆ ಮುಂದಾಗಿ, ಎಲ್ಲರ ಸಹಕಾರ ಹಾಗೂ ವಿವಿಧ ಅನುದಾನಗಳ ನೆರವಿನಿಂದ ಇಂದು ಗ್ರಾಮ ಪಂಚಾಯಿತಿ ಕಟ್ಟಡ ವಿನೂತನ ಶೈಲಿಯಲ್ಲಿ, ಮಿನಿ ವಿಧಾನ ಸೌಧದ ರೀತಿ ಜಿಲ್ಲೆಯಲ್ಲಿಯೇ ಮಾದರಿಯಾಗಿ ನೋಡುಗರ ಕಣ್ಮನ ಸೆಳೆಯುವಂತೆ ತಲೆ ಎತ್ತಿ ನಿಂತಿದೆ.
ನರೇಗಾ ಯೋಜನೆ ಸದ್ಭಳಕೆ:
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಪರಿಣಾಮಕಾರಿ ಅನುಷ್ಟಾನದಿಂದ ಇಂದು ಗ್ರಾಮಗಳು ಅಭಿವೃದ್ಧಿ ಕಡೆ ಸಾಗುತ್ತಿವೆ. ಗ್ರಾಮೀಣ ಭಾಗದ ಅಕುಶಲ ಕೂಲಿ ಕಾರ್ಮಿಕರಿಗೆ ಕೆಲಸ ಒದಗಿಸುವ ಜೊತೆ-ಜೊತೆಗೆ ಮಣ್ಣು-ನೀರು ಸಂರಕ್ಷಣಾ ಕಾಮಗಾರಿಗಳು, ಸರ್ಕಾರಿ ಶಾಲೆಗಳಿಗೆ ಕಾಂಪೌಂಡ್ ನಿರ್ಮಾಣ, ಆಟದ ಮೈದಾನ, ಶಾಲಾ ಶೌಚಾಲಯ ನಿರ್ಮಾಣ, ವೈಯಕ್ತಿಕ ಕಾಮಗಾರಿಗಳ ಅಭಿವೃದ್ಧಿ ಸೇರಿದಂತೆ ಗ್ರಾಮ ಪಂಚಾಯಿತಿ ಕಟ್ಟಡಗಳು ಸಹ ನಿರ್ಮಾವಾಗುತ್ತಿದ್ದು, ಗ್ರಾಮಗಳು ನರೇಗಾ ಯೋಜನೆಯಿಂದ ಅಭಿವೃದ್ಧಿ ಪಥದ ಕಡೆಗೆ ಸಾಗುತ್ತಿವೆ.
ನೂತನ ಗ್ರಾ.ಪಂ. ಕಟ್ಟಡ ನಿರ್ಮಾಣಕ್ಕೆ ಅನುದಾನ ಬಳಕೆ:
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, 15 ನೇ ಹಣಕಾಸು ಹಾಗೂ ಗ್ರಾಮ ಪಂಚಾಯಿತಿ ಸ್ವಂತ ಸಂಪನ್ಮೂಲ ಬಳಸಿಕೊಂಡು ಸುಮಾರು 75 ಲಕ್ಷ ರೂ. ಅನುದಾನದಲ್ಲಿ ಸುಂದರವಾಗಿ, ಸುಸಜ್ಜಿತ ರೀತಿಯಲ್ಲಿ, ಹೈ–ಟೆಕ್ ಸ್ಪರ್ಶ ನೀಡಿರುವ ಹಾಗೂ ಸಕಲ ಸೌಲಭ್ಯವುಳ್ಳ ಭವ್ಯವಾದ ಗ್ರಾಮ ಪಂಚಾಯಿತಿ ಕಟ್ಟಡ ನಿರ್ಮಾಣವಾಗಿದೆ.
ನೂತನ ಗ್ರಾ.ಪಂ. ಕಟ್ಟಡದ ಉದ್ಘಾಟನೆ:
ರತ್ನಸಂದ್ರ ಗ್ರಾ.ಪಂ. ನೂತನ ಕಟ್ಟಡವನ್ನು ಏ.16 ರಂದು ಬೆಳಿಗ್ಗೆ 10:30 ಗಂಟೆಗೆ ಗೃಹ ಸಚಿವರಾದ ಪರಮೇಶ್ವರ್ ಅವರು ಉದ್ಘಾಟಿಸಲಿದ್ದಾರೆ. ದೆಹಲಿ ವಿಶೇಷ ಪ್ರತಿನಿಧಿ ಡಾ.ಟಿ.ಬಿ.ಜಯಚಂದ್ರ ರವರು ಅಧ್ಯಕ್ಷತೆ ವಹಿಸುವರು. ರತ್ನಸಂದ್ರ ಗ್ರಾ.ಪಂ.ಅಧ್ಯಕ್ಷೆ ನಿಂಗಮ್ಮ ಶ್ರೀರಂಗಪ್ಪ ರವರ ಉಪಸ್ಥಿತಿಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾದ ಪ್ರಿಯಾಂಕ್ ಖರ್ಗೆ, ಸಹಕಾರ ಸಚಿವರಾದ ಕೆ.ಎನ್.ರಾಜಣ್ಣ, ಚಿತ್ರದುರ್ಗ ಸಂಸದರಾದ ಎಂ.ಗೋವಿಂದ ಕಾರಜೋಳ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನಿಯಮಿತ ಅಧ್ಯಕ್ಷರಾದ ಎಸ್.ಆರ್.ಶ್ರೀನಿವಾಸ್ , ವಿಧಾನ ಪರಿಷತ್ ಶಾಸಕರಾದ ಚಿದಾನಂದ್ ಎಂ.ಗೌಡ ರವರು, ಡಿ.ಟಿ.ಶ್ರೀನಿವಾಸ್ ರವರು, ಆರ್.ರಾಜೇಂದ್ರ ರವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಜಿ.ಪಂ.ಸಿಇಓ ಪ್ರಭು ಜಿ., ಐ.ಎ.ಎಸ್. ಹಾಗೂ ಜಿಲ್ಲಾಧಿಕಾರಿ ಶುಭಾಕಲ್ಯಾಣ್, ಐ.ಎ.ಎಸ್. ರವರು, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಶಿರಾ ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿಗಳಾದ ಅನುಪಮಾ ಹೆಚ್., ತಾ.ಪಂ.ಇಓ ಹರೀಶ್ ಆರ್., ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ(ರಿ), ಶಿರಾ. ಅಧ್ಯಕ್ಷರಾದ ನಾಗರಾಜು ಆರ್., ಶಿರಾ ತಾಲ್ಲೂಕು ಪಂಚಾಯಿತಿ ಯೋಜನಧಿಕಾರಿಗಳಾದ ರಂಗನಾಥ್ ಆರ್., ಶಿರಾ ಪಂರಾ. ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ನಾಗೇಂದ್ರಪ್ಪ, ತಾಲ್ಲೂಕು ಶಿರಾ ಪಂಚಾಯಿತಿ ಗ್ರಾಮೀಣ ಉದ್ಯೋಗದ ಸಹಾಯಕ ನಿರ್ದೇಶಕರಾದ ಕನಕಪ್ಪ ಹನುಮಪ್ಪ ಮೇಲಸಕ್ರಿ ಭಾಗವಹಿಸಲಿದ್ದಾರೆ.
ಸರ್ಕಾರಿ ವ್ಯವಸ್ಥೆಯಲ್ಲಿ ಜನಸ್ನೇಹಿಯಾಗಿ ಕೆಲಸ ಮಾಡಲು ಸರ್ಕಾರಿ ಕಟ್ಟಡಗಳು ಸುಸಜ್ಜಿತವಾಗಿರಬೇಕು, ಇದರಿಂದ ಸಾರ್ವಜನಿಕರಿಗೆ ಸರ್ಕಾರಿ ವ್ಯವಸ್ಥೆ ಬಗ್ಗೆ ಒಂದು ಗೌರವ ಮತ್ತು ಆತ್ಮವಿಶ್ವಾಸ ಬರುತ್ತದೆ. ಗ್ರಾಮೀಣ ಭಾಗದ ಅನೇಕ ಮೂಲ ಸೌಕರ್ಯಗಳು ನರೇಗಾ ಯೋಜನೆಯಡಿ ಇಂದು ನಿರ್ಮಾಣವಾಗುತ್ತಿವೆ. ಸಮಗ್ರ ಶಾಲೆಗಳ ಅಭಿವೃದ್ಧಿಯಿಂದ ಶಾಲೆಗಳಿಗೆ ಹೊಸ ಮೆರಗು ನೀಡಿದಂತಾಗಿದೆ. ಹಾಗೆಯೇ ನರೇಗಾ ಯೋಜನೆಯ ಅನುದಾನ ಬಳಸಿಕೊಂಡು ತಾಳಗುಂದ, ಯಲದಬಾಗಿ, ಮಾಗೋಡು, ಸೀಬಿ ಸೇರಿದಂತೆ ತಾವರೇಕೆರೆ ಗ್ರಾಮ ಪಂಚಾಯಿತಿ ಕಟ್ಟಡಗಳು ನಿರ್ಮಾಣವಾಗಿವೆ. ಅದೇ ರೀತಿ ರತ್ನಸಂದ್ರ ಗ್ರಾಮ ಪಂಚಾಯಿತಿ ಕಟ್ಟಡ ಸಹ ವಿಶೇಷವಾದ ವಿನ್ಯಾಸದಲ್ಲಿ ನಿರ್ಮಾಣಗೊಂಡಿದ್ದು, ಉದ್ಘಾಟನೆಗೆ ಸಿದ್ಧವಾಗಿದೆ. ಗ್ರಾಮ ಪಂಚಾಯಿತಿ ಕಟ್ಟಡ ನಿರ್ಮಾಣವನ್ನು ಪ್ರಥಮ ಆಧ್ಯತೆ ಮೇಲೆ ಕೈಗೆತ್ತಿಕೊಂಡು ನಿರಂತರವಾಗಿ ಪ್ರಗತಿ ಮೇಲ್ವೀಚಾರಣೆ ನಡೆಸಿ ನಿರ್ಮಾಣ ಕಾರ್ಯವನ್ನು ತುರ್ತಾಗಿ ಮುಗಿಸಿ ಕಟ್ಟಡಗಳನ್ನು ಲೋಕಾರ್ಪಣೆಗೊಳಿಸಲು ಕ್ರಮ ವಹಿಸಲಾಗಿದೆ. ಪ್ರಸ್ತುತ ಭೂಪಸಂದ್ರ, ಹಾಲೇನಹಳ್ಳಿ, ಚಿಕ್ಕನಹಳ್ಳಿ, ಹುಯಿಲ್ ದೊರೆ ಹಾಗೂ ಸೀಬಿ ಅಗ್ರಹಾರದ ನೂತನ ಗ್ರಾಮ ಪಂಚಾಯಿತಿ ಕಟ್ಟಡದ ಕಾಮಗಾರಿ ಪ್ರಗತಿಯಲ್ಲಿದೆ. ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಉತ್ತಮವಾದ ಕಟ್ಟಡಗಳಿರಬೇಕು, ಜನಸ್ನೇಹಿಯಾಗಿ, ಜನಗಳನ್ನ ಕೈ ಬೀಸಿ ಕರೆದು ಕೆಲಸ ಮಾಡಿಕೊಡುವ ಮುಕ್ತವಾದ ಹಾಗೂ ಸ್ವಚ್ಛವಾದ ವಾತವರಣ ಇರಬೇಕು ಎಂಬ ಸದಾಶಯದಿಂದ ಕೆಲಸಗಳನ್ನು ಮಾಡುತ್ತಿದ್ದೇವೆರೆಂದು ಶಿರಾ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹರೀಶ್ ಆರ್. ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW
————————————